ರಕ್ತದಾನದಿಂದ ದೇಹ-ಮನಸ್ಸು ಆರೋಗ್ಯಯುತ : ಶರಣಗೌಡ ಪಾಟೀಲ್ ಪಾಳಾ
ರಕ್ತದಾನದಿಂದ ದೇಹ-ಮನಸ್ಸು ಆರೋಗ್ಯಯುತ : ಶರಣಗೌಡ ಪಾಟೀಲ್ ಪಾಳಾ
ಕಲಬುರಗಿ : ರಕ್ತದಾನ ಮಾಡುವುದರಿಂದ ರಕ್ತದೊತ್ತಡ, ಮಧುಮೇಹದಂತಹ ಕೆಲವು ಆರೋಗ್ಯ ಸಮಸ್ಯೆಗಳು ನಿಯಂತ್ರಣಕ್ಕೆ ಬರಲು ಸಹಕಾರಿಯಾಗುವುದರ ಜೊತೆಗೆ ಮಾನಸಿಕ ತೃಪ್ತಿ ದೊರೆಯುತ್ತದೆ ಎಂದು ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಚೇರಿಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕಲಬುರಗಿ ಶಾಖೆ, ರಾಷ್ಟ್ರೀಯ ಅಂಧ ಒಕ್ಕೂಟ ಕರ್ನಾಟಕ ಶಾಖೆ ಹಾಗೂ ರಾಜ್ಯ ಸರ್ಕಾರಿ ಅಂಧ ನೌಕರರ ಸಂಘ ಕಲಬುರಗಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ ಸುಮಾರು 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಲಭ್ಯವಾಗದ ಕಾರಣ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಹಾಗೂ ಅಪಘಾತದಲ್ಲಿ ಗಾಯಗೊಂಡವರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತಿದೆ. ಅಮೂಲ್ಯ ಜೀವಗಳನ್ನು ಉಳಿಸಲು ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಅರುಣಕುಮಾರ ಲೋಯಾ ಮಾತನಾಡಿ, ಅಂಧರು ಸಹ ರಕ್ತದಾನದಲ್ಲಿ ಭಾಗವಹಿಸಿರುವುದು ಸಂತೋಷದ ಸಂಗತಿ. ಶಾರೀರಿಕ ಅಡಚಣೆಗಳಿದ್ದರೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಇವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಲಬುರಗಿಯ ಜೈಕೀಶನ್ ಗಿಲ್ಡಾ ಅವರ ಅಳಿಯರಾಗಿರುವ ಹಾಗೂ ಪ್ರಥಮ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 177ನೇ ರ್ಯಾಂಕ್ ಪಡೆದ ಸಾಧಕನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಂಧ ನೌಕರರಾದ ದತ್ತು ಅಗರವಾಲ್, ಶರಣಪ್ಪ ಬಿ., ಸಂಗಣ್ಣ ಬಿ.ಕೆ., ಖಂಡೆಪ್ಪ ಅವರು ಅತಿಥಿಗಳಾಗಿ ಭಾಗವಹಿಸಿದರು. ಚೆನ್ನವೀರ ಯಳಸಂಗಿ ಗೌರವ ಉಪಸ್ಥಿತಿ ವಹಿಸಿದ್ದರು. ಡಾ. ಜಗದೀಶ ಕಟ್ಟಿಮನಿ ಸೇರಿದಂತೆ ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ರಕ್ತ ಸಂಗ್ರಹಿಸಿದರು.
ಅಪ್ಪಾರಾವ ಅಕ್ಕೊಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ಗೌರವ ಕಾರ್ಯದರ್ಶಿ ರವೀಂದ್ರ ಶಾಬಾದಿ ನಿರೂಪಿಸಿದರು. ರಕ್ತದಾನ ಶಿಬಿರದಲ್ಲಿ ಅಂಧರು ಸಹ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.
