ಡೋಣಗಾಂವ(ಎಂ): ಮಹಾಳಪ್ಪಯ್ಯ ಜಾತ್ರಾ ಮಹೋತ್ಸವಕ್ಕೆ ಹರಿದುಬಂದ ಭಕ್ತಸಾಗರ

ಡೋಣಗಾಂವ(ಎಂ): ಮಹಾಳಪ್ಪಯ್ಯ ಜಾತ್ರಾ ಮಹೋತ್ಸವಕ್ಕೆ ಹರಿದುಬಂದ ಭಕ್ತಸಾಗರ

ಡೋಣಗಾಂವ(ಎಂ): ಮಹಾಳಪ್ಪಯ್ಯ ಜಾತ್ರಾ ಮಹೋತ್ಸವಕ್ಕೆ ಹರಿದುಬಂದ ಭಕ್ತಸಾಗರ

ಕಮಲನಗರ: ತಾಲ್ಲೂಕಿನ ಡೋಣಗಾಂವ(ಎಂ) ಗ್ರಾಮದ ಸಮೀಪದ ಸುಕ್ಷೇತ್ರ ಭಕ್ತಮುಡಿ ತಪೋವನ ಮಹಾಳಪ್ಪಯ್ಯ ದೇವಸ್ಥಾನದಲ್ಲಿ ಮಂಗಳವಾರ ಮಹಾಳಪ್ಪಯ್ಯ ಜಾತ್ರಾ ಮಹೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಜಾತ್ರೆ ನಿಮಿತ್ತ ದೇವಸ್ಥಾನವನ್ನು ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ, ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ತಂಡೋಪತಂಡವಾಗಿ ಆಗಮಿಸಿ, ಸರತಿ ಸಾಲಿನಲ್ಲಿ ನಿಂತು ನೈವೇದ್ಯ ಅರ್ಪಿಸುವ ಮೂಲಕ ಮಹಾಳಪ್ಪಯ್ಯ ಅಪ್ಪನವರ ದರ್ಶನ ಪಡೆದರು.

ಸಾಮರಸ್ಯದ ಸಂಕೇತ:

ಕಾರ್ಯಕ್ರಮದ ಧರ್ಮ ಸಭೆಯಲ್ಲಿ ಹಾವಗೀಸ್ವಾಮಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, "ಜಾತ್ರಾ ಮಹೋತ್ಸವಗಳು ಎಲ್ಲ ಸಮುದಾಯದವರನ್ನು ಒಗ್ಗೂಡಿಸುವ ಸಾಮರಸ್ಯದ ಸಂಕೇತವಾಗಿವೆ. ದೇವರನ್ನು ಭಕ್ತಿಪೂರ್ವಕವಾಗಿ ಪೂಜಿಸಿದಲ್ಲಿ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕಲಿದ್ದು, ಕೈಗೊಳ್ಳುವ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಎಲ್ಲಕ್ಕಿಂತ ದೊಡ್ಡ ಸಂಪತ್ತು ಭಕ್ತಿಯಲ್ಲಿದೆ. ಗುರುವಿನಲ್ಲಿ ಶ್ರದ್ಧೆ, ಭಕ್ತಿ ಇಟ್ಟರೆ ಸಾರ್ಥಕ ಜೀವನ ಪ್ರಾಪ್ತಿಯಾಗುತ್ತದೆ" ಎಂದು ಹೇಳಿದರು.

ಬಸವಲಿಂಗ ಶಿವಾಚಾರ್ಯರು ಮಾತನಾಡಿ, "ಮನುಷ್ಯ ಧಾರ್ಮಿಕ ಕಾರ್ಯಕ್ರಮಗಳತ್ತ ಗಮನ ಹರಿಸಿದಾಗ ಮಾತ್ರ ಜೀವನ ಪವಿತ್ರವಾಗುತ್ತದೆ. ಜಾತ್ರೆಗಳು ಮನುಷ್ಯನಲ್ಲಿ ಒಳ್ಳೆಯ ಭಾವನಾತ್ಮಕ ಗುಣಗಳನ್ನು ಬೆಳೆಸುತ್ತವೆ" ಎಂದರು.

ಭವ್ಯ ಪಲ್ಲಕ್ಕಿ ಉತ್ಸವ:

ಜಾತ್ರಾ ಮಹೋತ್ಸವದ ನಿಮಿತ್ತ ಹಾವಗೀಸ್ವಾಮಿ ಮಠದ ಪೀಠಾಧಿಪತಿ ಶಂಭುಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಮಂಗಳವಾರ ಬೆಳಿಗ್ಗೆ ಡೋಣಗಾಂವ(ಎಂ) ಗ್ರಾಮದ ಹಾವಗೀಸ್ವಾಮಿ ಶ್ರೀಮಠದಿಂದ ಮಹಾಳಪ್ಪಯ್ಯ ಅಪ್ಪನವರ ಪಲ್ಲಕ್ಕಿ ಉತ್ಸವ ವೈಭವದಿಂದ ಜರುಗಿತು. ಗ್ರಾಮದ ವಿವಿಧ ಬಡಾವಣೆಗಳಲ್ಲಿ ಬಾಜಾ ಭಜಂತ್ರಿಯೊಂದಿಗೆ ದೇವಸ್ಥಾನದವರೆಗೂ ಸಾಗಿದ ಮೆರವಣಿಗೆಯಲ್ಲಿ ಭಕ್ತರು ಕುಣಿದು ಕುಪ್ಪಳಿಸಿದರು. 'ಮಹಾಳಪ್ಪಯ್ಯ ಅಪ್ಪನವರಿಗೆ ಜಯವಾಗಲಿ' ಎಂಬ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು:

ಜಾತ್ರೆಯಲ್ಲಿ ವಿವಿಧ ಬಗೆಯ ಆಟಿಕೆ ಸಾಮಾನು, ಪುಸ್ತಕ, ರುದ್ರಾಕ್ಷಿ ಮಾಲೆ, ಗೃಹೋಪಯೋಗಿ ವಸ್ತುಗಳು ಹಾಗೂ ಸಿಹಿ ತಿನಿಸುಗಳ ಅಂಗಡಿಗಳು ಭಕ್ತರನ್ನು ಆಕರ್ಷಿಸಿದವು. ತೊಟ್ಟಿಲು ತೂಗುವಿಕೆ, ಜಂಗಿ ಕುಸ್ತಿ ಕಾಳಗ, ಪಶುಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಗಮನ ಸೆಳೆದವು.

ಈ ಸಂದರ್ಭದಲ್ಲಿ ಡೋಣಗಾಂವ(ಎಂ)ನ ಉಮಾಕಾಂತ ದೇಶಿಕೇಂದ್ರ, ಮುಖ್ಖೇಡದ ವಿರೂಪಾಕ್ಷ ಶಿವಾಚಾರ್ಯರು, ಪ್ರಶಾಂತ ಸ್ವಾಮೀಜಿ, ಬಂಗರಗಾ ಸ್ವಾಮೀಜಿ, ದೇವಣಿಯ ಸಿದ್ಧಲಿಂಗ ಶಿವಾಚಾರ್ಯರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬಂದ ಭಕ್ತಾದಿಗಳಿಗೆಲ್ಲರಿಗೂ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಕಮಲನಗರ ಸಿಪಿಐ ಶ್ರೀಕಾಂತ ಅಲ್ಲಾಪೂರ ಹಾಗೂ ಪಿಎಸ್‍ಐ ಆಶಾ ರಾಠೋಡ್ ನೇತೃತ್ವದಲ್ಲಿ ಪೊಲೀಸ್ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.