ಸೃಜನಶೀಲ ದ್ವಿಭಾಷಾ ಸಾಹಿತಿ ಬಿಎಸ್ ಖೂಬಾ ಅವರ ನೆನಪು ಮಾತ್ರ

ಸೃಜನಶೀಲ ದ್ವಿಭಾಷಾ ಸಾಹಿತಿ ಬಿಎಸ್ ಖೂಬಾ ಅವರ ನೆನಪು ಮಾತ್ರ

ಸೃಜನಶೀಲ ದ್ವಿಭಾಷಾ ಸಾಹಿತಿ ಬಿ.ಎಸ್.ಖೂಬಾ

ಬೀದರ ಜಿಲ್ಲೆಯಲ್ಲಿ ಅನೇಕ ಪ್ರತಿಭಾವಂತ ಬರಹಗಾರರು, ಲೇಖಕರು, ಸಾಹಿತಿ,ಕವಿ,ಅನುವಾದಕರು ಇದ್ದಾರೆ.

ಅವರಲ್ಲಿ ಪ್ರಮುಖರಾಗಿ ದ್ವಿಭಾಷಾ ಸಾಹಿತಿಯೆಂದು ಪ್ರಖ್ಯಾತರಾದವರು ಪ್ರೊ.ಭಾಲಚಂದ್ರ ಜಯಶೆಟ್ಟಿ, ಡಾ.ಕಾಶಿನಾಥ ಅಂಬಲಗೆ, ಪ್ರೊ.ವೀರೇಂದ್ರ ಸಿಂಪಿ,ಪ್ರೊ. ಆರ್.ಕೆ.ಹುಎಉಗಿ ಇವರ ಸಾಲಿನಲ್ಲಿ ನಿಲ್ಲಬಲ ಹಿರಿಯ ಸಾಹಿತಿ, ಅನುವಾದಕ ಬಿ.ಎಸ್ ಖೂಬಾ ಅವರೊಬ್ಬರು. ಇವರು ಮೂಲತಃ ಕಲ್ಯಾಣನಾಡಿನ ರಾಜೋಳ ಗ್ರಾಮದವರು. ಅತ್ಯಂತ ಕಡು ಬಡತನದಲ್ಲಿ ಬೆಳೆದವರು. ಸುಸಂಸ್ಕೃತ ಮನೆತನ ರೈತಾಪಿ ಕುಟುಂಬದ ಶರಣಬಸಪ್ಪ ಖೂಬಾ ಹಾಗೂ ಶ್ರೀಮತಿ ರತ್ನಮ್ಮಾ ಖೂಬಾರ ಮಗನಾಗಿ 08-07-1938 ರಂದು ಜನಿಸಿದರು.

ರಾಜೋಳಾ, ಬಸವಕಲ್ಯಾಣದಲ್ಲಿ ಇವರ ಶಿಕ್ಷಣ ಒಂಬತ್ತನೆಯ ತರಗತಿವರೆಗೆ ನಡೆಯಿತು. ಇಲ್ಲಿ ಮರಾಠಿ ಮಾಧ್ಯಮದಲ್ಲಿ ಶಿಕ್ಷಣ ಕಲಿತರು. ಐದನೆಯ ತರಗತಿಗೆ ಮರಾಠಿ ಕಲಿತು ಆರನೆಯ ತರಗತಿ ಬರುವಾಗಲೇ ಕೊಪ್ಪಳದ ಪ್ರಸಿದ್ಧ ಶಿಕ್ಷಕರಾದ ಶ್ರೀಪಾದ್‌ಭಟ್ಟ ವೈದ್ಯರು ವರ್ಗವಾಗಿ ಕಲ್ಯಾಣಕ್ಕೆ ಬಂದರು. ಅವರು ಬಂಡೆಪ್ಪನವರನ್ನು ಕಂಡು ನೀನು ಪ್ರತಿಭಾವಂತ ಜಾಣ ವಿದ್ಯಾರ್ಥಿ ನೀವೆಲ್ಲರೂ ಕನ್ನಡಿಗರು ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆಯಬೇಕೆಂದು ಹೇಳಿ 6ನೇ ತರಗತಿಯಿಂದ ಕನ್ನಡ ಮಾಧ್ಯಮದ ಶಿಕ್ಷಣ ಕೊಡಲು ಪ್ರಾರಂಭಿಸಿದರು. ಶಾಲೆಯಲ್ಲಿ ಅಲ್ಲದೇ ಸ್ವತಃ ತಮ್ಮ ಮನೆಯಲ್ಲಿ ಸಂಪೂರ್ಣವಾಗಿ ಕನ್ನಡ ಶಿಕ್ಷಣ ಕಲಿಕೆಗೆ ಪ್ರೋತ್ಸಾಹ ಕೊಟ್ಟರಂತೆ. ಮೊದಲು ಕನ್ನಡ ಮಾತನಾಡಲು ಬರುತ್ತಿತ್ತು. ಆದರೆ ಕನ್ನಡದಲ್ಲಿ ಓದು-ಬರಹ ಬರುತ್ತಿರಲಿಲ್ಲ. ಕೇವಲ ಒಂದೇ ವರ್ಷದಲ್ಲಿ ಕನ್ನಡ ಕಲಿಸಿದ್ದಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿನ ಕಾವ, ಜಾಣ ಪರೀಕ್ಷೆಗೆ ಕುಳ್ಳರಿಸಿದಾಗ ಇವರೆಲ್ಲರೂ ಪಾಸಾದರು.ಅಂದಿನಿಂದ ಕನ್ನಡ ಭಾಷೆ,ಸಾಹಿತ್ಯ,ಸಂಸ್ಕೃತಿಯ ಬಗ್ಗೆ ಒಲವು ಮೂಡಿತು. ಅವರೇ ನನಗೆಲ್ಲ ಪೇರಣೆ ಪ್ರಭಾವ ನೀಡಿದ್ದಾರೆ ಎಂದು ಮುಕ್ತ ಕಂಠದಿಂದ ಗುರುಗಳನ್ನು ಸ್ಮರಿಸುತ್ತಾರೆ. ಜೊತೆಗೆ ಶ್ರೀಪಾದಭಟ್ಟ ವೈದ್ಯರ ಧರ್ಮ ಪತ್ನಿ ಶ್ರೀಮತಿ ಸರಸ್ವತಿ ಬಾಯಿ ಅವರಿಗೆ ಹೆಣ್ಣು ಮಕ್ಕಳೇ ಇದ್ದರು.ಗಂಡು ಮಕ್ಕಳು ಇರಲಿಲ್ಲ. ಬಂಡೆಪ್ಪ ಅವರು ಮನೆಗೆ ಹೋಗುವ ಗುರುಗಳನ್ನು ಮಾತಾಡಿಸುವ ಸಲುಗೆ ಬಿದ್ದಾಗ ಸರಸ್ವತಿಬಾಯಿ ನನಗೆ ಬರಿ ಹೆಣ್ಣುಮಕ್ಕಳು ಇದ್ದಾರೆ. ಹೀಗಾಗಿ ನನ್ನ ಗಂಡು ಮಗ ಬಂಡೆಪ್ಪ ಎಂದು ಕರೆದರು. ಅಂದಿನಿಂದ 2015ರವರೆಗೂ ಅವರ ವಾತ್ಸಲ್ಯದಲ್ಲಿಯೇ ಬೆಳೆದರು. ಹುಟ್ಟಿಸಿದ ತಾಯಿ ರತ್ನಮ್ಮವಾದರೆ ಶಿಕ್ಷಣ-ಸಾಹಿತ್ಯಕ್ಕೆ ಧಾರೆಯೆರದ ತಾಯಿ ಸರಸ್ವತಿಭಾಯಿ ಎಂದು ನೆನಪಿಸಿಕೊಳ್ಳುತ್ತಾರೆ. ಹೀಗೆ ಕನ್ನಡ,ಸಾಹಿತ್ಯ ಸ್ಪರ್ಶ ಇವರಲ್ಲಿ ಉಂಟಾಯಿತು.

ಹತ್ತನೆಯ ತರಗತಿಗಾಗಲೇ 1956 ರಲ್ಲಿ ಕಲಬುರಗಿ ಪ್ರತಿಷ್ಠಿತ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ಹೈಸ್ಕೂಲಿನಲ್ಲಿ ಪ್ರವೇಶ ಪಡೆದರು. ಬಹಳ ಬಡತನ, ಕಿತ್ತು ತಿನ್ನುವ ಬಡತನ ಆಜನ್ಮದಲ್ಲಿ ಬೆನ್ನು ಹತ್ತಿತ್ತು.ಇದನ್ನೆಲ್ಲ ಗಮನಿಸಿ ಹುಮನಾಬಾದ ತಾಲೂಕಿನ ಗಡವಂತಿ ಗ್ರಾಮದ ಕಲಬುರಗಿ ಮನೆತನದ ವಿರೂಪಾಕ್ಷಪ್ಪ ಹಾಗೂ ಪಾರಮ್ಮ ಕಲಬುರಗಿ ಸೇರಿಕೊಂಡು ತಮ್ಮ ಇರುವ ಅಯ್ಯಮ್ಮ ಎಂಬ ಏಕೈಕ ಮಗಳಿಗೆ ಗಂಡು ಹುಡುಕಲು ಹೋದಾಗ ಅನಿವಾರ್ಯವಾಗಿ ಬಂಡೆಪ್ಪ ಅವರನ್ನು ನೋಡಿದರು. ಹತ್ತನೆಯ ತರಗತಿ ಪಾಸಾಗಿದ್ದಾರೆ. ಒಳ್ಳೆಯ ಹುಡುಗ ಎಂದು ಎಲ್ಲರೂ ಮೆಚ್ಚಿ ಆತನಿಗೆ ಮದುವೆ ಮಾಡಲು ನಿರ್ಧರಿಸಿದರು. ಈ ವರ್ಷ ಓದುವುದು ಬೇಡ ಮದುವೆಯಾದ ಮೇಲೆ ಓದಲು ಹೋಗು ಎಂದು ಹೇಳಿದರು. ಒಂದು ವರ್ಷದಲ್ಲಿ 1957ರಲ್ಲಿ ಅಯ್ಯಮ್ಮ ಅವರೊಂದಿಗೆ ಮದುವೆಯಾದರು. ಈ ಸಂತತಿಯಲ್ಲಿ ಹೆಣ್ಣು ಮಕ್ಕಳು ಮಾತ್ರ ಇದ್ದರು, ಗಂಡು ಇರಲಿಲ್ಲ ಹೀಗಾಗಿ ಅಳಿತನಕ್ಕೆ ಗಡವಂತಿಗೆ ಬಂದರು.

ಒಂದು ವರ್ಷ ಮದುವೆ ಮಾಡಿಕೊಳ್ಳಲು ಮತ್ತು ಅಳಿತನಕ್ಕೆ ಬಂದ ಹೊಸ ವಾತಾವರಣ ಹೊಂದಿಕೊಳ್ಳಲು

 ಸಮಯವೇ ಹೋಯಿತು.ಮರುವರ್ಷ ಕಲಿಯಲು ಕಲಬುರಗಿಗೆ ಹೋಗಬೇಕೆಂಬ ಆಸೆಗೆ ಅತ್ತೆ-ಮಾವ ಓದುವುದು ಬೇಡ ಇರುವ ಆಸ್ತಿಯೆಲ್ಲ ನೋಡಿಕೊಂಡು ಹೋದರೆ ಸಾಕು ಎಂದು ಉತ್ತರ ನೀಡಿದರು. ತಂದೆಯ ಹತ್ತಿರ ಹೋಗಿ ತನ್ನ ಧೃಡ ನಿಲುವನ್ನು ಹೇಳಿದರು.ನನಗೆ ಮದುವೆ ಮಾಡಿದರೆ ಓದಲು ಮುಂದೆ ಕಳಿಸುತ್ತೇನೆಂದು ಹೇಳಿ ಈಗ ಬೇಡ ಎಂದರೆ ಹೇಗೆ ಎಂದು ಪ್ರಶ್ನಿಸಿದರು. ಒಂದು ವರ್ಷ ಮದುವೆ ಇದರಲ್ಲಿ ಸಮಯ ಹೋಯಿತು. ಈಗ ನಾನು ಸಂಸಾರ ಮಾಡುತ್ತಲೇ ಕಲಿಯಲು ಅವಕಾಶ ಕೊಡಲು ಕೋರಿ, ಬಂಡೆಪ್ಪನವರು ಮತ್ತೆ ಪಿಯುಸಿಗೆ ಕಲಬುರಗಿಯ ಸರಕಾರಿ ಪದವಿ ಕಾಲೇಜಿಗೆ ಸೇರಿದರು. ಇವರು ಪಿ.ಯು.ಸಿ ಇದ್ದಾಗಲೇ ಡಾ.ಶರಣಬಸಪ್ಪ ಅಪ್ಪ, ಜಷ್ಟಿಸ್ ಶಿವರಾಜ ಪಾಟೀಲ, ಹಾಗೂ ಶಿವಶರಣ ಪಾಟೀಲ ಜಾವಳಿ ಅವರು ಬಿ.ಎ ಓದುತ್ತಿದ್ದರಂತೆ. ಅಲ್ಲಿ ಕಾವ್ಯ ಸ್ಪರ್ಧೆ ಏರ್ಪಡಿಸಿದಾಗ 'ಯಾರಿಗಾಗಿ ಯಾರು ಬೇಕು' ಎಂಬ ಕವನ ಬಂಡೆಪ್ಪನವರು ಓದಿದರು. ಅದರಂತೆ ಜಾವಳಿ ಅವರು ಅನೇಕ ಕವಿಗಳು ಕವನ ಓದಿದರು. ಮೊದಲ ಸ್ಥಾನ ಬಂಡೆಪ್ಪ ಖೂಬಾ ಅವರಿಗೆ ಲಭಿಸಿತು. ಎರಡನೆಯ ಸ್ಥಾನ ಶಿವಶರಣ ಪಾಟೀಲ ಜಾವಳಿ ಪಡೆದರು. ಮುಂದೆ ಸಾಹಿತ್ಯದ ನಿರಂತರ ಅಧ್ಯಯನಕ್ಕೆ ತೊಡಗಿದರು. 1952ರಿಂದಲೇ ಬರವಣಿಗೆಗೆ ತೊಡಗಿದರು. ಆದರೆ ಪುಸ್ತಕ ಪ್ರಕಟಣೆಗೆ ತೊಡಗಿದ್ದು 1995ರಲ್ಲಿ ! ನಲವತ್ತು ಮೂರು ವರ್ಷಗಳ ನಂತರ !...

ಪಿ.ಯು.ಸಿ ಮುಗಿದ ಮೇಲೆ ಇವರಿಗೆ ಓದಲು ಬಿಡಲಿಲ್ಲ ಗೆಳೆಯರನ್ನು ವಿಚಾರಿಸಿದಾಗ ಟೀಚರ್ ಪೋಸ್ಟ್ ಬಿಡ್ತಾವ ಅರ್ಜಿ ಹಾಕು ಎಂದು ಸಲಹೆ ನೀಡಿದರು. ಅದರಂತೆ ಅ

ಅರ್ಜಿಯನ್ನು ಹಾಕಿದಾಗ ಶಿಕ್ಷಕರ ಹುದ್ದೆ ದೊರೆಯಿತು. ಶಿಕ್ಷಕರಾಗಿ ಬಹುಮಹತ್ವದ ಕೆಲಸ ಮಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಹೈಸ್ಕೂಲು ಮುಖ್ಯ ಗುರುಗಳಾಗಿ ನಿವೃತ್ತಿ ಹೊಂದಿದ್ದರು. ಶಿಕ್ಷಕನಾದೆ ಎಂದು ಓದನ್ನು ಅಲ್ಲಿಗೆ ಕಡಿತ ಮಾಡಲಿಲ್ಲ. ಜ್ಞಾನದ ಹಸಿವು ಅಪಾರವಾಗಿತು. ಮುಂದೆ ಬಿ.ಎ., ಎಂ.ಎ., ಕನ್ನಡ ಮತ್ತು ಎಂ.ಎ., ಹಿಂದಿ, ಬಿ.ಈಡ್, ಹಿಂದಿ ಸಾಹಿತ್ಯ ರತ್ನ, ಹಿಂದಿ ವಿಶಾರದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ಕನ್ನಡ-ಹಿಂದಿ ಭಾಷೆಗಳಲ್ಲಿ ಸಾಹಿತ್ಯ ರಚನೆಗೆ ತೊಡಗಿದರು. ಆಗಲೇ ಇವರಿಗೆ ಕನ್ನಡ, ಹಿಂದಿ, ಇಂಗ್ಲೀಷ, ಮರಾಠಿ ನಾಲ್ಕು ಭಾಷೆಗಳು ಕಲಿತು ಕೊಂಡಿದ್ದರು. ಭಾಷಾ ಪ್ರೌಢಿಮೆ ಅವರಲ್ಲಿ ಆಳವಾಗಿದೆ.

ಅಳಿತನಕ್ಕೆ ಬಂದು ಕಲಬುರಗಿ ಮನೆತನದವರಾಗಬೇಕಾದ ಬಂಡೆಪ್ಪ ಅವರು 'ಖೂಬಾ' ಎಂಬ ತಮ್ಮ ಮನೆತನದ ಹೆಸರನ್ನೇ ಮುಂದುವರೆಸಿದರು. ನಂತರ ತಮಗೆ ಹುಟ್ಟಿದ ಮಕ್ಕಳಿಗೆ ಕಲಬುರಗಿ ಮನೆತನದವರು ಎಂದು ಹೇಳಿದರು. ಕಲಬುರಗಿ ಮನೆತನ ಗಡವಂತಿಯಲ್ಲಿ ಬಾಳಲು ಇವರು ಅವಕಾಶ ಕಲ್ಪಿಸಿದರು. ಈಶ್ವರ ಕಲಬುರಗಿ, ವಿರುಪಣ್ಣ ಕಲಬುರಗಿ ಇಬ್ಬರು ಗಂಡು ಮಕ್ಕಳು, ಸುಮಂಗಲಾ, ಸುಜಾತಾ, ಜೈಶ್ರೀ, ಭಾಗಶ್ರೀ ಎಂಬ ನಾಲ್ಕು ಜನ ಹೆಣ್ಣು ಮಕ್ಕಳು ಅರ್ಧ ಡಜನ್ ಮಕ್ಕಳು ಈಗ ಎಲ್ಲಾ ಕುಟುಂಬದ ಜೊತೆಗೆ ಸೇರಿ ಇಪ್ಪತ್ತು ಮೊಮ್ಮಕ್ಕಳು, ಎಂಟು ಮರಿ ಮೊಮ್ಮಕ್ಕಳು ಕಂಡ ಹಿರಿಯ ಜೀವ. ಇವರ ಧರ್ಮಪತ್ನಿ ಇವರಿಗೆ ಸದಾ ಬೆನ್ನೆಲುಬಾಗಿ ನಿಂತರು. 02.01.2010ರಲ್ಲಿ ಅಯ್ಯಮ್ಮನವರು ಲಿಂಗೈಕ್ಯರಾದರು. ಐವತ್ತು ಮೂರು ವರ್ಷ ದಾಂಪತ್ಯ ಜೀವನ ಕಂಡ ಅಪರೂಪದ ಜೋಡಿಗಳು. ಮನೆಗೆದ್ದು ಮಾರು ಗೆದ್ದವರು ಎಂಬ ಗಾದೆಗೆ ಹೇಳಿ ಮಾಡಿಸಿದವರು ಬಂಡೆಪ್ಪನವರು. ಅವರ ಪೂರ್ಣ ಹೆಸರು ಬಂಡೆಪ್ಪ ಶರಣಪ್ಪ ಖೂಬಾ ಇವರನ್ನು ಬಿ.ಎಸ್.ಖೂಬಾ ಎಂದೇ ಸಾಹಿತ್ಯ ಲೋಕ ಗುರುತಿಸಿಕೊಂಡು ಬಂದಿದೆ.

ಶಿಕ್ಷಕರಾಗಿ ಹುಮನಾಬಾದ, ರಾಜೋಳ, ಗಡವಂತಿಗಳಲ್ಲಿಯೇ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಶಿಕ್ಷಕರ ಸಂಘ ಕಟ್ಟಿ ಬೆಳೆಸಿದ್ದಾರೆ. ಗುರುಭವನ ಕಟ್ಟಡವಾಗಲು ಖೂಬಾ ಅವರ ಪಾತ್ರ ಗಣನೀಯವಾಗಿದೆ. ಡಾ.ಜಯದೇವಿತಾಯಿ ಲಿಗಾಡೆ ಅವರನ್ನು ಕಾರ್ಯಕ್ರಮಕ್ಕೆ ಉದ್ಘಾಟನೆಗೆ ಆಹ್ವಾನಿಸಿ ಮೆರವಣಿಗೆ ಮಾಡಿದ ಕೀರ್ತಿಗೆ ಖೂಬಾ ಭಾಜನರಾಗಿದ್ದಾರೆ. ಸಾಹಿತ್ಯ ಸಾಂಸ್ಕೃತಿಕವಾದ ಅನನ್ಯತೆಯೊಂದಿಗೆ ರಾಜಕೀಯವಾಗಿಯೂ ಮುಂದೆ ಬಂದರು. ಮಾಜಿ ಸಚಿವರಾದ ಮತ್ತು ಶಿಕ್ಷಣ ಪ್ರೇಮಿಯಾದ ಲಿಂಗೈಕ್ಯ ಬಸವರಾಜ ಪಾಟೀಲ ಹುಮನಾಬಾದರವರ ಒಡನಾಡಿಯಾದರು. ಹಲವು ಗೆಳೆಯರೊಂದಿಗೆ ಸೇರಿ ಮಹತ್ವದ ಕ್ರಿಯಾ ಯೋಜನೆ ರೂಪಿಸಿದರು. ಪಾಟೀಲರ ಆತ್ಮೀಯ ಗೆಳೆಯರಾದರು. ಅದರಂತೆ ಶಿಕ್ಷಣ ಪ್ರೇಮಿ, ಶಿಕ್ಷಣ ತಜ್ಞ, ಎಂ.ಆರ್.ಗಾದಾ ಅವರ ಒಡನಾಡಿಯಾದರು. ಅನೇಕರೊಂದಿಗೆ ಒಳ್ಳೆಯ ಗೆಳೆತನ ಗಟ್ಟಿ ಸ್ನೇಹ ಬೆಸೆದುಕೊಂಡಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ 1952ರಲ್ಲಿಯೇ ಪ್ರಾರಂಭಿಸಿದರೂ ಇವರ ಕೃತಿ ಪ್ರಕಟವಾಗಿದ್ದು 1995ರಲ್ಲಿ. ಕಲಬುರಗಿಯ ಸಮರಸ ಪ್ರಕಾಶನ ಹುಟ್ಟು ಹಾಕಿದ ಡಾ.ಮಾಣಿಕರಾವ ಧನಾಶ್ರೀ, ಮತ್ತು ಡಾ.ಎಸ್.ಎಂ ಹಿರೇಮಠರ ಎರಡು ಪುಸ್ತಕ ಪ್ರಕಟಿಸಿದರು. ಎರಡು ದಶಕದಲ್ಲಿ ಹದಿನೆಂಟು ಕೃತಿ ಪ್ರಕಟಿಸಿದ್ದಾರೆ. 'ಸರಸ್ವತಿತನಯಜಿಮ್ಮ' ಕಾವ್ಯನಾಮ, ಹುಲಿಯ ಸಿದ್ದೇಶ್ವರ ಆಧುನಿಕ ವಚನಗಳ ಅಂಕಿತ. 1959ರಿಂದ 1996 ರವರೆಗೆ ಅಂದರೆ 37 ವರ್ಷಗಳ ಕಾಲ ಶಿಕ್ಷಕರಾಗಿ ದುಡಿದಿದ್ದಾರೆ. ಆ ಶಿಕ್ಷಣದ ಅನುಭವ ಅವರಿಗಿದೆ. ನಿವೃತ್ತಿಯ ನಂತರವೂ ಕ್ರೀಯಾಶೀಲರಾಗಿ ಬರಹಗಾರರಾಗಿ. ಅನುವಾದಕರಾಗಿದ್ದಾರೆ. 

ಅಳುನಗೆಯ ಸುಳಿಯಲ್ಲಿ ಪೆದ್ದಜಿ (ಖಂಡಕಾವ್ಯ), ಐವತ್ತೆಂಟರಲ್ಲಿ ಅನುರತ್ನನ ಪೌರುಷ (ಕಾವ್ಯ),

ಯುಗವಾಣಿ (ಪ್ರಬಂಧಕಾವ್ಯ),ಧರಿನಾಡಿನ ಗಂಡುಗಲಿಯ ರಾಮ (ಜೀವನ ಚರಿತೆ), ಶತಕಾಂತ್ಯದ ವಚನ ಶತಕ (ಆಧುನಿಕ ವಚನ),ಬಿಂಬ ಪ್ರತಿಬಿಂಬ (ಸಣ್ಣಕತೆಗಳು), ಮುಗ್ಧ ಸಂಗಯ್ಯ (ಜೀವನ-ಸಂಶೋಧನೆ),ಸಹಯೋಗ ಸ್ನೇಹಿ ಎಂ.ಆರ್. ಗಾದಾ (ಜೀವನ ಚರಿತೆ) ವಿಚಾರ ವೀಚಿ, ರಹಸ್ಯ ರಂಜನಿ, ದಿವ್ಯರಶಿ (ಅಧ್ಯಾತ್ಮ ಮೂರು ಚಿಂತನೆಗಳು) ಪುರಸ್ಕಾರ ಮತ್ತು ಕಥಾ ಭಾರತಿ (ಅನುವಾದಿತ ಕಥೆಗಳು) ಯಾಜ್ಞಸೇನಿಯ ಆತ್ಮಕಥನ (ಕನ್ನಡದಿಂದ ಹಿಂದಿಗೆ ಅನುವಾದ) ಕನ್ನಡ ಹಿಂದಿ ಕಾವ್ಯಧಾರೆ (ತೌಲನಿಕತೆ) ವಚನ ಪ್ರಭಾ, ಹಾಗೂ ಬಸವಲಿಂಗ ಪಟ್ಟದೇವರ ವಚನಗಳಲ್ಲಿ ನಾವು ಆಚರಣೆಗಳು, ಹಿಂದಿಗೆ ಅನುವಾದಿಸಿದ್ದಾರೆ. ಹೀಗೆ ಹದಿನೆಂಟು ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದಂತೆ ಹಿಂದಿ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ.

ಇವರ ಸೇವೆಯನ್ನು ಪರಿಗಣಿಸಿ ಜಿಲ್ಲಾ ಶಿಕ್ಷಕ ಪ್ರಶಸ್ತಿ, ಸುರಭೀ ಪ್ರಶಸ್ತಿ, ಸುವರ್ಣ ಕನ್ನಡಿಗ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹುಮನಾಬಾದ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಬೀದರ ಜಿಲ್ಲಾ ಪ್ರಥಮ ಆಧುನಿಕ ವಚನ ಸಾಹಿತ್ಯ ಸಮ್ಮೇಳನ ಸಸ್ತಾಪೂರ ಸಮ್ಮೇಳನಾಧ್ಯಕ್ಷತೆ ಗೌರವ ತಂದಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ,ಸಿದ್ದಾರ್ಥ ಪ್ರಶಸ್ತಿ, ಕಲ್ಯಾಣಿ ರತ್ನ ಪ್ರಶಸ್ತಿ, ಧರಿನಾಡ ಸಿರಿ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಹುಮನಾಬಾದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ, ಗುರುಭವನ ಸಮಿತಿ ಅಧ್ಯಕ್ಷರಾಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಧರಿನಾಡು ಕನ್ನಡ ಸಂಘದ ಗೌರವಾಧ್ಯಕ್ಷರಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳೊಂದಿಗೆ ಒಡನಾಟ ಹೊಂದಿದ್ದಾರೆ. ಅನೇಕ ಪ್ರಶಸ್ತಿ ಗೌರವಗಳು ಹಾಗೂ ಕನ್ನಡ ಪರಸಂಘಟನೆಗಳ ಪದಾಧಿಕಾರಿಗಳಾಗಿ ದುಡಿದಿದ್ದಾರೆ.

ಯಾವ ರಾಗ ದ್ವೇಷ ಅಸೂಯೆಗಳಿಗೆ ಒಳಗಾಗದೇ ತಮ್ಮದೇ ಆದ ಕಾಯಕ-ಜೀವನ ಮೌಲ್ಯಗಳನ್ನು ಕಾಪಾಡಿಕೊಂಡು ಬಂದವರು. ಎಲ್ಲರಿಗೂ ಅಜಾತ ಶತ್ರುವಾಗಿ ಉಳಿದಿದ್ದಾರೆ. ತಮ್ಮ ಎಂಬತ್ತೆಂಟರ ಹರೆಯದಲ್ಲೂ ಸಹಿತ ಕ್ರೀಯಾಶೀಲರಾಗಿದ್ದಾರೆ. ನಿವೃತ್ತಿಯ ನಂತರ ಕಳೆದ ಹತ್ತು ಹದಿನೈದು ವರ್ಷಗಳಿಂದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರರಾಗಿ, ಮೌಂಟ್ ಅಬೋಕ್ಕೆ ಹೋಗಿ ಬಂದಿದ್ದಾರೆ. ಪ್ರತಿನಿತ್ಯ ಮುಂಜಾನೆ ಹುಮನಾಬಾದನಲ್ಲಿ, ಸಾಯಂಕಾಲ ಗಡವಂತಿಯಲ್ಲಿ ಆಧ್ಯಾತ್ಮಿಕ ತತ್ವ ಸಂದೇಶ ನೀಡುತ್ತಿದ್ದಾರೆ. ಶರಣ ವಚನಗಳ ಸಂಸ್ಕೃತಿ ಹಾಗೂ ಈಶ್ವರಿ ವಿಶ್ವವಿದ್ಯಾಲಯದ ಓಂ ಶಾಂತಿ ಎರಡನ್ನು ಅಪ್ಪಿ ಒಪ್ಪಿ ನಡೆದುಕೊಂಡು ಬರುತ್ತಿದ್ದಾರೆ.

ಬಿ.ಎಸ್.ಖೂಬಾ ಅವರು ನಮ್ಮ ನಾಡಿನ ಹೆಮ್ಮೆಯ ಕವಿ. ತಮ್ಮ ಅಪಾರವಾದ ಅನುಭವಗಳನ್ನು ಅಕ್ಷರರೂಪ ನೀಡಿ ಕಾವ್ಯವಾಗಿಸಿದ್ದಾರೆ. ಅವರ ಕವಿತೆಗಳಲ್ಲಿ ಸಾಮಾಜಿಕ ತುಡಿತವಿದೆ. ಅಂಧಕಾರವನ್ನು ಪ್ರಶ್ನಿಸುವ ಎದೆಗಾರಿಕೆ ಇದೆ. ರಾಜಕೀಯ ಮುಖವಾಡಗಳನ್ನು

ಬಯಲಿಗೆಳೆಯುತ್ತಾರೆ. ಧರ್ಮದಲ್ಲಿನ ಅಸಮಾನತೆ ಎತ್ತಿ ತೋರಿಸುತ್ತಾರೆ. ಪರಿಸದೆ ನಾಡು,ನುಡಿ, ಭಾಷೆ,ಸಂಸ್ಕೃತಿ ಸಾಮಾಜಿಕತೆ,ಧಾರ್ಮಿಕ, ಪ್ರಚಲಿತ ವಸ್ತು ವಿಷಯಗಳ ಬಗ್ಗೆ ಕಳಕಳಿಯಿದೆ.. ಗಮನ ಸೆಳೆವ ಪದ್ಯಗಳನ್ನು ಅವರು ಬರೆದಿದ್ದಾರೆ.

ತ್ರಿಪದಿ, ಚೌಪದಿ, ಲಲಿತರಗಳೆ, ಐದು ಮಾತ್ರೆಗಳ ನಾಲ್ಕು ಗಣಗಳ ಛಂದಸ್ಸಿನಲ್ಲಿ ಪ್ರಾಸ, ಅಲಂಕಾರ, ಛಂದಸ್ಸುಗಳನ್ನು ಬಳಸಿಕೊಂಡು ಮುಕ್ತವಾಗಿ ಕಾವ್ಯ ರಚಿಸಿದ್ದಾರೆ. ಉತ್ತಮವಾದ ಅಂಕಿತ ಕಾವ್ಯನಾಮ ಕೂಡಾ ಹೊಂದಲಾಗಿದೆ ಆದರೆ ಯಾವುದೇ ಕಾಲಘಟ್ಟದ ಅಥವಾ ಪ್ರಕಾರಕ್ಕೆ ಸೀಮಿತವಾಗದೇ ತಮ್ಮದೇ ಆದ ದೇಸಿ ಮಾರ್ಗದ ಮೂಲಕ ಕವನ ಕಟ್ಟಿದ್ದು ಗಮನಿಸಬಹುದಾಗಿದೆ. ಅವರು ಅವರದೇ ಸ್ವತಂತ್ರವಾದ ಕಾವ್ಯ ಮಾರ್ಗ ಕಂಡುಕೊಂಡು ರಚಿಸಿದ್ದಾರೆ. ಇದಕ್ಕೆ ಅವರ ದಟ್ಟವಾದ ಅನುಭವ ಓದಿನ ವಿಸ್ತಾರವೇ ಸಾಕ್ಷಿಯಾಗಿದೆ. ಕವಿತೆ, ಕಾವ್ಯ ಅದೊಂದು ಅನುಭವದಂತೆ ರಚಿಸಿದ್ದಾರೆ. ಯುಗವಾಣಿ ಕವನ ಸಂಕಲನ ಇದಕ್ಕೆ ಉದಾಹರಣೆ. ಇಲ್ಲಿ ಪ್ರಬಂಧ ಕಾವ್ಯವೆಂದು ಹೆಸರಿಸಿದ್ದಾರೆ. 

ಯೋಗ ಮೂರು ಬಗೆಯಲಿ 

ನಾನು ನೂರು ಯೋಜನೆಗಳಿಗೆ 

ಆಕಾರಕೊಟ್ಟಿಹೇನು 

ಸಾಕಾರ ಅವರೊಳಗೆ 

ಕಂಡಿರದು ಹಿಡಿತಿಂದ ತಿಳಿದುಕೊಂಡರೆ 

ಇಳೆಗೆ ಸೊಗಸಲ್ಲದೇ ದೇವಾ? ಹುಲಿಯ ಸಿದ್ದೇಶ್ವರ

ಎಂದು ಹೇಳುತ್ತ ಸಹಜವಾಗಿ ರಚಿಸಿದ್ದಾರೆ. ಹಾಗೇ ಚಿಂತಕರು ತಮಗಾಗಿ ಅಲ್ಲ ನಮಗಾಗಿ ಹೇಳಿರುವ ವಿಚಾರದಲ್ಲಿ ಹೀಗೆ ಹೇಳುತ್ತಾರೆ.

ಬಸವಣ್ಣ ಹೇಳಿರುವ 

ಏಳು ಸೂತ್ರದ ಕಾವ್ಯ 

ಅಂಬೇಡ್ಕರರಲ್ಲಿ ಬುದ್ಧ 

ತೋರಿದ ಕಾವ್ಯ 

ಏಸುವಿನಲ್ಲಿ ಕರುಣೆಯ 

ಮಿಂದಿರುವ ಆ ಭವ್ಯ

 ದರ್ಶನವು ನಮಗಾಗಿ 

ಹುಲಿಯ ಸಿದ್ದೇಶ್ವರ

ಎನ್ನುವಲ್ಲಿ ಖೂಬಾ ಅವರು ಬುದ್ಧ-ಬಸವ ಅಂಬೇಡ್ಕರ ಏಸು ಅವರ ಚಿಂತನೆ ಭವ್ಯದರ್ಶನವು ನಮಗಾಗಿವೆ ಎಂಬ ಸಾಮಾಜಿಕ ನ್ಯಾಯವನ್ನು ಕವಿ ಹೇಳಿದ್ದು ಗಮನಿಸಬಹುದಾಗಿದೆ. ಅವರ ಕವಿತೆಗಳು ಮನಸ್ಸಿಗೆ ಮುದ ನೀಡುತ್ತವೆ. ಒಳ್ಳೆಯ ಗಂಭೀರ ಕವಿತೆ ಕಟ್ಟಿದ್ದಾರೆ. 'ಪೆದ್ದಜಿಮ್ಮ' ಎಂಬ ಕವನ ಸಂಕಲನ ಡಿ.ವಿ.ಜಿ ಅವರನ್ನು ಹಾಗೂ ಜಿ.ಪಿ. ರಾಜರತ್ನಂ ಅವರ ಕಾವ್ಯ ನೆನಪಿಸುತ್ತವೆ. ಐವತ್ತೆಂಟರಲ್ಲಿ ಅನುರುತ್ತನ ಪೌರುಷ ಕವನ ಸಂಕಲನ ಹೊಸ ನೋಟಗಳು ಕಟ್ಟಿಕೊಡುತ್ತವೆ. ಇದರೊಂದಿಗೆ ಅವರು ಆಧುನಿಕ ವಚನಗಳನ್ನು ರಚಿಸಿದ್ದಾರೆ. ಅದರಂತೆ ಕೆಲವು ತತ್ವಪದಗಳನ್ನು ಕೃತಿಯಲ್ಲಿ ಡಾ.ಎಸ್‌.ಎಂ ಹಿರೇಮಠರು ದಾಖಲಿಸಿದ್ದಾರೆ ಸಮಾಜೋನ್ನತಿಗಾಗಿ ವಚನ ತತ್ವಪದ ರಚಿಸಿದ್ದಾರೆ.

ದೈವವನು ನಂಬುತ್ತ 

ಕುಳಿತವನ ದೈವದಲಿ 

ದೈನ್ಯತೆ ನೆಲೆಗೊಂಡು

 ಹೇಡಿಯಾಗುವವನವನು 

ತನ್ನ ರೈತರ ಲಿಖಿತ 

ತನ್ನ ಕೈಯಲಿಹುದು 

ಇದವರಿತು ಬಾಳಿದವ 

ದೈವದಾಟಕ್ಕೆ ನಂಬಿ 

ಮರುಳುಗಾದಂತಿಹರು

 ಹುಲಿಯ ಸಿದ್ದೇಶ್ವರಾ

ಇಲ್ಲಿಯ ಆಧುನಿಕ ವಚನಗಳಿಗೆ ದೈವತ್ವದ ಆಧ್ಯಾತ್ಮದ ಸ್ಪರ್ಶವನ್ನು ನೀಡಿದ್ದಾರೆ. ಇಂತಹ ಹಲವು ವಚನಗಳು ಉತ್ತಮವಾಗಿವೆ.

ಕನ್ನಡ ಹಿಂದಿ ಕಾವ್ಯಧಾರೆ ಎಂಬ ಎರಡು ಭಾಷೆಗಳ ಕವಿತೆಗಳು ಇವೆ. ಆದರೆ ಎರಡು ಭಾಷೆಯ ಕಾವ್ಯ ಚರಿತ್ರೆಯನ್ನು ಬಹು ಸೊಗಸಾಗಿ ವಿವರಿಸಿದ್ದಾರೆ. ಈ ಕನ್ನಡ ಹಿಂದಿ ಕಾವ್ಯದ ಹುಟ್ಟು ಸ್ವರೂಪ ಲಕ್ಷ್ಮಣ ಸಂಗತಿಗಳು, ಕಾವ್ಯ ಪರಂಪರೆ ಬೆಳೆದು ಬಂದ ಬಗೆಯ ವಿಶ್ಲೇಷಣೆಯನ್ನು ಮಾಡಿ ಹೇಳಿದ್ದಾರೆ. ಇದೊಂದು ಕಾವ್ಯ ಶಾಸ್ತ್ರ ಚರಿತ್ರೆಯಾಗಿ ಖೂಬಾ ರಚಿಸಿದ್ದಾರೆ.ಕವಿತೆಗಳನ್ನು ಸಹ ರಚಿಸಿದ್ದಾರೆ. 

ಗ್ರಾಮೀಣ ಪ್ರದೇಶದ ಜೀವನ ವಿಧಾನಗಳ ಕುರಿತಾದ ಮಹತ್ವದ ಸಣ್ಣಕತೆ ಬರೆದಿದ್ದಾರೆ. ಇವು ಅತ್ಯಂತ ಸುಲಭವಾಗಿ ಹೇಳಬಹುದಾಗಿದೆ. ಸರಳವಾದ ಶೈಲಿ, ನಿರೂಪಣೆ ವಸ್ತುಗಳಿಂದ ಗಮನ ಸೆಳೆವ ಕಥೆಗಳಾಗಿವೆ. ಅಲ್ಲದೇ ಹಿಂದಿಯ 19 ಭಾಷೆಗಳ ಹಿಂದಿ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ ಕಥಾ ಭಾರತಿ ಎಂದು ಹೆಸರಿಸಿದ್ದಾರೆ. ಈ ಎಲ್ಲಾ ಕಥೆಗಳು ಅನುವಾದವೆಂದು ಎಲ್ಲೂ ಅನ್ನಿಸುವುದಿಲ್ಲ ಎಲ್ಲವೂ ಅತ್ಯಂತ ಯೋಗ್ಯವಾಗಿವೆ. ಕನ್ನಡದಲ್ಲಿ ಬರೆದವುಗಳು ಎಂಬ ಸೃಜನಶೀಲತೆ ಅದರಲ್ಲಿ ಕಂಡು ಬರುತ್ತದೆ. ಈ ಕೃತಿಯನ್ನು ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಪ್ರಕಟಿಸಿದೆ. ಪುರಸ್ಕಾರ ಎಂಬ ಹಿಂದಿ ಕಥೆಗಳ ಕುರಿತಾದ ಎರಡು ಸಣ್ಣಕಥೆಗಳ ಸಂಗ್ರಹ ಅನುವಾದಿಸಿದ್ದಾರೆ. 69 ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಬಿಂಬ ಪ್ರತಿಬಿಂಬ ಕಥೆಗಳು ಸೃಜನಶೀಲತೆಯಿಂದ ಕೂಡಿವೆ. ತಮ್ಮ ದೈನಂದಿನ ದಿನಗಳಲ್ಲಿ ಕಂಡುಕೊಂಡ ಅನುಭವಗಳೇ ಕಾವ್ಯವಾಗಿವೆ. ಈ ಕಾವ್ಯ ಸಮಾಜಮುಖಿ ಚಿಂತನೆ ಒಳಗೊಂಡಿವೆ.

ಯಾಜ್ಞಸೇನಿಯ ಆತ್ಮಕಥನ ಕನ್ನಡದಲ್ಲಿ ಡಾ.ಜಯದೇವಿ ಗಾಯಕವಾಡ ರಚಿಸಿದ ಕಾದಂಬರಿ ಅಪರೂಪದ ವಸ್ತು ದೃಷ್ಟಿಯಿಂದ ಗಂಭೀರವಾಗಿ ಹೊರ ಬಂದಿವೆ. ಈ

ಕಾದಂಬರಿ ಅಷ್ಟೇ ಸಮಂಜಸವಾಗಿ ಹಿಂದಿಗೆ ಅನುವಾದಿಸಿದ್ದಾರೆ. ಕನ್ನಡದ ಮಹತ್ವದ ಕಾದಂಬರಿ ಹಿಂದಿ ಲೋಕಕ್ಕೆ ಪರಿಚಯಿಸಿದ್ದಾರೆ. ವಚನ ಪ್ರಭಾ ಕನ್ನಡದ ಪ್ರಮುಖ ವಚನಕಾರರ ವಾಚನಕಾರ್ತಿಯರ ವಚನಗಳನ್ನು ಕನ್ನಡದಿಂದ ಹಿಂದಿಗೆ ಅನುವಾದಿಸಿದ್ದಾರೆ. ಇಲ್ಲಿ ಗಟ್ಟಿಯಾದ ಅನುವಾದ ಮೂಡಿ ಬಂದಿವೆ. ಅನುವಾದ ಕ್ಷೇತ್ರದಲ್ಲಿ ಹದವರಿತ ಅನುವಾದ ಸೃಜನಶೀಲ ಕೃತಿಯ ಅಧ್ಯಯನ ಮಾಡಿ, ಸೃಜನಾತ್ಮಕವಾಗಿ ವಿಮರ್ಶಾ ದೃಷ್ಟಿಕೋನದಿಂದ ಇಲ್ಲಿನ ಕತೆಗಳನ್ನು ಅನುವಾದಿಸಿದ್ದಾರೆ. ಇವರೊಬ್ಬ ಶ್ರೇಷ್ಠ ಅನುವಾದಕರಲ್ಲಿ ಒಬ್ಬರಾಗಿದ್ದಾರೆ.

ಎಂ.ಆ‌ರ್.ಗಾದಾ ಹಾಗೂ ರಾಮಚಂದ್ರ ವೀರಪ್ಪನವರ ಕುರಿತಾದ ಎರಡು ಮಹತ್ವದ ಜೀವನ ಚರಿತ್ರೆಯನ್ನು ರಚಿಸಿದ್ದಾರೆ. ಶಿಕ್ಷಣ ಪ್ರೇಮಿ, ಶಿಕ್ಷಣ ತಜ್ಞರಾಗಿ, ಆದರ್ಶ ಜೀವನ ಕಂಡು ಕಾಣುತ್ತಿರುವ ಗಾದಾ ಅವರನ್ನು ಸಹಜ ಯೋಗ ಎಂದು ಹೆಸರಿಸಿದ್ದಾರೆ. ಅವರ ಜೀವನ ಚರಿತ್ರೆಯೊಂದಿಗೆ ಚಿಟಗುಪ್ಪ ತಾಲೂಕಾ ಆದ ನಂತರ ಹುಮನಾಬಾದ ಹೇಗೆ ಬೆಳವಣಿಗೆ ಆಯಿತೆಂಬ ದಿಟ್ಟ ಧೋರಣೆ ಅವರಲ್ಲಿ ಕಂಡು ಬರುತ್ತದೆ. ಸ್ವಾತಂತ್ರ್ಯ ಹೋರಾಟ ಹಾಗೂ ಹೈದ್ರಾಬಾದ ಸಂಸ್ಥಾನದ ಸರದಾರ ಎಂದೇ ಪ್ರಖ್ಯಾತರಾದ ರಾಮಚಂದ್ರ ವೀರಪ್ಪನವರ ಕುರಿತಾದ ಅವರ ಬದುಕು ಹೋರಾಟ ಜೀವನವನ್ನು ಧರಿನಾಡು ಗಂಡುಗಲಿರಾಮ ಎಂದು ಹೆಸರಿಸಿದ್ದಾರೆ. ಇವರ ಕುರಿತ ಸಮಗ್ರ ಜೀವನ ವಿವರ ಅರಿಯುವರಿಗೆ ಆಕರ ಗ್ರಂಥವಾಗಿವೆ.

'ಮುಗ್ಧ ಸಂಗಯ್ಯ' ಗಡವಂತಿಯಲ್ಲಿ ಗವಿಯಿದ್ದು ಅವರ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ. ಪುರಾಣದ ಸಹಾಯದಿಂದಲೇ ಒಂದು ಗ್ರಂಥ ರಚಿಸಿದ್ದಾರೆ. ಇದರಲ್ಲಿ ಹತ್ತು ಹಲವು ಚಿಂತನೆ, ಶರಣರ ಸ್ಮಾರಕ ಶೋಧಗಳಾಗಿ ಅನುವು ಮಾಡಿಕೊಡುತ್ತಾರೆ. ಈ ಕೃತಿಯನ್ನು ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಪ್ರಕಟಿಸಿದೆ. ಎಲ್ಲಾ ಸಾಹಿತ್ಯದ ಜೊತೆಗೆ ಆಧ್ಯಾತ್ಮದ ಚಿಂತನೆಗೆ ತೊಡಗಿದರು. ಮನಸ್ಸು ದೇಹ ಹಗುರವಾಗಿತು. ಬ್ರಹ್ಮಕುಮಾರನಾಗಿ ಪ್ರಜಾಪಿತ ಈಶ್ವರಿ ವಿಶ್ವ ವಿದ್ಯಾಲಯದ ಓಂ ಶಾಂತಿ ವಿಚಾರ ತಿಳಿದುಕೊಂಡು ಅದರಂತೆ ನಡೆಯುತ್ತಿದ್ದಾರೆ. ವಿಚಾರ ವೀಚಿ, ರಹಸ್ಯ ರಂಜನೆ, ದಿವ್ಯರಶ್ಮಿ ಎಂಬ ಮೂರು ಪುಸ್ತಕ ಹೊರ ತಂದಿದ್ದಾರೆ. ಆಧ್ಯಾತ್ಮದಲ್ಲಿ ತಾವು ಕಂಡುಕೊಂಡ ಸತ್ಯವನ್ನು ಹೇಳಿದ್ದಾರೆ ಆಧ್ಯಾತ್ಮದಲ್ಲಿ ಬೇರೂರುವ ಹಾಗೇ ಲೇಖನಗಳು ಓದಿದವರಿಗೆ ಮನಸ್ಸಿನಲ್ಲಿ ನಾಟುತ್ತವೆ. ಸಮಗ್ರವಾದ ಚಿಂತನೆ ಓಂ ಶಾಂತಿಯಲ್ಲಿ ಕಾಣಬಹುದೆಂದು ಅಲ್ಲಿಯ ಆಧ್ಯಾತ್ಮದ ವಿಚಾರಧಾರೆ ಎಲ್ಲಾ ಜನರಿಗೆ ಮುಕ್ತ ಓದಲು ಅವಕಾಶ ಕಲ್ಪಿಸಿದ್ದಾರೆ. ಇದೊಂದು ಮಹತ್ವದ ಕೃತಿಯಾಗಿದೆ.

ಅವರ ಒಟ್ಟು ಬರಹಗಳು ಸಮಾಜಪರ ಜನಮುಖಿ ಸಂವೇದನೆ ಬಂದಿವೆ. ಶಾಂತಿ, ಸಮಾನತೆ, ಸಹೋದರತೆ, ಭಾತೃತ್ವ ಸಮಾನ ಚಿಂತನೆ ಅವರಲ್ಲಿ ಕಂಡು ಬರುತ್ತವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಮಾನವ ಪ್ರಜ್ಞೆ, ಮಾನವೀಯ ಮೌಲ್ಯ ಪ್ರತಿಪಾದಿಸುವಂತ ಅವರ

ಬರವಣಿಗೆ ಇವೆ ಅವನ್ನು ನಾವು ಮುಕ್ತ ಮನಸ್ಸಿನಿಂದ ಅಧ್ಯಯನ ಮಾಡಬೇಕಾಗಿದೆ. , ಎಲ್ಲಾ ಅವರ ಸಾಹಿತ್ಯ ಮಾನವೀಯತೆ ಹಾದಿಯಲ್ಲಿವೆ. ಅವರ ಚಿಂತನೆಗಳು ಬರಹಗಳು ಕಂಡು ಡಾ.ಸೋಮನಾಥ ಯಾಳವಾರ ಮಾರ್ಗದರ್ಶನದಲ್ಲಿ ಬಿ.ಎಸ್.ಖೂಬಾ ಅವರ ಕಾವ್ಯ ಕುರಿತ ಎಂ.ಫಿಲ್ ಮತ್ತು ಅವರ ಸಮಗ್ರ ಅಧ್ಯಯನ ತೆಗೆದುಕೊಂಡು ಪಿಎಚ್.ಡಿ ಅಧ್ಯಯನವನ್ನು ಶರಣಬಸವ ವಿಶ್ವವಿದ್ಯಾಲಯದ ಡಾ.ಪ್ರಭಾವತಿ ಚಿತ್ತಕೋಟಿ ಅವರ ಮಾಡಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದವರು. ಡಾ.ಗವಿಸಿದ್ದಪ್ಪ ಪಾಟೀಲರು ಕಲ್ಯಾಣದ ಬೆಳಗು ಕೃತಿಯಲ್ಲಿ ಪರಿಚಯಿಸಿದ್ದಾರೆ. ಪುರಸ್ಕೃತ ಕೃತಿಗಳ ಸಮೀಕ್ಷೆಯಲ್ಲಿ ಪ್ರಶಸ್ತಿ ಪಡೆದ ಕವನ ಸಂಕಲನಗಳಲ್ಲಿ ಯುಗವಾಣಿ ಕಾವ್ಯವನ್ನು ವಿಮರ್ಶಿಸಿದ್ದಾರೆ. ಎಚ್.ಕಾಶಿನಾಥ ರೆಡ್ಡಿ ಅವರು ಸಾಹಿತ್ಯ ಸುರಭಿ ಎಂಬ ಕೃತಿಯಲ್ಲಿ ಆದರ್ಶಕ ಶಿಕ್ಷಕ ಬಂಡೆಪ್ಪ ಖೂಬಾ ಎಂಬ ಲೇಖನ ಬರೆದಿದ್ದಾರೆ. ಡಾ. ಗವಿಸಿದ್ದಪ್ಪ ಪಾಟೀಲರ ಉಳುವೆ ವಿಮರ್ಶಾ ಸಂಕಲನದಲ್ಲಿ ಅವರ ಶತಕಾಂತ್ಯದ ವಚನಗಳ ವಿಮರ್ಶೆ ಮಾಡಿದ್ದಾರೆ. ಶಿವರಾಜ ಪಾಟೀಲ್, ಹಂಸಕವಿ, ಎಲ್ಲೇಗೌಡ ಬೆಸಗರಹಳ್ಳಿ, ಆರ್.ಜೆ.ಡಿ ಅವರ ಪ್ರಾತಿನಿಧಿಕ ಆಧುನಿಕ ವಚನ ಸಂಪುಟಗಳಲ್ಲಿ ಸಹಿತ ಅವರ ವಚನಗಳು ದಾಖಲಾಗಿವೆ. ಬಿ.ಎಸ್. ಖೂಬಾ ಅವರ ಬದುಕು ಬರಹ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಧರಿನಾಡು ಕನ್ನಡ ಸಂಘದಿಂದ ಡಾ.ಜಯದೇವಿ ಗಾಯಕವಾಡ ಹಮ್ಮಿಕೊಂಡಿದ್ದು ಸ್ಮರಿಸುವಂತಹದ್ದು. ಈ ವಿಚಾರ ಸಂಕಿಣವನ್ನು ಡಾ.ದೊಡ್ಡ ರಂಗೇಗೌಡರು ಉದ್ಘಾಟಿಸಿದರೆ,ಡಾ.ಎಸ್.ಎಂ.ಹಿರೇಮಠ,ಡಾ.ಮಾಣಿಕ ರಾವ್ ಧನಾಶ್ರೀ,ದೇಶಾಂಶ ಹುಡುಗಿ,ಚಂದ್ರಪ್ಪ ಹೆಬ್ಬಾಳಕರ,ಹಂಶಕವಿ ಭಾಗವಹಿಸಿದ್ದರು.ಅವರ ಸಾಹಿತ್ಯ ಬದುಕು ಸೇವೆ ಪರಿಗಣಿಸಿ ಅವರಿಗೆ ನೀಡಿದ ಗೌರವವಾಗಿವೆ.ಐ.ಎಸ್.ಶಕೀಲ್ ಅವರು ಕಾರಂಜಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ; ಅವರನ್ನು ಬಹು ಭಾಷಾ ಕವಿಗೊಷ್ಠಿ ಸರ್ವಾಧ್ಯಕ್ಷರನ್ನಾಗಿಸಿದರು.ಅಣ್ಣ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ‌ ಶ್ರೀ ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಒಂದು ದಿನದ ಸಾಹಿತ್ಯ ವಿಚಾರ ಸಂಕಿರಣ ಹಮ್ಮಿಕೊಂಡಿತ್ತು.

ಬಿ.ಎಸ್.ಖೂಬಾ ಅವರು ಒಬ್ಬ ಆದರ್ಶ ಶಿಕ್ಷಕರು, ಶ್ರೇಷ್ಠ ಶಿಕ್ಷಣ ತಜ್ಞರಾಗಿ, ಕವಿಗಳಾಗಿ ಅನೇಕ ಹೊಸ ಪ್ರಯೋಗ ಮಾಡಿದವರು. ಆಧುನಿಕ ವಚನ, ತತ್ವಪದ, ಅನುವಾದ, ಖಂಡಕಾವ್ಯ, ಪ್ರಬಂಧ ಕಾವ್ಯ, ಸಣ್ಣ ಕಥೆ, ಜೀವನ ಚರಿತ್ರೆ ರಚಿಸಿದ್ದಾರೆ. ದ್ವಿಭಾಷಾ ಸಾಹಿತಿ, ಬಹುಮುಖ ಪ್ರತಿಭಾವಂತ, ಸಾಹಿತಿ, ವ್ಯಕ್ತಿ ಶಕ್ತಿಯಾಗಿ, ಬೆಳಗಿ ಸಮಷ್ಠಿ ಪ್ರಜ್ಞೆಯ ಸಾಕ್ಷಿ ಭೂತರಾಗಿ ನಮ್ಮೊಂದಿಗೆ ಇದ್ದರು.ಒಂದು ತತ್ವ ಬದ್ಧತೆಯ ಮೂಲಕ ಬಾಳಿ ಬದುಕಿದವರು. ಎಂಬತ್ತೆಂಟರ ಹರೆಯದ ಇವರು ವಯೋ ಸಹಜ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಎಂಭತ್ತೆಂಟರ ಹುಟ್ಟು ಹಬ್ಬವನ್ನು ಅವರ ಕುಟುಂಬ ವರ್ಗ ಆಚರಿಸಿದ್ದನ್ನು ಪತ್ರಕರ್ತ ಶಶಿಕಾಂತ ಭಗೋಜಿ ಯುಟೂಬ್ ಚಾನಲ್ ಮೂಲಕ ಕಳಿಸಿದ್ದು ನೋಡಿದ್ದೇನೆ.ಇಂದು ೧೮-೦೭-೨೦೨೬ ರಂದು ನಿಧನರಾದರು.ಮಾಜಿ ಕಸಾಪ ಅಧ್ಯಕ್ಷರಾದ ರವೀಂದ್ರಕುಮಾರ ಭಂಡಾರಿ ತಿಳಿಸಿದರು, ಭಗೋಜಿ,ತುಂಬಾ ಮಾತನಾಡಿ ವಿಷಯ ತಿಳಿಸಿದರು. ಅವರ ಸಮಗ್ರ ಸಾಹಿತ್ಯವನ್ನು ಅವರ ಕುಟುಂಬ ವರ್ಗ ತರಬೇಕು.ಅವರಿಗೆ ಅಭಿನಂದನ ಗ್ರಂಥ ಹೊರ ಬರಲಿಲ್ಲ. ಕೊನೆಯದಾಗಿ ಸಂಸ್ಮರಣ ಗ್ರಂಥ ಹೊರ ತರುವ ಮೂಲಕ ಅವರ ಹೆಸರಲ್ಲಿ ಪ್ರತಿಷ್ಠಾನ ಮಾಡಿ ಪ್ರತಿ ವರ್ಷ ಪ್ರಶಸ್ತಿ ನೀಡಿ ಅವರನ್ನು ಅವರವಸಾಹಿತ್ಯವನ್ನು ಜೀವಂತವಾಗಿಡಲು ಮುಂದೆ ಬರಬೇಕಾಗಿದೆ.ಶ್ರೇಷ್ಠ ಸಾಹಿತಿ,ಬದುಕು ವರಹ ಒಂದಾಗಿಸಿಕೊಂಡ ಅಪರೂಪದ ಜೀವಿ ಶ್ರೀ ಬಿ.ಎಸ್.ಖೂಬಾ ಅವರ ಈಗ ನೆನಪು ಮಾತ್ರ !.

ಡಾ.ಗವಿಸಿದ್ಧಪ್ಪ ಎಚ್.ಪಾಟೀಲ

ಸಾಹಿತಿಗಳು, ಕಲಬುರಗಿ