ಎಸ್ ಎಸ್ ಎಲ್ ಸಿ ನಲ್ಲಿ ಹಿಂದಿ ಕೈಬಿಟ್ಟಿರುವುದು ಸ್ವಾಗತಾರ್ಹ ಕನ್ನಡಪರ ಹೋರಾಟಗಾರ ಡಾ.ಆನಂದ ಪಾಟೀಲ ಸಿದ್ಧಾಮಣಿ
ಎಸ್ ಎಸ್ ಎಲ್ ಸಿ ನಲ್ಲಿ ಹಿಂದಿ ಕೈಬಿಟ್ಟಿರುವುದು ಸ್ವಾಗತಾರ್ಹ ಕನ್ನಡಪರ ಹೋರಾಟಗಾರ ಡಾ.ಆನಂದ ಪಾಟೀಲ ಸಿದ್ಧಾಮಣಿ
ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿದಂತೆ ಎಲ್ಲಾ ತೃತೀಯ ಭಾಷಿಕ ವಿಷಯಗಳನ್ನು ಪ್ರತಿಶತ ಅಂಕಗಳಲ್ಲಿ ಪರಿಗಣಿಸದೆ ಕೇವಲ ಗ್ರೇಡ್ ಮಾತ್ರ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ಈ ನಿರ್ಧಾರ ಲಕ್ಷಾಂತರ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವರವಾಗಿ ಪರಿಣಮಿಸಿದೆ. ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ 625 ಅಂಕಗಳು ನಮೂದಾಗುತ್ತಿದ್ದವು . ಆದರೆ ಈಗ 525 ಅಂಕಗಳನ್ನು ಮಾತ್ರ ನಮೂದಿಸಲಾಗುತ್ತದೆ. ಅಂದರೆ 100 ಅಂಕಗಳ ಹಿಂದಿ ಸೇರಿದಂತೆ ಎಲ್ಲಾ ತೃತೀಯ ಭಾಷೆಗಳ ಅಂಕಗಳು ನಮೂದಿಸುವುದನ್ನು ಕೈ ಬಿಟ್ಟು ಗ್ರೇಡ್ ಮಾತ್ರ ನಮೂದಿಸಲಾಗುವುದು . 2024- 25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕೇವಲ ಹಿಂದಿ ಒಂದೇ ವಿಷಯದಲ್ಲಿ ಅನ್ನುತ್ತೀರ್ಣರಾದವರ ಸಂಖ್ಯೆ 65,000 ಕ್ಕಿಂತಲೂ ಹೆಚ್ಚಾಗಿತ್ತು. ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರದ ನಿರ್ಧಾರ ವರವಾಗಿ ಪರಿಣಮಿಸಿದೆ. ಶಿಕ್ಷಣ ತಜ್ಞರ ಪ್ರಕಾರ ಮಕ್ಕಳು 16ನೇ ವಯಸ್ಸಿನ ಪ್ರೌಢಾವಸ್ಥೆವರೆಗೆ ಮೂರು ಭಾಷೆ ಕಲಿಯಲು ಅವರು ಮಾನಸಿಕವಾಗಿ ಸದೃಢರಾಗಿರುತ್ತಾರೆ ಎಂದು ಹೇಳಿದರೂ ಕೂಡ 1 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಕೇವಲ ಹಿಂದಿ ಒಂದೇ ವಿಷಯದಲ್ಲಿ ಅನುತ್ತೀರ್ಣರಾಗುತ್ತಿರುವುದನ್ನು ನೋಡಿದರೆ ತೃತೀಯ ಭಾಷೆ ಹಿಂದಿ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ ಎಂದೇ ಭಾವಿಸಬೇಕು . ತೃತೀಯ ಭಾಷೆ ಕೇವಲ ಭಾಷಾ ಜ್ಞಾನಕ್ಕಾಗಿ ಬೇಕು ಎನ್ನುವುದಾದರೆ 100 ಅಂಕಗಳಿಗೆ ಅದರ ಪರೀಕ್ಷೆ ನಡೆಸುವುದು ಮತ್ತು ಅಂಕಪಟ್ಟಿಯಲ್ಲಿ ಉತ್ತೀರ್ಣ ಅನುತ್ತೀರ್ಣ ಎಂದು ಪರಿಗಣಿಸುವ ಅವಶ್ಯಕತೆ ಇಲ್ಲವೆಂದು ಹೇಳಬೇಕು . ಕೇವಲ ಹಿಂದಿಯಲ್ಲಿ ಅನ್ನುತ್ತೀರ್ಣರಾದ ವಿದ್ಯಾರ್ಥಿಗಳು ಮುಂದೆ ಆ ವಿಷಯದ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಕೂಡ ಪಾಸ್ ಆಗದೆ ಶಾಲೆಯಿಂದ ಡ್ರಾಪೌಟ್ ಆಗುವ ಭಯಾನಕತೆಯು ಎದುರಾಗುತ್ತಿತ್ತು . ಇದು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಕೊಡಲಿ ಪೆಟ್ಟಾಗಿತ್ತು . ಕರ್ನಾಟಕದಲ್ಲಿ 1989ರ ಮುಂಚಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು 600 ಅಂಕಗಳಿಗೆ ನಡೆಸಲಾಗುತ್ತಿತ್ತು ಪ್ರಥಮ ಭಾಷೆ ಕನ್ನಡ 150 ಅಂಕಗಳದ್ದಾಗಿತ್ತು . ದ್ವಿತೀಯ ಭಾಷೆ ಇಂಗ್ಲಿಷ್ 100 ಅಂಕಗಳದ್ದಾಗಿತ್ತು ಮತ್ತು ಹಿಂದಿ ಕೇವಲ 50 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿತ್ತು. ಹಿಂದಿ ವಿಷಯದಲ್ಲಿ ಶೂನ್ಯ ಅಂಕ ಪಡೆದರು ಉತ್ತೀರ್ಣವೆಂದು ಪರಿಗಣಿಸಲಾಗುತ್ತಿತ್ತು . ಇದು ಉತ್ತಮವಾದ ಕ್ರಮವಾಗಿತ್ತು .ಆದರೆ ದುರಂತದ ಸಂಗತಿ ಎಂದರೆ ಹೆಚ್ಚು ಹಿಂದಿ ಭಾಷಿಕ ಐಎಎಸ್ ಅಧಿಕಾರಿಗಳೇ ಕರ್ನಾಟಕದಲ್ಲಿ ಇರುವ ಕಾರಣದಿಂದಲೂ ಏನೋ ಅವರ ಒತ್ತಡದಿಂದಲೇ ಅನಿಸುತ್ತದೆ ನೂರು ಅಂಕಗಳ ತೃತೀಯ ಭಾಷೆ ಹಿಂದಿಯನ್ನು ಕಡ್ಡಾಯಗೊಳಿಸಿ ಉತ್ತೀರ್ಣ ಅನ್ನುತ್ತೀರಣ ಎಂದು ಪರಿಗಣಿಸುವುದನ್ನು ಕಡ್ಡಾಯವಾಗಿ ಜಾರಿಗೊಳಿಸಿದರು . ಅದು ಸಾವಿರಾರು ಕನ್ನಡಿಗ ವಿದ್ಯಾರ್ಥಿಗಳಿಗೆ ಮರಣ ಶಾಸನವಾಗಿತ್ತು . ವಿಶೇಷವಾಗಿ ದಕ್ಷಿಣ ಕರ್ನಾಟಕದ ವಿದ್ಯಾರ್ಥಿಗಳು ಹಿಂದಿ ಜ್ಞಾನ ಹೊಂದಿರುವುದಿಲ್ಲ . ಅವರಿಗೆ ಹಿಂದಿ ಕಬ್ಬಿಣದ ಕಡಲೆಯಾಗಿತ್ತು. ಅವರ ಭವಿಷ್ಯವನ್ನು ನಿರ್ಧರಿಸುತ್ತಿತ್ತು . ಅಷ್ಟಾಗಿ ಹಿಂದಿ ಆಡಳಿತ ಭಾಷೆಯಾಗಿ ಬರವಣಿಗೆಯ ಭಾಷೆಯಾಗಿ ವಿದ್ಯಾರ್ಥಿಗಳಿಗೆ ಎಲ್ಲಿಯೂ ಉಪಯೋಗವಾಗುವುದಿಲ್ಲ. ಕೇಂದ್ರ ಸರ್ಕಾರ ಕೂಡ ಹಿಂದಿಯಲ್ಲಿ ಆಡಳಿತ ನಡೆಸುವುದಿಲ್ಲ . ಇಂಗ್ಲೀಷ್ ನಲ್ಲಿ ಆಡಳಿತ ಮಾಡುತ್ತದೆ . ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪಾಸಾಗಿ ಐಎಎಸ್ ಅಧಿಕಾರಿಗಳಾದವರು ಕೂಡ ಅವರು ಸೇವೆಗೆ ಆರಿಸಿಕೊಂಡ ಕೇಡರ್ ರಾಜ್ಯದ ಭಾಷೆ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಆಡಳಿತ ಮಾಡುತ್ತಾರೆ .ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋದಾಗ ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬಳಸುವ ಅನಿವಾರ್ಯತೆ ಬರುವುದರಿಂದ ಹಿಂದಿ ಮಾತನಾಡಲು ಬಂದರೆ ಸಾಕಾಗುತ್ತದೆ . ಹೀಗಾಗಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಅತ್ಯುತ್ತಮ ನಿರ್ಧಾರವಾಗಿದೆ ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ 9 ಮತ್ತು 10ನೆಯ ತರಗತಿಯ ವಿದ್ಯಾರ್ಥಿಗಳು ಕೇವಲ ಎರಡು ಭಾಷೆಗಳನ್ನು ಕಲಿಯುತ್ತಾರೆ . 500 ಅಂಕಗಳ ಹತ್ತನೇ ಪರೀಕ್ಷೆಯನ್ನು ಬರೆಯುತ್ತಾರೆ . ಜೊತೆಗೆ ಸಿ ಬಿ ಎಸ್ ಸಿ ಪಠ್ಯಕ್ರಮ ರಾಜ್ಯ ಪಠ್ಯಕ್ರಮಕ್ಕಿಂತಲೂ ಉತ್ಕೃಷ್ಟವೆಂದು ಕೂಡ ಹೇಳಲಾಗುತ್ತದೆ .ಹೀಗಿದ್ದಾಗ ಸಿಬಿಎಸ್‌ಸಿಯನ್ನು ರಾಜ್ಯ ಪಠ್ಯಕ್ರಮ ಅನುಸರಿಸುವುದಾದರೆ ರಾಜ್ಯ ಪಠ್ಯಕ್ರಮದಲ್ಲಿ 525 ಅಂಕಗಳಿಗೆ ಪರೀಕ್ಷೆ ನಡೆಸುವುದು ಉಚಿತವೇ ಆಗಿದೆ . ಉತ್ತರ ಭಾರತದ ಬಹುತೇಕ ರಾಜ್ಯದವರು ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಕಲಿಸಿ ದ್ವಿಭಾಷಾ ನೀತಿ ಅನುಸರಿಸುತ್ತಾರೆ . ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಮಾತ್ರ ಅನಿವಾರ್ಯವಾಗಿ ಕಡ್ಡಾಯವಾಗಿ ತ್ರಿಬಾಷಾ ನೀತಿಯಿದೆ . ಒಂದು ಅಧ್ಯಯನದ ಪ್ರಕಾರ ದ್ವಿಭಾಷಾ ನೀತಿ ಇರುವ ರಾಜ್ಯಗಳ ಮಕ್ಕಳ ಶೈಕ್ಷಣಿಕ ಪ್ರಗತಿ ಹೆಚ್ಚಾಗಿದೆ ಮತ್ತು ಯುಪಿಎಸ್ಸಿ ಪರೀಕ್ಷೆಯ ಸಾಧನೆಯೂ ಕೂಡ ಹೆಚ್ಚಾಗಿದೆ . ಯುಪಿಎಸ್‌ಸಿ ಪರೀಕ್ಷೆಯಲ್ಲಿ ಹಿಂದಿ ಕೂಡ ಕಡ್ಡಾಯವಾಗಿಲ್ಲ . ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಯುಪಿಎಸ್‌ಸಿ ಬರೆಯಬಹುದು . ಇನ್ನು ಕೆಪಿಎಸ್ಸಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳು ಮಾತ್ರ ಕಡ್ಡಾಯವಾಗಿವೆ . ಹೀಗಿದ್ದಾಗ ನಮ್ಮ ಮಕ್ಕಳಿಗೆ ಹಿಂದಿ ಅನಾವಶ್ಯಕವಾಗಿ ಕಲಿಸಿ ಹೊರೆ ಮಾಡುವ ಪರಿಸ್ಥಿತಿ ಇತ್ತು . ಸರ್ಕಾರದ ದಿಟ್ಟ ನಿರ್ಧಾರ ಸ್ವಾಗತಾರ್ಹವಾಗಿದೆ .
