ಪರಿಧಿ– ಶ್ರೀಮತಿ ಜ್ಯೋತಿ ಬೊಮ್ಮಾ
ಪರಿಧಿ– ಶ್ರೀಮತಿ ಜ್ಯೋತಿ ಬೊಮ್ಮಾ
ಕಾವ್ಯವು ಕವಿಯ ಅಂತರಂಗದ ಪ್ರತಿಬಿಂಬವಾಗಿದ್ದರೆ, ಶ್ರೀಮತಿ ಜ್ಯೋತಿ ಬೊಮ್ಮಾರ ಅವರ “ಪರಿಧಿ” ಕವನ ಸಂಕಲನವು ಬದುಕಿನ ಅನುಭವಗಳು, ಸಾಮಾಜಿಕ ಕಾಳಜಿ ಹಾಗೂ ಆತ್ಮಾವಲೋಕನದ ಸುಂದರ ಅಭಿವ್ಯಕ್ತಿಯಾಗಿದೆ. 2020ರಲ್ಲಿ ಚಿಂಚೋಳಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಗೊಂಡಿರುವ ಈ ಕೃತಿಯಲ್ಲಿ 60 ಕವನಗಳಿದ್ದು, ಲಿಂಗಾರೆಡ್ಡಿ ಶೇರಿ ಅವರು ಬೆನ್ನುಡಿ ಬರೆದಿದ್ದಾರೆ. ಈ ಕೃತಿ ಓದುಗರ ಮನಸ್ಸನ್ನು ಚಿಂತನೆಯತ್ತ ಕೊಂಡೊಯ್ಯುವ ಶಕ್ತಿಯನ್ನು ಹೊಂದಿವೆ.
ಮೊಬೈಲ್ ಫೋನ್‌ನಲ್ಲೇ ಕವನಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿರುವ ಜ್ಯೋತಿ ಬೊಮ್ಮಾರ ಅವರು, ಸರಳತೆ ಮತ್ತು ಜೀವನ ಮೌಲ್ಯಗಳನ್ನು ತಮ್ಮ ಕಾವ್ಯದ ಕೇಂದ್ರಬಿಂದುವಾಗಿಸಿಕೊಂಡಿದ್ದಾರೆ. ಮಾನವೀಯತೆ, ಶಿಸ್ತು ಹಾಗೂ ಸಾಮಾಜಿಕ ಅವ್ಯವಸ್ಥೆಗಳ ಕುರಿತು ಅವರ ಕವನಗಳು ಮಾತನಾಡುತ್ತವೆ.
“ಅರಿವೆಂಬ ಮಹಾಮನೆ” ಕವನದಲ್ಲಿ ಕವಯತ್ರಿಯವರು,
“ಎಷ್ಟು ಓದಿದರೇನು! ಅಂಧಕಾರವ ತೊರೆಯದಿದ್ದರೆ?
ಎಷ್ಟು ಹಿತವಚನ ಕೇಳಿದರೇನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ?”
ಎಂಬ ಪ್ರಶ್ನೆಯ ಮೂಲಕ ಕೇವಲ ಜ್ಞಾನ ಸಂಪಾದನೆಯಿಂದ ಜೀವನ ಸಾರ್ಥಕವಾಗುವುದಿಲ್ಲ; ಅದನ್ನು ಆಚರಣೆಯಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕಿಗೆ ಅರ್ಥ ಸಿಗುತ್ತದೆ ಎಂಬ ಸಂದೇಶವನ್ನು ನೀಡಿದ್ದಾರೆ.
“ಚಿತ್ತಶಾಂತಿ” ಕವನದಲ್ಲಿ ಶಾಂತಿ ಮತ್ತು ನೆಮ್ಮದಿ ಹೊರಗಿನ ಜಗತ್ತಿನಲ್ಲಿ ದೊರೆಯುವುದಿಲ್ಲ, ಅದು ಮನಸ್ಸಿನೊಳಗೇ ಅಡಗಿದೆ ಎಂಬ ಜೀವನಸತ್ಯವನ್ನು ಮನಮುಟ್ಟುವಂತೆ ನಿರೂಪಿಸಿದ್ದಾರೆ. ಮನದ ಅಶಾಂತಿಯನ್ನು ದೂರ ಮಾಡಿದರೆ ಮನೆಯೇ ಮಂತ್ರಾಲಯವಾಗುತ್ತದೆ ಎಂಬ ಅವರ ಅಭಿಪ್ರಾಯ ಓದುಗರಲ್ಲಿ ಆತ್ಮಾವಲೋಕನಕ್ಕೆ ಪ್ರೇರಣೆ ನೀಡುತ್ತದೆ.
ಸಂಕಲನದಲ್ಲಿರುವ “ಆತಂಕ”, “ನಾನು”, “ಜಯಿಸಬೇಕು”, “ವಿರಸ”, “ಬಂಧನ”, “ಭಾವಯಾನ”, “ಮದುವೆ”, “ಪಯಣ”, “ಕ್ಲೇಶಗಳು” ಮೊದಲಾದ ಕವನಗಳು ಮಾನವನ ದೈನಂದಿನ ಬದುಕಿನ ಸಂಕಷ್ಟಗಳು, ದುಗುಡಗಳು, ನಿರೀಕ್ಷೆಗಳು ಮತ್ತು ಹೋರಾಟಗಳಿಗೆ ಧ್ವನಿಯಾಗಿವೆ. ಕವಯತ್ರಿಯವರು ಸಮಸ್ಯೆಗಳನ್ನು ಕೇವಲ ಚಿತ್ರಿಸುವುದಲ್ಲದೆ, ಅವುಗಳಿಗೆ ಪರಿಹಾರದ ದಾರಿಯನ್ನೂ ಸೂಚಿಸಲು ಪ್ರಯತ್ನಿಸಿದ್ದಾರೆ.
ಪರಿಧಿಯ ಪ್ರಮುಖ ವೈಶಿಷ್ಟ್ಯ ಅದರ ಸರಳ ಭಾಷೆ. ಯಾವುದೇ ಗೋಜಲು-ಗೊಂದಲಗಳಿಲ್ಲದೆ ಕವಯತ್ರಿಯವರು ತಮ್ಮ ಭಾವನೆಗಳನ್ನು ನೇರವಾಗಿ ಓದುಗರ ಮುಂದೆ ಇಡುತ್ತಾರೆ. ಹೀಗಾಗಿ ಈ ಕೃತಿಯನ್ನು ಅಬಾಲವೃದ್ಧರ ತನಕ ಎಲ್ಲರೂ ಸುಲಭವಾಗಿ ಓದಿ ಅರ್ಥೈಸಿಕೊಳ್ಳಬಹುದು. ಕೆಲವೊಮ್ಮೆ ಗದ್ಯದಂತೆ, ಮತ್ತೆ ಕೆಲವೊಮ್ಮೆ ಪದ್ಯದಂತೆ ಹರಿಯುವ ಈ ಕವನಗಳು ಮನಸ್ಸಿಗೆ ಹಿತವನ್ನೂ ಹೃದಯಕ್ಕೆ ಆಹ್ಲಾದವನ್ನೂ ನೀಡುತ್ತವೆ.
ಕವನ ಸಂಕಲನ ಜ್ಯೋತಿ ಬೊಮ್ಮಾರ ಅವರ ಸಾಹಿತ್ಯಾಸಕ್ತಿ ಮತ್ತು ಸೃಜನಶೀಲತೆಯ ಸಾಕ್ಷಿಯಾಗಿದೆ. ನಿರಂತರ ಓದು, ಚಿಂತನೆ ಮತ್ತು ಸಮಾಜಮುಖಿ ಮನೋಭಾವ ಅವರ ಕವನಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಒಟ್ಟಾರೆಯಾಗಿ “ಪರಿಧಿ” ಕವನ ಸಂಕಲನವು ಬದುಕಿನ ಮೌಲ್ಯಗಳನ್ನು ಸಾರುವ, ಆತ್ಮಪರಿಶೀಲನೆಗೆ ಪ್ರೇರೇಪಿಸುವ ಹಾಗೂ ಸರಳ ಭಾಷೆಯಲ್ಲಿ ಗಾಢವಾದ ಸಂದೇಶಗಳನ್ನು ನೀಡುವ ಉತ್ತಮ ಕೃತಿ. ಜ್ಯೋತಿ ಬೊಮ್ಮಾರ ಅವರ ಕಾವ್ಯಯಾನ ಇನ್ನಷ್ಟು ಸಮೃದ್ಧವಾಗಿ ಮುಂದುವರಿದು ಕನ್ನಡ ಸಾಹಿತ್ಯಕ್ಕೆ ಇನ್ನೂ ಅನೇಕ ಮೌಲಿಕ ಕೃತಿಗಳನ್ನು ನೀಡಲಿ ಎಂಬುದು ಸಾಹಿತ್ಯಾಸಕ್ತರ ಆಶಯ.
“ಪರಿಧಿ” ಕೇವಲ ಕವನ ಸಂಕಲನವಲ್ಲ; ಅದು ಬದುಕನ್ನು ಅರಿಯುವ, ಅರ್ಥೈಸಿಕೊಳ್ಳುವ ಮತ್ತು ಸುಂದರಗೊಳಿಸುವ ಚಿಂತನೆಗಳ ಪರಿಧಿಯಾಗಿದೆ.
-ಶರಣಗೌಡ ಪಾಟೀಲ ಪಾಳಾ
