ಶಾಲಾ ಸಂಸತ್ ಪ್ರತಿನಿಧಿಗಳ ಪದಗ್ರಹಣ ಶಾಲಾ ಸಂಸತನಿಂದ ನಾಯಕತ್ವ ಗುಣ ವ್ಯಕ್ತಿತ್ವ ವಿಕಸನ ಪತ್ರಕರ್ತ ಜಗನ್ನಾಥ ಶೇರಿಕಾರ
ಶಾಲಾ ಸಂಸತ್ ಪ್ರತಿನಿಧಿಗಳ ಪದಗ್ರಹಣ
ಶಾಲಾ ಸಂಸತನಿಂದ ನಾಯಕತ್ವ ಗುಣ ವ್ಯಕ್ತಿತ್ವ ವಿಕಸನ ಪತ್ರಕರ್ತ ಜಗನ್ನಾಥ ಶೇರಿಕಾರ
ಚಿಂಚೋಳಿ: ಶಾಲಾ ಸಂಸತ್ತ ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸುವುದರ ಜತೆಗೆ ವ್ಯಕ್ತಿತ್ವ ವಿಕಸನ ಹಾಗೂ ಜವಾಬ್ದಾರಿಯುತ ನಾಗರಿಕರ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಪತ್ರಕರ್ತ ಜಗನ್ನಾಥ ಡಿ. ಶೇರಿಕಾರ ತಿಳಿಸಿದರು.
ಅವರು ಪಟ್ಟಣದ ಸಿದ್ಧಸಿರಿ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ಪ್ರತಿನಿಧಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಶನಿವಾರ ಮಾತನಾಡಿದರು.
ನಾಯಕತ್ವ ಗುಣ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿಲ್ಲ ಎಲ್ಲಾ ರಂಗಗಳಲ್ಲೂ ಅಗತ್ಯವಾಗಿದೆ. ಸಿದ್ಧಸಿರಿ ಸಂಸ್ಥೆ ಹಿಂದುಳಿದ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿದ್ದ ಮಾಜಿ ಸೈನಿಕ ಮಾರುತಿ ಅಪ್ಪಣ್ಣೋರ ಮಾತನಾಡಿ, ಮಕ್ಕಳು ಹೆಚ್ಚು ಅಂಕಗಳಿಸಿದರೂ ಪಾಲಕರಿಗೆ ಖುಷಿಯಾಗುತ್ತಿಲ್ಲ. ಇನ್ನಷ್ಟು ಅಂಕ ಬರಬೇಕಿತ್ತೆಂದು ಮಕ್ಕಳ ಮೇಲೆ ಒತ್ತಡ ಹೇರುತ್ತಾರೆ ಇದರಿಂದ ಮಕ್ಕಳು ಮಾನಸಿಕವಾಗಿ ಒತ್ತಡಕ್ಕೆ ಒಳಗಾಗಿ ಸಮಸ್ಯೆಗೆ ತುತ್ತಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಶೇ 35 ಅಂಕಗಳಿಸಿ ಉತ್ತೀರ್ಣರಾದರೆ ಪಾಲಕರು, ಊರಿನ ಜನರು ಹೆಮ್ಮೆ ಪಡುತ್ತಿದ್ದರು. ಈಗ ಶೇ 85 ಅಂಕಗಳಿಸಿದರೂ ಪಾಲಕರಿಗೆ 90ಕ್ಕಿಂತ ಹೆಚ್ಚು ಅಂಕ ಬೇಕಿದೆ. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲಿ ಅವರು ಪಡೆದ ವಿದ್ಯೆ ಬದುಕಿಗೆ ಉಪಯೋಗವಾದರೆ ಸಾಕು ಬದಲಾಗಿ ಅಂಕಗಳ ಹಿಂದೆ ಬೆನ್ನು ಹತ್ತಿಸಬೇಡಿ ಎಂದು ಕಿವಿ ಮಾತು ಹೇಳಿದರು.
ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ ಪ್ರಾಂಶುಪಾಲರಾದ ಪುಷ್ಪಿಕಾ ತಿರ್ಕೆ ಮಾತನಾಡಿ 3/4 ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಶಾಲೆಯಲ್ಲಿ 400 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಮಕ್ಕಳಿಗೆ ಸಂಸ್ಕಾರ ಭರಿತ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸಂಕಲ್ಪವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾದ ಪದ್ಮಾ, ಪ್ರೀತಂ ಮಾತನಾಡಿದರು. ಚಿಮ್ಮಾಈದಲಾಯಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಚಿಂಚೋಳಿಕರ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪ್ರಾಸ್ತಾವಿಕ ಮಾತನಾಡಿದ ಸಿದ್ಧಮ್ಮ ಅತಿಥಿಗಳ ಪರಿಚಯ ಮಾಡಿದರು. ಶಾಲಾ ಸಂಸತ್ತಿನ ಪದಾಧಿಕಾರಿಗಳ ಪದಗ್ರಹಣ ಮತ್ತು ಪ್ರಮಾಣ ವಚನ ಬೋಧನೆ ಶಿವಲೀಲಾ ನಡೆಸಿಕೊಟ್ಟರು. ಭವಾನಿ ಸ್ವಾಗತಿಸಿದರು. ಚಂದ್ರಕಲಾ ಹಾಗೂ ಅಶ್ವಿನಿ ನಿರೂಪಿಸಿದರು. ಪಲ್ಲವಿ ವಂದಿಸಿದರು.

