ಬ್ರಿಮ್ಸ್ ನೌಕರನನ್ನು ಸೇವೆಯಿಂದ ವಜಾಗೊಳಿಸಲು ಕ್ರಮ: ಭಾರತೀಯ ಜೈ ಭೀಮ ದಳ
ಬ್ರಿಮ್ಸ್ ನೌಕರನನ್ನು ಸೇವೆಯಿಂದ ವಜಾಗೊಳಿಸಲು ಕ್ರಮ: ಭಾರತೀಯ ಜೈ ಭೀಮ ದಳ
ಬೀದರ, ಸೆ.1: ಬೀದರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾನೂನುಬಾಹಿರವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿ ಅಂಬ್ರೇಶ ತಂದೆ ಶಿವಮೂರ್ತಿ ಬಟ್ನಾಪೂರೆ, ಪ್ರಥಮ ದರ್ಜೆ ಸಹಾಯಕರ ವಿರುದ್ಧ ಭಾರತೀಯ ಜೈ ಭೀಮ ದಳದಿಂದ ದೂರು ನೀಡಲಾಗಿತ್ತು.
ದಿನಾಂಕ 02-07-2026ರಂದು ಬೀದರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಅಂಬ್ರೇಶ ಅವರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸುವಂತೆ ಮನವಿ ಮಾಡಲಾಗಿತ್ತು. ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರಕರಣವನ್ನು ಪರಿಶೀಲಿಸಿ, ಅವರನ್ನು ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸುವಂತೆ ಸೂಚಿಸಿದ್ದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ, ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ, ಬೀದರ ವತಿಯಿಂದ ದಿನಾಂಕ 31-08-2026ರಂದು ಅಂಬ್ರೇಶ ಅವರನ್ನು ಸೇವೆಯಿಂದ ವಜಾಗೊಳಿಸಿರುವುದಾಗಿ ತಿಳಿಸಲಾಗಿದೆ. ಈ ಕುರಿತು ಸಂಸ್ಥೆಯ ನಿರ್ದೇಶಕರಿಗೂ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ ಎಂದು ಭಾರತೀಯ ಜೈ ಭೀಮ ದಳ ತಿಳಿಸಿದೆ.
ಕಾನೂನುಬಾಹಿರ ನೇಮಕಾತಿ ಹಾಗೂ ಹೊರಗುತ್ತಿಗೆ ಸೇವೆಗಳಲ್ಲಿ ನಿಯಮ ಉಲ್ಲಂಘನೆಯಾಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅರ್ಹತೆ ಮತ್ತು ನಿಯಮಾನುಸಾರವೇ ನೇಮಕಾತಿ ಪ್ರಕ್ರಿಯೆ ನಡೆಯಬೇಕು ಎಂದು ದಳ ಒತ್ತಾಯಿಸಿದೆ.

