60 ಲಕ್ಷ ಕೋಲಿ ಸಮಾಜಕ್ಕೆ ರಾಜಕೀಯ ಪ್ರತಿನಿಧಿತ್ವ ನೀಡಲಿ: ಡಾ. ಮಲ್ಲಣಪ್ಪ ಮಹಾಸ್ವಾಮಿಗಳ ಒತ್ತಾಯ
60 ಲಕ್ಷ ಕೋಲಿ ಸಮಾಜಕ್ಕೆ ರಾಜಕೀಯ ಪ್ರತಿನಿಧಿತ್ವ ನೀಡಲಿ: ಡಾ. ಮಲ್ಲಣಪ್ಪ ಮಹಾಸ್ವಾಮಿಗಳ ಒತ್ತಾಯ
ಕಲಬುರಗಿ : ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿರುವ ಕೋಲಿ ಸಮಾಜಕ್ಕೆ ಸೂಕ್ತ ರಾಜಕೀಯ ಹಾಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಮುದಾಯಕ್ಕೆ ಸಮರ್ಪಕ ಪ್ರತಿನಿಧಿತ್ವ ನೀಡಬೇಕು ಎಂದು ತೊನಸನಹಳ್ಳಿ ಅಲ್ಲಮಪ್ರಭು ಸಂಸ್ಥಾನ ಮಠದ ಪೀಠಾಧಿಪತಿ ಡಾ. ಮಲ್ಲನಪ್ಪ ಮಹಾಸ್ವಾಮೀಜಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಅತಿ ದೊಡ್ಡ ಸಮುದಾಯಗಳಲ್ಲಿ ಒಂದಾದ ಕೋಲಿ ಸಮಾಜವು ಹಲವು ದಶಕಗಳಿಂದ ರಾಜಕೀಯವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ. ಸಮಾಜದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ಎಲ್ಲಾ ರಾಜಕೀಯ ಪಕ್ಷಗಳು ಸಮುದಾಯದ ಅಭಿವೃದ್ಧಿ ಹಾಗೂ ಪ್ರತಿನಿಧಿತ್ವದ ವಿಚಾರದಲ್ಲಿ ನಿರೀಕ್ಷಿತ ಮಟ್ಟದ ನ್ಯಾಯ ಒದಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಸ್ತುತ ಕಾಂಗ್ರೆಸ್ ಸರ್ಕಾರವು ಕೋಲಿ ಸಮಾಜದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಒಬ್ಬರಿಗೆ ವಿಧಾನ ಪರಿಷತ್ (ಎಂಎಲ್‌ಸಿ) ಸ್ಥಾನ, ಒಬ್ಬರಿಗೆ ಸಚಿವ ಸ್ಥಾನ, ಮೂರು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ನೀಡಬೇಕು ಎಂದು ಅವರು ಆಗ್ರಹಿಸಿದರು. ಜೊತೆಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಐದು ಕ್ಷೇತ್ರಗಳಲ್ಲಿ ಕೋಲಿ ಸಮಾಜದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡುವ ಮೂಲಕ ಸಮುದಾಯಕ್ಕೆ ರಾಜಕೀಯ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಕೋಲಿ ಸಮಾಜದ ಜನಸಂಖ್ಯೆ ಹಾಗೂ ರಾಜಕೀಯ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಸೂಕ್ತ ನಿರ್ಧಾರ ಕೈಗೊಂಡಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಮತ್ತಷ್ಟು ಬಲ ದೊರೆಯಲಿದೆ ಎಂದು ಡಾ. ಮಲ್ಲಣಪ್ಪ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಸಮಾಜದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಕಾಂಗ್ರೆಸ್ ವರಿಷ್ಠರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
