ದೊಡ್ಡಪ್ಪ ಅಪ್ಪ ಪ.ಪೂ. ಕಾಲೇಜಿನಲ್ಲಿ ಓರಿಯೆಂಟೇಶನ್ *

ದೊಡ್ಡಪ್ಪ ಅಪ್ಪ ಪ.ಪೂ. ಕಾಲೇಜಿನಲ್ಲಿ ಓರಿಯೆಂಟೇಶನ್ *

*ದೊಡ್ಡಪ್ಪ ಅಪ್ಪ ಪ.ಪೂ. ಕಾಲೇಜಿನಲ್ಲಿ ಓರಿಯೆಂಟೇಶನ್

ನಗರದ ದೊಡ್ಡಪ್ಪ ಅಪ್ಪ ವಸತಿ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾಲೇಜಿನ ಶಿಕ್ಷಣ ವ್ಯವಸ್ಥೆಯ ಪರಿಚಯಾತ್ಮಕ ಕಾರ್ಯಕ್ರಮವಾದ ಓರಿಯೆಂಟೇಷನ್ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂಎಸ್‌ಐ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನರೇಂದ್ರ ಬಡಶೇಸಿ ಅವರು ಮಾತನಾಡುತ್ತಾ, ಶಿಕ್ಷಣವೆಂದರೆ ವ್ಯಕ್ತಿತ್ವ ವಿಕಸನಗೊಳಿಸುವುದಾಗಿದೆ. ತಾಯಿ ಮಗುವಿನಲ್ಲಿ ತನ್ನ ಭಾಷೆಯಲ್ಲಿ ಸಂಸ್ಕಾರವನ್ನು ತುಂಬುತ್ತಾಳೆ. ಅದಕ್ಕಾಗಿಯೇ ಮಾತೃಭಾಷೆ ಎಂದು ಕರೆಯುತ್ತಾರೆ. ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ತರಬೇತಿ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಕಂಠಪಾಠ ಮಾಡಿ ಕಲಿಯುವುದಕ್ಕಿಂತ ಅರ್ಥ ಮಾಡಿಕೊಂಡು ಕಲಿತರೆ ಕಲಿಕೆ ಏರ್ಪಡುತ್ತದೆ.

ಕರ್ನಾಟಕದ ಇತರ ಭಾಗಗಳಿಗಿಂತಲೂ ಕಲಬುರ್ಗಿಯಲ್ಲಿ ಶೈಕ್ಷಣಿಕ ಅವಕಾಶಗಳು ಹೆಚ್ಚಾಗಿವೆ. ಟೀಚರ್‌ಗೂ ಗುರುವಿಗೂ ವ್ಯತ್ಯಾಸವಿದೆ. ಟೀಚ್ ಮಾಡುವವರು ಟೀಚರ್; ಗುರುವೆಂದರೆ ತನ್ನ ಅಂತರ್‌ದೃಷ್ಟಿಯಿಂದ ವಿದ್ಯಾರ್ಥಿಗಳ ಒಳಗಿರುವ ಆಂತರ್ಯದ ಶಕ್ತಿಯನ್ನು ಹೊರಹಾಕುವವನಾಗಿದ್ದಾನೆ. ವಿದ್ಯಾರ್ಥಿಗಳು ಸಕಾರಾತ್ಮಕ ಭಾವನೆಗಳನ್ನು ಇಟ್ಟುಕೊಳ್ಳಬೇಕು. ವಿಶ್ವದಲ್ಲಿ ಭಾರತದ ಕೀರ್ತಿಯನ್ನು ಎತ್ತಿ ಹಿಡಿಯುತ್ತೇನೆ ಎಂಬ ಮಹತ್ತರ ಗುರಿ ಇಟ್ಟುಕೊಳ್ಳಬೇಕು ಎಂದು ನುಡಿದರು.

"ಸೈನೋಸಿಯ" ಎಂಬ ಪದದಿಂದ "ಸೈನ್ಸ್" ಪದ ಹುಟ್ಟಿದೆ. ಸೈನೋಸಿಯ ಎಂದರೆ ಸತ್ಯವನ್ನು ಹುಡುಕುವುದು ಎಂದರ್ಥ. ವಿದ್ಯಾರ್ಥಿಗಳು ಪ್ರಶ್ನೆ ಕೇಳುವ ಪ್ರವೃತ್ತಿಯನ್ನು ಇಟ್ಟುಕೊಳ್ಳಬೇಕು. ವಿಜ್ಞಾನ ಹುಟ್ಟಿರುವುದೇ ಪ್ರಶ್ನೆಗಳಿಂದ. ನರೇಂದ್ರ ವಿವೇಕಾನಂದರಾದದ್ದು, ನ್ಯೂಟನ್ ಗುರುತ್ವಾಕರ್ಷಣ ಶಕ್ತಿಯನ್ನು ಕಂಡುಹಿಡಿದದ್ದು, ಬುದ್ಧ ಸಿದ್ಧಾರ್ಥನಾದದ್ದು ಪ್ರಶ್ನೆಗಳಿಂದ. ವ್ಯಕ್ತಿ ಏಕಾಗ್ರತೆಯಿಂದ, ಏಕಾಂತದಿಂದ ವಿಚಾರಿಸಿದಾಗ ಅಸಾಧ್ಯವಾದದ್ದು ಸಾಧ್ಯವಾಗುತ್ತದೆ. ವ್ಯಕ್ತಿ ಹಣದಿಂದಲ್ಲ, ಜ್ಞಾನದಿಂದ ಶ್ರೀಮಂತನಾಗಿರಬೇಕು ಎಂದು ಮಾರ್ಮಿಕವಾಗಿ ನುಡಿದರು.

ಇನ್ನೋರ್ವ ಅತಿಥಿಯಾಗಿರುವ ಮನೋವೈದ್ಯರಾದ ಡಾ. ಮೋನಿಕಾ ಕುಲ್ಸುರ್ ಅವರು ಮಾತನಾಡಿ, ವಿದ್ಯಾರ್ಥಿಗಳು ಮೊಬೈಲ್, ಸಿಗರೇಟ್ ಹಾಗೂ ಕುಡಿತದ ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳಬೇಕು. ಮಕ್ಕಳು ಸದ್ಗುಣಿಗಳಾಗಿದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ. ಸದ್ಗುಣಿಯಲ್ಲದ ವಿದ್ಯಾರ್ಥಿಯಿಂದ ಯಾವ ಸಾಧನೆಯನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಆಹಾರ-ವಿಹಾರಗಳು ಚೆನ್ನಾಗಿದ್ದರೆ ಅಧ್ಯಯನ ಸಾಧ್ಯ. ವಿದ್ಯಾರ್ಥಿಗಳಿಗೆ ಜ್ಞಾನ ಶಾಶ್ವತ ನೆನಪಾಗಿ ಉಳಿಯಲು ಪುನರಾವರ್ತನೆ ತುಂಬಾ ಮುಖ್ಯ. ಅಧ್ಯಯನದ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಬೇಕು. ನೆನಪಿನ ಶಕ್ತಿ ಹೆಚ್ಚಿಸಲು ನಿದ್ರೆ ಅತ್ಯಂತ ಮುಖ್ಯ. ಸೋಲು ಋಣಾತ್ಮಕ ಪ್ರೇರಣೆಯಾಗಬಾರದು; ಗೆಲುವಿನ ಸೋಪಾನವಾಗಬೇಕು ಎಂದರು.

ಅಧ್ಯಕ್ಷೀಯ ನುಡಿಗಳನ್ನು ಆಡಿದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ರೆಡ್ಡಿ ಅವರು, ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳು ತಾವು ವೈದ್ಯಕೀಯ ಕ್ಷೇತ್ರಕ್ಕೆ ಸಾಗಬೇಕಾ ಅಥವಾ ಇಂಜಿನಿಯರಿಂಗ್ ಕ್ಷೇತ್ರಕ್ಕೆ ಸಾಗಬೇಕಾ ಎಂಬುದನ್ನು ನಿರ್ಧರಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳಬೇಕು. ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದ ಹೊರತಾಗಿಯೂ ಭವಿಷ್ಯದಲ್ಲಿ ಹಲವಾರು ಅವಕಾಶಗಳು ವಿದ್ಯಾರ್ಥಿಗಳ ಎದುರಿವೆ. ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿ ಸಾಧನೆ ಮಾಡಬೇಕು ಎಂದು ನುಡಿದರು.

ಕಾಲೇಜಿನ ಪ್ರಾಂಶುಪಾಲರಾದ ವಿನೋದ್ ಕುಮಾರ್ ಎಲ್. ಪತಂಗೆ ಅವರು ಕಾಲೇಜಿನ ಚಟುವಟಿಕೆಗಳ ಪರಿಚಯಾತ್ಮಕ ಪಕ್ಷಿನೋಟ ನೀಡಿದರು. ಕಾರ್ಯಕ್ರಮದಲ್ಲಿ ಪಾಲಕರು ವಿದ್ಯಾರ್ಥಿಗಳ ಕಲಿಕೆಯ ಪ್ರಗತಿಯಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಡಾ. ಆನಂದ … ನಿರೂಪಿಸಿದರು. ಸಂತೋಷ್ ಬೋರೋಟಿ ಸ್ವಾಗತಿಸಿದರು. ವಂದನಾರ್ಪಣೆ ನೆರವೇರಿತು. ಕಾಲೇಜಿನ ಸಿಬ್ಬಂದಿ ಹಾಜರಿದ್ದರು.