ಹಂಸ ಜಾನಪದ ಸಂಭ್ರಮ’ದಲ್ಲಿ ಜಾನಪದ ಕಲೆಯ ವೈಭವ; 10 ಸಾಧಕರಿಗೆ ‘ಹಂಸ ಸಮ್ಮಾನ್–2026’

ಹಂಸ ಜಾನಪದ ಸಂಭ್ರಮ’ದಲ್ಲಿ ಜಾನಪದ ಕಲೆಯ ವೈಭವ; 10 ಸಾಧಕರಿಗೆ ‘ಹಂಸ ಸಮ್ಮಾನ್–2026’

ಹಂಸ ಜಾನಪದ ಸಂಭ್ರಮ’ದಲ್ಲಿ ಜಾನಪದ ಕಲೆಯ ವೈಭವ; 10 ಸಾಧಕರಿಗೆ ‘ಹಂಸ ಸಮ್ಮಾನ್–2026’

ಬೆಂಗಳೂರು, ಆ.17: ಹಂಸ ಜ್ಯೋತಿ ಟ್ರಸ್ಟ್‌ (ರಿ.) ತನ್ನ ಸುವರ್ಣ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಿದ್ದ ‘ಹಂಸ ಜಾನಪದ ಸಂಭ್ರಮ’ ಕಾರ್ಯಕ್ರಮವು ಸೋಮವಾರ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಜಾನಪದ ಕಲೆ–ಸಂಸ್ಕೃತಿಯ ವೈವಿಧ್ಯಮಯ ಪ್ರದರ್ಶನಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮವನ್ನು ಬೆಂಗಳೂರಿನ ನಗರ ಜಿಲ್ಲೆಯ ನಿವೃತ್ತ ಜಿಲ್ಲಾಧಿಕಾರಿ ವಿ. ಶಂಕರ್, ಭಾ.ಆ.ಸೇ. ಉದ್ಘಾಟಿಸಿದರು. ಮಾತನಾಡಿದ ಅವರು, ಜಾನಪದ ಕಲೆಗಳು ನಮ್ಮ ನಾಡಿನ ಜೀವನಶೈಲಿ, ಸಂಸ್ಕೃತಿ, ಆಚರಣೆ ಹಾಗೂ ಜನರ ಬದುಕಿನೊಂದಿಗೆ ಬೆಸೆದುಕೊಂಡಿರುವ ಅಮೂಲ್ಯ ಪರಂಪರೆಯಾಗಿವೆ. ಆಧುನಿಕತೆಯ ವೇಗದ ನಡುವೆಯೂ ಇಂತಹ ಕಲಾಪ್ರಕಾರಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಸಮಾಜದ ಮೇಲಿದೆ ಎಂದು ಹೇಳಿದರು.

ಜಾನಪದ ಕಲಾವಿದರಿಗೆ ವೇದಿಕೆ ಕಲ್ಪಿಸುವುದು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವುದು ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡುವ ಮಹತ್ವದ ಕೊಡುಗೆಯಾಗಿದೆ. ಹಂಸ ಜ್ಯೋತಿ ಟ್ರಸ್ಟ್‌ ತನ್ನ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.

ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವಾನ್ವಿತ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೆ ಪಿ. ಕೃಷ್ಣ, ಡಾ. ಬಿ.ಆರ್. ಹಿರೇಮಠ, ಶ್ರೀ ಜಾಣಗೆರೆ ವೆಂಕಟರಾಮಯ್ಯ, ಶ್ರೀ ಎಸ್. ಬಾಲರಾಜ್, ಶ್ರೀ ಎಸ್.ಟಿ. ಉದಯಕುಮಾರ್, ಶ್ರೀ ಬಿ.ಎಸ್. ಮೋಹನ್‌ಕುಮಾರ್, ಶ್ರೀ ಎನ್. ಜಗದೀಶ್, ಶ್ರೀಮತಿ ಕೆ. ಶಶಿಕಲಾ, ಶ್ರೀ ಎಲ್. ನರಸಿಂಹಮೂರ್ತಿ, ಶ್ರೀಮತಿ ಆರ್. ಗೀತಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಹಂಸ ಜಾನಪದ ಸಂಭ್ರಮ’ದಲ್ಲಿ ಜಾನಪದ ಗಾಯನ ಹಾಗೂ ವಿವಿಧ ಜಾನಪದ ಕಲಾಪ್ರಕಾರಗಳ ಮನಮೋಹಕ ಪ್ರದರ್ಶನ ನಡೆಯಿತು. ಜಾನಪದ ಗಾಯಕಿ ಹಾಗೂ ರಂಗನಟಿ ಸವಿತಾ ಗಣೇಶ್‌ಪ್ರಸಾದ್ ಮತ್ತು ಅವರ ತಂಡದ ಗಾಯನ ಪ್ರೇಕ್ಷಕರ ಗಮನ ಸೆಳೆಯಿತು.

ಅಂತರರಾಷ್ಟ್ರೀಯ ಖ್ಯಾತಿಯ ಜಾನಪದ ಕಲಾವಿದ ಡೊಳ್ಳು ಚಂದ್ರು ಅವರ ತಂಡದಿಂದ ಡೊಳ್ಳು ಕುಣಿತ, ಪೂಜಾ ಕುಣಿತ, ವೀರಭದ್ರ ಕುಣಿತ, ಗೊಂಬೆ ಕುಣಿತ ಹಾಗೂ ಯಕ್ಷಗಾನ ಕುಣಿತ ಸೇರಿದಂತೆ ಹಲವು ಕಲಾಪ್ರಕಾರಗಳ ಪ್ರದರ್ಶನ ನಡೆಯಿತು. ಕಲಾವಿದರ ಉತ್ಸಾಹಭರಿತ ಪ್ರದರ್ಶನವು ಜಾನಪದ ಕಲೆಯ ಶ್ರೀಮಂತಿಕೆ ಮತ್ತು ವೈವಿಧ್ಯವನ್ನು ಅನಾವರಣಗೊಳಿಸಿತು.

10 ಸಾಧಕರಿಗೆ ‘ಹಂಸ ಸಮ್ಮಾನ್–2026’

ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯ, ಪತ್ರಿಕೋದ್ಯಮ, ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ 10 ಸಾಧಕೋತ್ತಮರಿಗೆ ‘ಹಂಸ ಸಮ್ಮಾನ್–2026’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರಾದವರು ಎಸ್. ಸರವಣನ್, ಕಂನಾಡಿಗ ನಾರಾಯಣ, ವಿನೋದ್ ಬಿ. ಧಾಂಗೆ, ಬಿ.ಎಸ್. ವೆಂಕಟಾಚಲಪತಿ, ವೈ.ಬಿ.ಎಚ್. ಜಯದೇವ್, ಡಾ. ಬಿ.ಎಂ. ಪಟೇಲ್‌ಪಾಂಡು, ಶ್ರೀನಿವಾಸ ಗೌಡ, ಹಿರಿಯ ಡೊಳ್ಳು ಕಲಾವಿದ ಶ್ರೀನಿವಾಸ, ಸವಿತಾ ಗಣೇಶ್‌ಪ್ರಸಾದ್ ಹಾಗೂ ಡಾ. ಮಧುರಾಣಿ ಗೌಡ.

ವಿವಿಧ ಕ್ಷೇತ್ರಗಳಲ್ಲಿ ಸೇವೆ ಹಾಗೂ ಸಾಧನೆ ಮಾಡಿರುವ ಗಣ್ಯರನ್ನು ಒಂದೇ ವೇದಿಕೆಯಲ್ಲಿ ಗುರುತಿಸಿ ಗೌರವಿಸುವ ಮೂಲಕ ಕಾರ್ಯಕ್ರಮವು ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಸಾಧಕರಿಗೆ ಪ್ರೋತ್ಸಾಹ ನೀಡಿತು.

ಕಾರ್ಯಕ್ರಮದ ಪರಿಕಲ್ಪನೆ ಹಾಗೂ ಪ್ರಧಾನ ನಿರ್ವಹಣೆಯನ್ನು ಹಂಸ ಜ್ಯೋತಿ ಟ್ರಸ್ಟ್‌ನ ಸಂಸ್ಥಾಪಕ–ವ್ಯವಸ್ಥಾಪಕ ಟ್ರಸ್ಟಿ ಎಂ. ಮುರಳೀಧರ ವಹಿಸಿದ್ದರು. ಕಾರ್ಯನಿರ್ವಾಹಕ ಟ್ರಸ್ಟಿ ವಿಜಯ ಮುರಳೀಧರ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಹಿರಿಯ ಪತ್ರಕರ್ತರು, ಸಾಹಿತಿಗಳು, ಕಲಾವಿದರು, ಸಮಾಜಸೇವಕರು, ಶಿಕ್ಷಣ ಕ್ಷೇತ್ರದ ಗಣ್ಯರು ಹಾಗೂ ವಿವಿಧ ವೃತ್ತಿಪರ ಕ್ಷೇತ್ರಗಳ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ನಡೆದ ಸಮಾರಂಭವು ಜಾನಪದ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಪ್ರಸರಣದ ಮಹತ್ವವನ್ನು ಸಾರಿತು.