ದಹಿ ಹಂಡಿ ಉತ್ಸವ ಶಾಸಕ ಪ್ರಭು ಬಿ. ಚವ್ಹಾಣರಿಂದ ಚಾಲನೆ
ಔರಾದನಲ್ಲಿ ಅದ್ದೂರಿಯಾಗಿ ಜರುಗಿದ ದಹಿ ಹಂಡಿ ಉತ್ಸವ
ಶಾಸಕ ಪ್ರಭು ಬಿ. ಚವ್ಹಾಣರಿಂದ ಚಾಲನೆ: ಯುವಕರೊಂದಿಗೆ ಕುಣಿದು ಸಂಭ್ರಮ
ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಉದ್ಭವಲಿಂಗ ಶ್ರೀ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ವತಿಯಿಂದ ಪಟ್ಟಣದಲ್ಲಿ ದಹಿ ಹಂಡಿ ಉತ್ಸವವು ಶನಿವಾರ ಹರ್ಷೋಲ್ಲಾಸದಿಂದ ಜರುಗಿತು.
ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸ್ಪರ್ಧಾಳುಗಳೊಂದಿಗೆ ಕುಣಿದು ಕುಪ್ಪಳಿಸುವ ಮೂಲಕ ಯುವಕರ ಉತ್ಸಾಹವನ್ನು ಇಮ್ಮಡಿಗೊಳಿಸಿದರು.
ಮಾತನಾಡಿ, ಅಧರ್ಮ ಹೆಚ್ಚಾದಾಗ ಶ್ರೀಕೃಷ್ಣ ಜನ್ಮತಾಳಿ ಧರ್ಮವನ್ನು ಸ್ಥಾಪಿಸುತ್ತಾನೆ. ಮಹಾಭಾರತದ ಯುದ್ಧದಲ್ಲಿ ಅರ್ಜುನನ ಸಾರಥಿಯಾಗಿ ಶ್ರೀಕೃಷ್ಣ ನೀಡಿದ ಸಂದೇಶಗಳು ಭಗವದ್ಗೀತೆಯ ರೂಪದಲ್ಲಿ ಇಂದಿಗೂ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿವೆ. ಶ್ರೀಕೃಷ್ಣನ ಸ್ಮರಣೆ ಹಾಗೂ ಆತನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಕಷ್ಟಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಸನಾತನ ಸಂಸ್ಕೃತಿ ಮತ್ತು ಪರಂಪರೆಯ ಸಂದೇಶಗಳು ಮುಂದಿನ ಪೀಳಿಗೆಗೂ ತಲುಪಬೇಕು ಎಂಬ ಉದ್ದೇಶದಿಂದ ದಹಿ ಹಂಡಿ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಶ್ರೀರಾಮನ ಧರ್ಮನಿಷ್ಠೆ, ಶಿವನ ತ್ಯಾಗ ಮತ್ತು ಶಕ್ತಿ, ಗಣೇಶನ ಜ್ಞಾನ, ಹನುಮಂತನ ಭಕ್ತಿ ಹಾಗೂ ಶೌರ್ಯ, ದುರ್ಗಾದೇವಿಯ ಶಕ್ತಿ, ಲಕ್ಷ್ಮೀದೇವಿಯ ಸಮೃದ್ಧಿ ಮತ್ತು ಸರಸ್ವತಿಯ ಜ್ಞಾನ—ಸನಾತನ ಸಂಸ್ಕೃತಿಯಲ್ಲಿನ ಪ್ರತಿ ದೇವತೆ ಸಮಾಜವನ್ನು ಉತ್ತಮ ದಾರಿಯಲ್ಲಿ ಮುನ್ನಡೆಸುವ ಸಂದೇಶಗಳನ್ನು ನೀಡುತ್ತಾರೆ. ಇಂತಹ ಮೌಲ್ಯಗಳು ಹಾಗೂ ಸಾಮಾಜಿಕ ಸುಧಾರಣೆಗಳ ಅಗತ್ಯ ಇಂದು ಹೆಚ್ಚಿನ ಪ್ರಮಾಣದಲ್ಲಿದೆ ಎಂದರು.
ರಕ್ಷಾ ಬಂಧನ, ಮಹಾಶಿವರಾತ್ರಿ, ಶ್ರೀಕೃಷ್ಣ ಜನ್ಮಾಷ್ಟಮಿ, ರಾಮನವಮಿ, ಗಣೇಶ ಚತುರ್ಥಿ, ನವರಾತ್ರಿ, ವಿಜಯದಶಮಿ, ದೀಪಾವಳಿ, ನಾಗರ ಪಂಚಮಿ, ಹನುಮ ಜಯಂತಿ, ಏಕಾದಶಿ, ಗೌರಿ ಹುಣ್ಣಿಮೆ, ಮಕರ ಸಂಕ್ರಾAತಿ, ವರಮಹಾಲಕ್ಷ್ಮೀ ಸೇರಿದಂತೆ ಹತ್ತಾರು ಹಬ್ಬಗಳನ್ನು ನಮ್ಮ ಜನತೆ ಸಂಭ್ರಮದಿAದ ಆಚರಿಸುತ್ತಾರೆ. ಕಳೆದ 50 ವರ್ಷಗಳಲ್ಲಿ ಔರಾದನಲ್ಲಿ ದಹಿ ಹಂಡಿ ಉತ್ಸವ ನಡೆದಿರಲಿಲ್ಲ. ಆದರೆ ಸಾರ್ವಜನಿಕರ ಆಶೀರ್ವಾದ ಹಾಗೂ ಸಹಕಾರದಿಂದ ಕಳೆದ ಮೂರು ವರ್ಷಗಳಿಂದ ದಹಿ ಹಂಡಿ ಉತ್ಸವವನ್ನು ಅದ್ದೂರಿಯಾಗಿ ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನತೆ ಸಹಕಾರ ನೀಡಿದಲ್ಲಿ ದಾಂಡಿಯಾ ಕಾರ್ಯಕ್ರಮವನ್ನೂ ಅದ್ದೂರಿಯಾಗಿ ಆಯೋಜಿಸುವ ಉದ್ದೇಶವಿದೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಇದೇ ರೀತಿಯಲ್ಲಿ ಮಥುರಾದಲ್ಲಿ ಶ್ರೀಕೃಷ್ಣ ಮಂದಿರ ಭವ್ಯವಾಗಿ ನಿರ್ಮಾಣಗೊಳ್ಳುವ ದಿನಗಳು ಹತ್ತಿರದಲ್ಲಿವೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶ್ರೀಕೃಷ್ಣ ಮಂದಿರ ನಿರ್ಮಿಸುವ ಭರವಸೆಯಿದೆ ಎಂದು ಹೇಳಿದರು.
ಔರಾದನಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೂ ಆದ್ಯತೆ ನೀಡಲಾಗುತ್ತಿದೆ. ಚಿಮ್ಮೇಗಾಂವ–ಮಾಳೆಗಾAವ ಪ್ರದೇಶದಲ್ಲಿ 2,360 ಕೋಟಿ ವೆಚ್ಚದಲ್ಲಿ ಪವರ್ ಗ್ರಿಡ್ ಕಾರ್ಪೊರೇಷನ್ ಸಬ್‌ಸ್ಟೇಷನ್, ಸುಮಾರು 40 ಸಾವಿರಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಬೃಹತ್ ಸೋಲಾರ್ ಪಾರ್ಕ್ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳು ನಡೆಯುತ್ತಿವೆ. ಸೋಲಾರ್ ಪಾರ್ಕ್ಗಾಗಿ ಹಲವಾರು ರೈತರ ಜಮೀನುಗಳು ಬಳಕೆಯಾಗಿದ್ದು, ಇದರಿಂದ ರೈತರಿಗೆ ವಿವಿಧ ರೀತಿಯಲ್ಲಿ ಅನುಕೂಲವಾಗುತ್ತಿದೆ ಎಂದರು.
ಅದೇ ರೀತಿ 560 ಕೋಟಿ ವೆಚ್ಚದ ಕೆರೆ ತುಂಬಿಸುವ ಯೋಜನೆ, 118 ಕೋಟಿ ವೆಚ್ಚದ ನಾಗೂರ (ಬಿ) 220 ಕೆ.ವಿ. ವಿದ್ಯುತ್ ಉಪಕೇಂದ್ರ, ಬಲ್ಲೂರಿನಲ್ಲಿ 90 ಕೋಟಿ ವೆಚ್ಚದ ಸಿಪೆಟ್ ಕೇಂದ್ರ, 84 ಕೋಟಿ ವೆಚ್ಚದ ಕಾರಂಜಾದಿAದ ಔರಾದ್‌ಗೆ ನೀರು ಪೂರೈಕೆ ಯೋಜನೆ, 32 ಕೋಟಿ ವೆಚ್ಚದ ಜಾನುವಾರು ತಳಿ ಸಂವರ್ಧನ ಕೇಂದ್ರ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಶಾಸಕರು ವಿವರಿಸಿದರು.
ಹೆಡಗಾಪೂರ ಮಠದ ಪೂಜ್ಯ ಕೇದಾರನಾಥ ಶಿವಾಚಾರ್ಯರು ಮಾತನಾಡಿ, ಸಮಾಜ ಸುಸ್ಥಿತಿಯಲ್ಲಿ ಇರಬೇಕಾದರೆ ಧರ್ಮ ಕಾರ್ಯಗಳು ಅಚ್ಚುಕಟ್ಟಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಔರಾದನಲ್ಲಿ ಶಾಸಕರ ನೇತೃತ್ವದಲ್ಲಿ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಭಿವೃದ್ಧಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ಮುಖಂಡರಾದ ವಸಂತ ವಕೀಲ, ಧೊಂಡಿಬಾ ನರೋಟೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಪ್ರಕಾಶ ಅಲ್ಮಾಜೆ, ದಯಾನಂದ ಘೂಳೆ, ಸಂಜು ವಡೆಯರ್, ಕೇರಬಾ ಪವಾರ್, ಯಾದು ಮೇತ್ರೆ, ಭಾಬು ರಾಠೋಡ್, ಗುಂಡಪ್ಪ ಮುಧಾಳೆ, ಸುಜಿತ್ ರಾಠೋಡ್, ಪ್ರದೀಪ ಪವಾರ್, ಗುರುನಾಥ ರಾಜಗೀರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕಾಲೇಜು ಮತ್ತು ಸಾರ್ವಜನಿಕರ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು. ವಿವಿಧ ಕಾಲೇಜು ವಿದ್ಯಾರ್ಥಿಗಳು ಮತ್ತು ಔರಾದ(ಬಿ) ಮತ್ತು ಕಮನಲನಗರ ತಾಲ್ಲೂಕಿನ ಹಲವಾರು ತಂಡಗಳು ಆಗಮಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡವು. ಇದೇ ವೇಳೆ ಕೃಷ್ಣ-ರುಕ್ಮಿಣಿ ವೇಷದಾರಿಯಾಗಿ ಆಗಮಿಸಿದ್ದ ವಿವಿಧ ಶಾಲೆಗಳ ಮಕ್ಕಳಿಗೆ ಶಾಸಕರು ಉಡುಗೊರೆ ನೀಡಿ ಗೌರವಿಸಿದರು.

