ಅಂತರಂಗದ ಅಕ್ಷರದ ಮೂಲಕ ಡಾ. ಅಪ್ಪಾ ಅವರ ದರ್ಶನ
ಅಂತರಂಗದ ಅಕ್ಷರದ ಮೂಲಕ ಡಾ. ಅಪ್ಪಾ ಅವರ ದರ್ಶನ
ಮಾನವರಾಗಿ ಹುಟ್ಟಿ ಮಾನವರಾಗಿ ಬದುಕಿದವರು ಕೆಲವರು, ಮಾನವರಾಗಿ ಹುಟ್ಟಿ ದಾನವರಾಗಿ ಬದುಕಿದವರು ಕೆಲವರು, ಮಾನವರಾಗಿಯೇ ಹುಟ್ಟಿ ದೇವ ಮಾನವರಾಗಿ ದಿವ್ಯಾನುಭಾವಿಗಳಾದವರು ಬೆರೆಳೆಣಿಕೆಯಷ್ಟು ಮಾತ್ರ. ಆ ದಿಶೆಯಲ್ಲಿ ಮಾನವರಾಗಿ ಹುಟ್ಟಿ ದೇವ ಮಾನವರಾಗಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸಾಂಸ್ಕೃತಿಕ ಕಾರ್ಯಗಳನ್ನು ದೇವರ ಕಾಯಕವೆಂದು ಭಾವಿಸಿ ಮಾಡಿದಂತಹವರು ಮಹಾಚೇತನರಾಗಿದ್ದ ಪರಮಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು.
ಅವರ ಬದುಕು ನಿರ್ಮಲ ಮತ್ತು ಸತ್ಯಾನವೆಷಣೆಯಿಂದ ಕೂಡಿದಂತಹದು. ಅವರು ಪೀಠದಿಂದ ದೊಡ್ಡವರಾಗಿ ಬೆಳೆಯಲಿಲ್ಲ ತಮ್ಮ ಬದುಕಿನ ಕಾರ್ಯವೈಖರಿಯಿಂದ ಬದುಕನ್ನೆ ಒಂದು ಪೀಠವನ್ನಾಗಿ ಬೆಳಗಿದ ಮಹಾಮಹಿಮರು. ಮಾನವನ ಬದುಕು ಸಾರ್ಥಕವಾಗಿ ಸಾಗಬೇಕಾದರೆ ಆತನ ಆಚಾರ ವಿಚಾರ ಒಂದಾಗಿರಬೇಕು. ಇವೆರೆಡನ್ನು ಒಂದಾಗಿಸಿಕೊಂಡು ಬಾಳಿ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘವನ್ನು ಮುಗಿಲೆತ್ತರಕ್ಕೆ ಬೆಳೆಸಿದಂತಹ ಧೀಮಂತರವರು.ಇಂತಹ ಧೀಮಂತ ವ್ಯಕ್ತಿತ್ವದ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಪುಣ್ಯತಿಥಿಯ ಪ್ರಯುಕ್ತ, 'ಅಂತರಂಗದ ಅಕ್ಷರ' ಎಂಬ ಕವನ ಸಂಕಲನವನ್ನು ಸಿದ್ಧಪಡಿಸಿರುವುದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿಯಾಗಿದೆ.
ಈ ಕವನ ಸಂಕಲನದಲ್ಲಿ ಅರವತ್ತೆರಡು ಜನ ಕವಿಗಳು ಆ ಮಹಾನ್ ಚೇತನದ ಸ್ಮರಣಾರ್ಥವಾಗಿ ಕವನಗಳ ಮೂಲಕ ಅಭಿವ್ಯಕ್ತಿಸಿರುವ ಈ ಸಂಕಲನವು, ಅಪ್ಪಾಜಿಯವರ ವ್ಯಕ್ತಿತ್ವಕ್ಕೆ ಅಕ್ಷರಗಳ ಮೂಲಕ ಸಲ್ಲಿಸಿದ ಹೃದಯಪೂರ್ವಕ ನಮನವಾಗಿದೆ. 'ಮರೆಯಾಯಿತು ಕಾಣಿಕೆ', 'ಪಂಚದಾಸೋಹ ರೂಪ', 'ಶಿಕ್ಷಣ ಮಹಾಬೋಧಿವೃಕ್ಷ', 'ಮಣ್ಣಿನ ಮಡಿಲ ಮಗ', 'ಕಾಯಕದ ಚಳಿ ಹೊಡೆದರು', 'ಜ್ಞಾನದ ಪ್ರಭಾವಳಿ', 'ಅನ್ನ-ಅಕ್ಷರದ ನಕ್ಷತ್ರ', 'ಅನ್ನದಾಸೋಹದ ಮಹಿಮೆ' ಅನ್ನ ಅಕ್ಷರ ನಕ್ಷತ್ರ,ಅಕ್ಷರಯೋಗಿ, ಬಾಗುವೆವು ನಿಮ್ಮಡಿಗೆ ಸೇರಿದಂತೆ ಮುಂತಾದ ಕವನಗಳು ಅಪ್ಪಾಜಿಯವರ ಬಹುಮುಖ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ಪರಿಚಯಿಸುತ್ತವೆ.
ಅಪ್ಪಾಜಿಯವರ ಬದುಕಿನ ಕೇಂದ್ರಬಿಂದುಗಳಾದ ಅನ್ನದಾಸೋಹ, ಅಕ್ಷರದಾಸೋಹ, ಶಿಕ್ಷಣ, ಜ್ಞಾನ, ಕಾಯಕ, ಧರ್ಮ, ಸಂಸ್ಕೃತಿ ಮತ್ತು ಮಾನವೀಯತೆ ಈ ಕವನ ಸಂಕಲನದಲ್ಲಿ ವಿವಿಧ ಭಾವಧಾರೆಗಳಾಗಿ ಹರಿದುಬಂದಿವೆ. ಹೀಗಾಗಿ ಇದು ಕೇವಲ ಕವನ ಸಂಕಲನವಲ್ಲ; ಪೂಜ್ಯ ಅಪ್ಪಾಜಿಯವರ ಜೀವನಾದರ್ಶಗಳನ್ನು ಅಕ್ಷರಗಳಲ್ಲಿ ದಾಖಲಿಸಿರುವ ಭಾವಪೂರ್ಣ ಸ್ಮರಣಾಂಜಲಿಯಾಗಿದೆ.
ಪುಸ್ತಕವು 2026 ರಲ್ಲಿ ಮುದ್ರಣವಾಗಿದ್ದು ಶರಣಬಸವ ವಿಶ್ವವಿದ್ಯಾಲಯದ ಪರಮ ಪೂಜ್ಯ ಡಾ ಶರಣಬಸವಪ್ಪ ಅಪ್ಪಾ ಅಧ್ಯಯನ ಪೀಠದ ವತಿಯಿಂದ ಪ್ರಕಾಶನಗೊಂಡ ಪುಸ್ತಕದಲ್ಲಿ 131 ಪುಟಗಳು ಹೊಂದಿದ್ದು, 120 ಬೆಲೆ ನಿಗದಿಪಡಿಸಲಾಗಿದೆ.
ಡಾ. ಶರಣಬಸಪ್ಪ ವಡ್ಡನಕೇರಿ
ಕಲಬುರಗಿ

