ಷಡಕ್ಷರಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಜನ್ಮದಿನಾಚರಣೆ ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ ಹಾಗೂ ಔಷಧೀಯ ಸಸಿ ನೆಡುವ ಕಾರ್ಯಕ್ರಮ
ಷಡಕ್ಷರಿ ಶಿವಯೋಗಿ ಶ್ರೀ ಸಿದ್ದರಾಮೇಶ್ವರರ ಜನ್ಮದಿನಾಚರಣೆ
ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ ಹಾಗೂ ಔಷಧೀಯ ಸಸಿ ನೆಡುವ ಕಾರ್ಯಕ್ರಮ
ಕಲಬುರಗಿ: ಕನ್ನಡ ನಾಡಿನ ನಡೆದಾಡುವ ದೇವರು ಎಂದೇ ಪ್ರಸಿದ್ಧರಾದ ಜಿಡಗಾ–ಮುಗಳಖೋಡ ಮಠದ ಪೂಜ್ಯ ಷಡಕ್ಷರಿ ಲಿಂ. ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಶ್ರೀಗಳ ಜನ್ಮದಿನಾಚರಣೆ ಅಂಗವಾಗಿ ವೆಂಕಟಗಿರಿ ಸೌಹಾರ್ದ ಸಹಕಾರ ನಿಯಮಿತ ಸಂಘದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಾಗೂ ಔಷಧೀಯ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ಸೆ. 16ರಂದು ಬೆಳಗ್ಗೆ 11 ಗಂಟೆಗೆ ಕಲಬುರಗಿ ನಗರದ ಹೊರವಲಯದ ಖಣದಾಳ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯುರ್ವೇದೀಯ ಹಾಗೂ ಔಷಧೀಯ ಸಸಿಗಳನ್ನು ನೆಡಲಾಗುವುದು. ನಂತರ ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಔಷಧೀಯ ಸಸ್ಯಗಳ ಮಹತ್ವ ಕುರಿತು ತಜ್ಞ ರಮೇಶ ಮಹೇಂದ್ರಕರ ಹಾಗೂ ಯೋಗಾಭ್ಯಾಸದ ಕುರಿತು ಪತಂಜಲಿ ಯೋಗ ಸಂಸ್ಥೆಯ ಶಿವಾನಂದ ಸಾಲಿಮಠ ಅವರು ಮಾಹಿತಿ ನೀಡಲಿದ್ದಾರೆ.
ಸೆ. 18ರಂದು ಕೋಟನೂರಿನ ಸಿದ್ದ ಡಿವೈನ್ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ತಜ್ಞ ವೈದ್ಯರಿಂದ ಉಚಿತ ನೇತ್ರ ತಪಾಸಣೆ ಹಾಗೂ ವಿವಿಧ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಗತ್ಯವಿರುವವರಿಗೆ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಲು ಸಹ ವ್ಯವಸ್ಥೆ ಕಲ್ಪಿಸಲಾಗಿದೆ. ಕಲಬುರಗಿಯ ಅಲ್-ಬದರ್ ಡೆಂಟಲ್ ಕಾಲೇಜು, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಅನುಗ್ರಹ ಕಣ್ಣಿನ ಆಸ್ಪತ್ರೆ, ಯುನೈಟೆಡ್ ಆಸ್ಪತ್ರೆ ಹಾಗೂ ಜಿಲ್ಲಾ ಕುಷ್ಠರೋಗ ನಿಯಂತ್ರಣಾ ಇಲಾಖೆ ಕಾರ್ಯಕ್ರಮಕ್ಕೆ ಸಹಭಾಗಿತ್ವ ನೀಡಲಿವೆ.
ಸೆ. 19ರಂದು ನಂದಿಕೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪವನಕುಮಾರ ಬಿ. ವಳಕೇರಿ ಅವರ ರಾಜಕೀಯ ಜೀವನದ 25ನೇ ವರ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ಅಭಿಮಾನಿಗಳ ವತಿಯಿಂದ ಅಭಿನಂದನಾ ಪತ್ರ ನೀಡಿ ಅದ್ದೂರಿಯಾಗಿ ಸನ್ಮಾನಿಸಲಾಗುವುದು.
ನಂದಿಕೂರು, ಖಣದಾಳ, ಸೀತನೂರು, ಪಾಣೇಗಾಂವ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಈ ಎಲ್ಲ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಗಮೇಶ ನಾಗನಳ್ಳಿ, ಶಿವಾನಂದ ಸಾಲಿಮಠ, ಪವನಕುಮಾರ ಬಿ. ವಳಕೇರಿ, ರವೀಂದ್ರ ವಿಭೂತಿ ಹಾಗೂ ಲೋಹಿತ್ ವೈ. ಕಲ್ಲೂರ ಉಪಸ್ಥಿತರಿದ್ದರು.

