ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್ ಭೇಟಿ – ವಿವಿಧ ಯೋಜನೆಗಳ ಪರಿಶೀಲನೆ
ಸಿಇಒ ಹೆಜ್ಜೆ... ಗ್ರಾಮದ ಕಡೆಗೆ
ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಮುಂಜಾನೆ ಜಿಪಂ ಸಿಇಒ ಗಿತ್ತೆ ಮಾಧವ್ ವಿಠ್ಠಲರಾವ್ ಭೇಟಿ – ವಿವಿಧ ಯೋಜನೆಗಳ ಪರಿಶೀಲನೆ
ಕಮಲನಗರ: ಬೀದರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಗಿತ್ತೆ ಮಾಧವ್ ವಿಠ್ಠಲರಾವ್ ಅವರು ಶನಿವಾರ ಮುಂಜಾನೆ ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಹಾಗೂ ಜನಪರ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಿದರು.
ಮೊದಲಿಗೆ ಕಮಲನಗರ ಗ್ರಾಮ ಪಂಚಾಯತಿಗೆ ಭೇಟಿ ನೀಡಿದ ಅವರು ಸ್ವಚ್ಛ ವಾಹಿನಿ, ಗ್ರಾ.ಪಂ. ಸಭಾಂಗಣ ವೀಕ್ಷಿಸಿ, ವಿವಿಧ ಓಣಿಗಳಿಗೆ ಸಂಚರಿಸಿ ಜಲ ಜೀವನ್ ಅಭಿಯಾನದ ‘ಮನೆ-ಮನೆಗೆ ಗಂಗೆ’ ಕಾರ್ಯಕ್ರಮದಡಿ ಮನೆಗಳಿಗೆ ಅಳವಡಿಸಿರುವ ನೀರಿನ ನಳಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸಿ, ಗ್ರಾಮಸ್ಥರಿಂದಲೇ ನೀರು ಪೂರೈಕೆಯ ಕುರಿತು ಮಾಹಿತಿ ಪಡೆದರು.
ನೀರು ಪೂರೈಕೆಯಲ್ಲಿ ಕಂಡುಬಂದ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಪಿಡಿಒ ಹಾಗೂ ಜೆಜೆಎಂ ಅಧಿಕಾರಿಗಳಿಗೆ ಸೂಚಿಸಿದರು. ಚರಂಡಿ ನೀರು ಪೂರೈಕೆಯಾಗುತ್ತಿರುವ ಕುರಿತು ಗ್ರಾಮಸ್ಥರು ದೂರು ನೀಡಿದ ಹಿನ್ನೆಲೆಯಲ್ಲಿ, ಚರಂಡಿಯಲ್ಲಿ ಅಳವಡಿಸಿರುವ ಪೈಪ್‌ಲೈನ್ ತೆರವುಗೊಳಿಸುವಂತೆ ನಿರ್ದೇಶಿಸಿದರು. ಎಲ್ಲಾ ಬೋರ್‌ವೆಲ್‌ಗಳಿಗೆ ರಿಚಾರ್ಜ್ ಪಿಟ್ ಅಳವಡಿಸಿ, ಕಲುಷಿತ ನೀರು ಪೂರೈಕೆಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು. ದುರಸ್ತಿಗೆ ಒಳಗಾಗಿರುವ ಬೋರ್‌ವೆಲ್‌ಗಳ ಸಮೀಕ್ಷೆ ನಡೆಸಿ, ನೀರು ಪೂರೈಕೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ನಂತರ ತಾಲ್ಲೂಕು ಪಂಚಾಯತ್ ಕಚೇರಿಗೆ ಭೇಟಿ ನೀಡಿದ ಸಿಇಒ ಅವರು, ಕಚೇರಿ ಪಕ್ಕದಲ್ಲಿರುವ ಹಾಳುಬಿದ್ದ ಕಟ್ಟಡವನ್ನು ಸಮತಟ್ಟುಗೊಳಿಸಿ, ಅಗತ್ಯವಿದ್ದಲ್ಲಿ ದುರಸ್ತಿ ಅಥವಾ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸುವಂತೆ ತಿಳಿಸಿದರು. ವಿಬಿಜಿ ರಾಮಜಿ ಯೋಜನೆಯಡಿ ಈಗಾಗಲೇ ಲಭ್ಯವಿರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ತಾಲ್ಲೂಕು ಪಂಚಾಯತ್ ಹಾಗೂ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸೌಲಭ್ಯ ಪರಿಶೀಲನೆ
ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರದ ಕುರಿತು ಮಾಹಿತಿ ಪಡೆದರು. ಮಕ್ಕಳ ಆಟ ಹಾಗೂ ಕಲಿಕೆಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳನ್ನು ಪರಿಶೀಲಿಸಿ, ಮಕ್ಕಳಿಗೆ ಉತ್ತಮ ವಾತಾವರಣ ಕಲ್ಪಿಸುವಂತೆ ಸಿಬ್ಬಂದಿಗೆ ಸಲಹೆ ನೀಡಿದರು.
ವಸತಿ ಶಾಲೆಯಲ್ಲಿ ಮಕ್ಕಳೊಂದಿಗೆ ಸಂವಾದ
ಕಮಲನಗರ ಗ್ರಾಮದ ಹೊರವಲಯದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಭೇಟಿ ನೀಡಿದ ಸಿಇಒ ಅವರು ವಿದ್ಯಾರ್ಥಿಗಳೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅವರ ಊಟ, ಪಾಠ ಹಾಗೂ ಆರೋಗ್ಯದ ಕುರಿತು ವಿಚಾರಿಸಿದರು.
ವಿದ್ಯಾರ್ಥಿಗಳ ಮಲಗುವ ಕೋಣೆ, ಹಾಸಿಗೆ ಹಾಗೂ ವಸತಿ ನಿಲಯದ ಸ್ವಚ್ಛತೆಯನ್ನು ಕಾಪಾಡಬೇಕು. ಬಾಲಕ ಹಾಗೂ ಬಾಲಕಿಯರ ಆರೋಗ್ಯ ತಪಾಸಣೆಯನ್ನು ನಿಯಮಿತವಾಗಿ ನಡೆಸಬೇಕು. ಪ್ರೌಢಾವಸ್ಥೆಯ ಮಕ್ಕಳಿಗೆ ಆರೋಗ್ಯ ಇಲಾಖೆಯಿಂದ ನೀಡಲಾಗುವ ಅಗತ್ಯ ಲಸಿಕೆಗಳನ್ನು ಕಡ್ಡಾಯವಾಗಿ ಕೊಡಿಸುವಂತೆ ನಿಲಯದ ಸಿಬ್ಬಂದಿಗೆ ನಿರ್ದೇಶಿಸಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಾಲಿನಲ್ಲಿ ಕುಳಿತು ಮುಂಜಾನೆಯ ಉಪಹಾರ ಸವಿದ ಅವರು, ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಬಿಸಿನೀರಿನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಬಿಸಿನೀರು ಪೂರೈಕೆಯಾಗದಿರುವ ಕುರಿತು ವಿಚಾರಿಸಿ, ಅಳವಡಿಸಿರುವ ಸೋಲಾರ್ ವ್ಯವಸ್ಥೆಯನ್ನು ಪರಿಶೀಲಿಸಿದರು. ಮುಂದಿನ ಬಾರಿ ಭೇಟಿ ನೀಡುವಷ್ಟರಲ್ಲಿ ಮಕ್ಕಳಿಗೆ ಸಮರ್ಪಕ ಊಟ ಹಾಗೂ ಬಿಸಿನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶಾಲಾ ಆವರಣಕ್ಕೆ ಕಂಪೌಂಡ್ ನಿರ್ಮಿಸುವುದು ಹಾಗೂ ಮಕ್ಕಳಿಗೆ ಆಟವಾಡಲು ವಿಬಿಜಿ ರಾಮಜಿ ಯೋಜನೆಯಡಿ ಆಟದ ಮೈದಾನ ನಿರ್ಮಿಸುವಂತೆ ಪಿಡಿಒಗೆ ಸೂಚಿಸಿದರು. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಭವಿಷ್ಯದಲ್ಲಿ ದೊಡ್ಡ ಅಧಿಕಾರಿಗಳಾಗಬೇಕು ಎಂದು ಹುರಿದುಂಬಿಸಿದರು.
ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳ ಆರೋಗ್ಯ ವಿಚಾರಣೆ
ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಿಇಒ ಅವರು, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. ಜನರಲ್ ವಾರ್ಡ್, ಲೇಬರ್ ವಾರ್ಡ್ ಹಾಗೂ ಪ್ರಯೋಗಾಲಯವನ್ನು ವೀಕ್ಷಿಸಿ, ರೋಗಿಗಳಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ಮಾಹಿತಿ ಪಡೆದರು.
ಆಸ್ಪತ್ರೆಯ ಔಷಧಿ ದಾಸ್ತಾನು ಕೊಠಡಿಗೆ ತೆರಳಿ ಔಷಧಿಗಳ ಲಭ್ಯತೆ ಹಾಗೂ ಮುಕ್ತಾಯ ದಿನಾಂಕಗಳನ್ನು ಪರಿಶೀಲಿಸಿದರು.
ಸಾವಳಿಯಲ್ಲಿ ಸಿಸಿಟಿ ಕಾಮಗಾರಿ ವೀಕ್ಷಣೆ
ಹೊಳಸಮುದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವಳಿ ಗ್ರಾಮದಲ್ಲಿ ನಡೆಯುತ್ತಿರುವ ಸಿಸಿಟಿ ಕಾಮಗಾರಿಯನ್ನು ವೀಕ್ಷಿಸಿದ ಸಿಇಒ ಅವರು, ಕಾಮಗಾರಿಯ ಗುಣಮಟ್ಟ ಹಾಗೂ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ಸ್ವತಃ ಮಣ್ಣು ಅಗೆದು ಬುಟ್ಟಿ ತುಂಬುವ ಮೂಲಕ ಕೂಲಿಕಾರರೊಂದಿಗೆ ಕೆಲಸದಲ್ಲಿ ಭಾಗಿಯಾದರು.
ಕಾಮಗಾರಿ ನಿರತ ಕೂಲಿಕಾರರೊಂದಿಗೆ ಚರ್ಚಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ಜಾಬ್ ಕಾರ್ಡ್ ಮೇಳ ಅಭಿಯಾನದಡಿ ಕೂಲಿಕಾರರಿಗೆ ಜಾಬ್ ಕಾರ್ಡ್‌ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಮ್ಯಾನೇಜರ್ ಬಶೀರ್, ಸೋಮಶೇಖರ, ಗಣೇಶ, ಮಾರುತಿ, ಟಿಸಿ ಅಮರ ಬಿರಾದಾರ, ಐಇಸಿ ಸಂಯೋಜಕಿ ಸವಿತಾ ನಾಗೇಶ, ಟಿಎ ಅರ್ಜುನ, ವಿರೂಪಾಕ್ಷ, ವಿನೋದ, ರಾಘವೇಂದ್ರ ಡೊಳ್ಳೆ, ತಾ.ಪಂ. ಸಿಬ್ಬಂದಿ ಸಂಗಮೇಶ ಸೇರಿದಂತೆ ಅನುಷ್ಠಾನ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

