ರಸ್ತೆ ಅಪಘಾತದ 18 ಗಾಯಾಳುಗಳಿಗೆ ಆಕ್ಸಿಲೈಫ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

ರಸ್ತೆ ಅಪಘಾತದ 18 ಗಾಯಾಳುಗಳಿಗೆ ಆಕ್ಸಿಲೈಫ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

ರಸ್ತೆ ಅಪಘಾತದ 18 ಗಾಯಾಳುಗಳಿಗೆ ಆಕ್ಸಿಲೈಫ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

ಕಲಬುರಗಿ: ರಸ್ತೆ ಸಂಚಾರ ಅಪಘಾತದಲ್ಲಿ ಗಾಯಗೊಂಡ ಒಟ್ಟು 18 ಮಂದಿಗೆ ಆಕ್ಸಿಲೈಫ್ ಆಸ್ಪತ್ರೆಯಲ್ಲಿ ತುರ್ತು ಹಾಗೂ ಯಶಸ್ವಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಆಕ್ಸಿಲೈಫ್ ಆಸ್ಪತ್ರೆಯ ಎಂಡಿ ಹಾಗೂ ಸಿಇಒ ಡಾ. ಅನ್ಮೋಲ್ ಮೋದಿ ತಿಳಿಸಿದರು.

ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಘಾತದಲ್ಲಿ ಗಾಯಗೊಂಡ 18 ಮಂದಿಯಲ್ಲಿ 10 ವರ್ಷದ ಬಾಲಕನಿಗೆ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಸಿಟಿ ಸ್ಕ್ಯಾನ್ ನಡೆಸಿದಾಗ ತಲೆಬುರುಡೆಯೊಳಗೆ ರಕ್ತಸ್ರಾವವಾಗಿರುವುದು ಹಾಗೂ ಮುಂಭಾಗದ ಮೂಳೆ ಮುರಿದಿರುವುದು ಪತ್ತೆಯಾಗಿತ್ತು. ತುರ್ತು ಪರಿಸ್ಥಿತಿಯನ್ನು ಗಮನಿಸಿ ಅದೇ ರಾತ್ರಿ 1.30ಕ್ಕೆ ಬಾಲಕನಿಗೆ ಡಿಕಂಪ್ರೆಸಿವ್ ಕ್ರಾನಿಯೊಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಹೇಳಿದರು.

ಇನ್ನು ನಾಲ್ವರು ರೋಗಿಗಳಿಗೆ ಬೆನ್ನುಹುರಿ ಹಾಗೂ ಶ್ವಾಸಕೋಶದ ಗಾಯಗಳೊಂದಿಗೆ ಹಲವು ಮೂಳೆ ಮುರಿತಗಳಾಗಿದ್ದವು. ಇಲಿಯಾಕ್ ಮೂಳೆ ಮುರಿತಕ್ಕೊಳಗಾದ ಮತ್ತೊಬ್ಬ ರೋಗಿಗೆ ಶಸ್ತ್ರಚಿಕಿತ್ಸೆ ನಡೆಸಲು ಹೈದರಾಬಾದ್‌ನಿಂದ ತಜ್ಞ ಶಸ್ತ್ರಚಿಕಿತ್ಸಕರನ್ನು ಕರೆಸಿ ಅಗತ್ಯ ಚಿಕಿತ್ಸೆ ನೀಡಲಾಯಿತು. ಅಪಘಾತದಲ್ಲಿ ಗಾಯಗೊಂಡವರೆಲ್ಲರೂ ಬಡ ದಿನಗೂಲಿ ಕಾರ್ಮಿಕರಾಗಿದ್ದು, ಅವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವುದರ ಜತೆಗೆ ಆಸ್ಪತ್ರೆಯ ವತಿಯಿಂದ ದೊಡ್ಡ ಪ್ರಮಾಣದ ರಿಯಾಯಿತಿಯನ್ನೂ ನೀಡಲಾಗಿದೆ ಎಂದರು.

ಅಪಘಾತಕ್ಕೊಳಗಾದವರಿಗೆ ಯಾವುದೇ ವಿಳಂಬವಾಗದಂತೆ ಸೂಕ್ತ ಸಮಯದಲ್ಲಿ ಅಗತ್ಯ ಚಿಕಿತ್ಸೆಯನ್ನು ನೀಡಲಾಗಿದ್ದು, ಎಲ್ಲರೂ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತುರ್ತು ಸಂದರ್ಭದಲ್ಲಿ ವೈದ್ಯಕೀಯ ತಂಡದ ಸಮಯೋಚಿತ ಸ್ಪಂದನೆ ಹಾಗೂ ಸಮನ್ವಯದಿಂದ ಇದು ಸಾಧ್ಯವಾಗಿದೆ ಎಂದು ಡಾ. ಅನ್ಮೋಲ್ ಮೋದಿ ಹೇಳಿದರು.

ಈ ಸಂದರ್ಭದಲ್ಲಿ ಶಹಾಪುರದ ಮಾಜಿ ಶಾಸಕರಾದ ಗುರು ಪಾಟೀಲ್ ಹಾಗೂ ಮಾಜಿ ಶಾಸಕ ಅಮಾತೆಪ್ಪ ಕಂದಕೂರ ಅವರು ಆಸ್ಪತ್ರೆಗೆ ಹಲವು ಬಾರಿ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ಹಾಗೂ ಚಿಕಿತ್ಸೆಯ ಕುರಿತು ವಿಚಾರಿಸಿದರು. ಅಲ್ಲದೆ, ರೋಗಿಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅವರ ಸಹಕಾರಕ್ಕೆ ಆಕ್ಸಿಲೈಫ್ ಆಸ್ಪತ್ರೆಯ ಪರವಾಗಿ ಡಾ. ಅನ್ಮೋಲ್ ಮೋದಿ ಕೃತಜ್ಞತೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಆಕ್ಸಿಲೈಫ್ ಆಸ್ಪತ್ರೆಗಳ ಅಧ್ಯಕ್ಷ ಶ್ರೀ ಚಂದ್ರಕಾಂತ ಗದ್ದಗಿ, ಮೂಳೆ ಹಾಗೂ ಬೆನ್ನುಹುರಿ ಶಸ್ತ್ರಚಿಕಿತ್ಸಕ ಡಾ. ನಿಶಾಂತ್ ಜಾಜೀ, ಮುಖ್ಯ ವೈದ್ಯಾಧಿಕಾರಿ ಡಾ. ವಿಜಯಸಿಂಹ ಹಾಗೂ ಶಹಾಪುರದ ಮಾಜಿ ವಿಧಾನ ಪರಿಷತ್ ಸದಸ್ಯ ಅಮಾತೆಪ್ಪ ಕಂದಕೂರ ಉಪಸ್ಥಿತರಿದ್ದರು.