ಸಾರ್ವತ್ರಿಕ ಮಾನವೀಯ ಮೌಲ್ಯಗಳ ಕುರಿತು ಕಾರ್ಯಾಗಾರ

ಸಾರ್ವತ್ರಿಕ ಮಾನವೀಯ ಮೌಲ್ಯಗಳ ಕುರಿತು ಕಾರ್ಯಾಗಾರ

ಸಾರ್ವತ್ರಿಕ ಮಾನವೀಯ ಮೌಲ್ಯಗಳ ಕುರಿತು ಕಾರ್ಯಾಗಾರ

ಕಲಬುರಗಿ: ಮದರ್ ತೆರೇಸಾ ಚಾರಿಟೇಬಲ್ ಟ್ರಸ್ಟ್‌ನಡಿ ನಡೆಯುತ್ತಿರುವ ಶಾಲಾ-ಕಾಲೇಜಿನ ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಾಗಿ ‘ಸಾರ್ವತ್ರಿಕ ಮಾನವೀಯ ಮೌಲ್ಯಗಳು’ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಅಮರೇಶ್ ಪಾಟೀಲ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಸಾರ್ವತ್ರಿಕ ಮಾನವೀಯ ಮೌಲ್ಯಗಳ ಮಹತ್ವದ ಕುರಿತು ಸುದೀರ್ಘವಾಗಿ ಉಪನ್ಯಾಸ ನೀಡಿದರು. ಮಾನವೀಯ ಮೌಲ್ಯಗಳು ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖವಾಗಿದ್ದು, ಮೊದಲು ನಮ್ಮನ್ನು ನಾವು ಅರ್ಥಮಾಡಿಕೊಂಡಾಗ ಮಾತ್ರ ಇತರರನ್ನು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಅವರು ತಿಳಿಸಿದರು.

ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರು ಹಾಗೂ ಕುಟುಂಬದ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬ ಮಗುವಿಗೂ ಸಮಾನ ಆದ್ಯತೆ ನೀಡಿ, ಅವರ ಮಾನಸಿಕ, ಬೌದ್ಧಿಕ, ವೈಚಾರಿಕ ಹಾಗೂ ದೈಹಿಕ ಸಾಮರ್ಥ್ಯಗಳಿಗೆ ಅನುಗುಣವಾಗಿ ಬೆಳವಣಿಗೆಗೆ ಅವಕಾಶ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಒಂದು ಮಗುವನ್ನು ಮತ್ತೊಂದು ಮಗುವಿನೊಂದಿಗೆ ಹೋಲಿಕೆ ಮಾಡಬಾರದು. ಇಂತಹ ಕ್ರಮಗಳಿಂದ ಮಕ್ಕಳಲ್ಲಿ ಕಲಿಕೆ ಹಾಗೂ ಶಿಕ್ಷಕರ ಬಗ್ಗೆ ಆಸಕ್ತಿ ಕಡಿಮೆಯಾಗಬಹುದು ಎಂದು ಅಮರೇಶ್ ಪಾಟೀಲ್ ಹೇಳಿದರು.

ಸಾರ್ವತ್ರಿಕ ಮಾನವೀಯ ಮೌಲ್ಯಗಳ ಪ್ರಮುಖ ಅಂಶಗಳಾದ ಮೂಲಭೂತ ಆಕಾಂಕ್ಷೆ ಮತ್ತು ಅದರ ಈಡೇರಿಕೆ, ಸಮಗ್ರ ಅಭಿವೃದ್ಧಿ, ಶಿಕ್ಷಣದ ಪಾತ್ರ, ಜೀವನದ ಆದ್ಯತೆ, ಸರಿಯಾದ ತಿಳುವಳಿಕೆ, ಸಂಬಂಧಗಳು ಹಾಗೂ ಭೌತಿಕ ಸೌಲಭ್ಯಗಳ ಕುರಿತು ಕಾರ್ಯಾಗಾರದಲ್ಲಿ ವಿವರಿಸಲಾಯಿತು. ಕೇವಲ ಟಿ.ವಿ., ಕಾರು, ಬಂಗಲೆ ಸೇರಿದಂತೆ ಭೌತಿಕ ಸೌಲಭ್ಯಗಳಿಂದ ಸಂತೋಷ ಹಾಗೂ ಸಮೃದ್ಧಿ ದೊರೆಯುವುದಿಲ್ಲ. ಉತ್ತಮ ಸಂಬಂಧಗಳನ್ನು ಕಾಪಾಡಿಕೊಂಡು ಸಾಗುವುದರಲ್ಲಿಯೇ ನಿಜವಾದ ಸಂತೋಷ ಮತ್ತು ಸಮೃದ್ಧಿ ಅಡಗಿದೆ ಎಂದು ಅವರು ತಿಳಿಸಿದರು.

ಕಾರ್ಯಾಗಾರವನ್ನು ಮನಿಷಾ ಜೋಶಿ ಅವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಶಿವಪುತ್ರಪ್ಪ ಡೇಂಕಿ, ಮುಖ್ಯಗುರು ನಾಗೇಂದ್ರ ಬಡಿಗೇರ, ಬಿ.ಇಡಿ. ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೀತಿ ಪಾಟೀಲ್ ಸೇರಿದಂತೆ ಶಿಕ್ಷಕರು ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.