ಹೋಟೆಲ್ ಉದ್ಯಮ ವ್ಯವಹಾರದ ಅವಧಿ ವಿಸ್ತರಣೆಗೆ ಜಿಲ್ಲಾಧಿಕಾರಿಗಳ ಜೊತೆ ಹೋಟೆಲ್ ಸಂಘದ ನಿಯೋಗ ಚರ್ಚೆ
ಹೋಟೆಲ್ ಉದ್ಯಮ ವ್ಯವಹಾರದ ಅವಧಿ ವಿಸ್ತರಣೆಗೆ ಜಿಲ್ಲಾಧಿಕಾರಿಗಳ ಜೊತೆ ಹೋಟೆಲ್ ಸಂಘದ ನಿಯೋಗ ಚರ್ಚೆ
ರಾತ್ರಿ 11ರಿಂದ ಮೂರು ತಾಸು ಅವಧಿ ವಿಸ್ತರಣೆಗೆ ಮನವಿ
ಕಲಬುರಗಿ : ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳ ವ್ಯವಹಾರದ ಅವಧಿಯನ್ನು ವಿಸ್ತರಿಸಿ ಹೋಟೆಲ್ ಉದ್ಯಮ ರಂಗದ ಬೆಳವಣಿಗೆಗೆ ಪ್ರೋತ್ಸಾಹಿಸಬೇಕು ಎಂದು ಕಲಬುರಗಿ ಜಿಲ್ಲಾ ಹೋಟೆಲ್ ಸಂಘದ ನಿಯೋಗವು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿ ಮನವಿ ಸಲ್ಲಿಸಿತು.
ಕಲಬುರಗಿ ನಗರವು ವಿಭಾಗಿಯ ಕೇಂದ್ರವಾಗಿದ್ದು ಇತ್ತೀಚೆಗೆ ರಾತ್ರಿ ವೇಳೆಯಲ್ಲಿ ರೈಲು ಬಸ್ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ರಾತ್ರಿ ಹನ್ನೊಂದು ಗಂಟೆಯ ನಂತರ ಗ್ರಾಹಕರಿಗೆ ಉಪಹಾರ ಅಲಭ್ಯವಾಗುತ್ತಿರುವುದರಿಂದ ರಾತ್ರಿ 11 ಗಂಟೆಯಿಂದ ಮೂರು ತಾಸು ಅವಧಿ ಹೆಚ್ಚಳ ಮಾಡಿ ರಾತ್ರಿ ಎರಡು ಗಂಟೆವರೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ ನಡೆಸಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಲಾಯಿತು ಪ್ರಸ್ತುತ ರಾತ್ರಿ 11 ಗಂಟೆಗೆ ಕಡ್ಡಾಯವಾಗಿ ವ್ಯವಹಾರ ಸ್ಥಗಿತಗೊಳಿಸಬೇಕಾಗಿದ್ದು ಪೊಲೀಸರು ಕಟ್ಟುನಿಟ್ಟಿದ ಕ್ರಮ ಕೈಗೊಳ್ಳುತ್ತಿರುವುದರಿಂದ ಹಾಗೂ ಶುಚಿತ್ವ ಕೆಲಸಕ್ಕಾಗಿ ಸಮಯ ಬೇಕಾಗಿರುವುದರಿಂದ ವ್ಯವಹಾರದ ಅವಧಿಯನ್ನು ವಿಸ್ತರಿಸಬೇಕು. ರೈಲು ಮತ್ತು ಬಸ್ಸುಗಳಲ್ಲಿ ಸಂಚರಿಸುವವರಿಗೆ ಹಾಗೂ ಗ್ರಾಹಕರಿಗೆ ಮತ್ತು ಪಾರ್ಸೆಲ್ ವಿತರಿಸುವವರಿಗೆ ಅನುಕೂಲವಾಗಲಿದೆ ಎಂದು ರಾಜ್ಯ ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ಮತ್ತು ಜಿಲ್ಲಾಧ್ಯಕ್ಷರಾದ ನರಸಿಂಹ ಮೆಂಡನ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಮುಕ್ತ ಮಾರುಕಟ್ಟೆಯಲ್ಲಿ ಸುಗಮ ವ್ಯವಹಾರ ನಡೆಸಲು ಪೊಲೀಸರು ಸೂಕ್ತ ಕ್ರಮ ಕೈಗೊಂಡು ಜಿಲ್ಲೆಯ ಆರ್ಥಿಕ ಬೆಳವಣಿಗೆಗೆ ಅನುಕೂಲ ಕಲ್ಪಿಸುವುದು ಉತ್ತಮ ಎಂದು ರಾಜ್ಯ ಹೋಟೆಲ್ ಸಂಘದ ಸದಸ್ಯ ಡಾ. ಸದಾನಂದ ಪೆರ್ಲ ತಿಳಿಸಿದರು.
ಡಿ.18ರಂದು ಕಲಬುರಗಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಆತಿಥ್ಯ ರತ್ನ ಮತ್ತು ಉದ್ಯಮರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಕ್ಕೆ ಜಿಲ್ಲಾಡಳಿತದಿಂದ ಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಹೋಟೆಲ್ ಸಂಘದ ನಿಯೋಗದಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ, ಜಿಲ್ಲಾಧ್ಯಕ್ಷ ನರಸಿಂಹ ಮೆಂಡನ್, ಗೌರವಾಧ್ಯಕ್ಷ ರಾಜಶೇಖರ ಶೆಳ್ಳಗಿ,ರಾಜ್ಯ ಸಮಿತಿ ಸದಸ್ಯರಾದ ಡಾ ಸದಾನಂದ ಪೆರ್ಲ, ಕೋಶಾಧಿಕಾರಿ ಸುನಿಲ್ ಕುಮಾರ್ ಶೆಟ್ಟಿ ಸದಸ್ಯರಾದ ಅಶೋಕ ಕುಮಾರ್ ಶಹಾಪುರಕರ್, ನಾಗೇಂದ್ರ ಕಲಶೆಟ್ಟಿ, ಸಿದ್ದರಾಮ ತಳವಾರ, ರಿತೇಶ್ ಸುಗಂಧಿ, ಶಿವ ಕುಮಾರ್ ಸಿಂಧಗಿ ಜೊತೆಗಿದ್ದರು.
*ಗ್ರಾಹಕರ ಹಿತ ದೃಷ್ಟಿಯಿಂದ ಗ್ರಾಹಕರ ಹಿತ ದೃಷ್ಟಿಯಿಂದಶೀಘ್ರ ಸೂಕ್ತ ತೀರ್ಮಾನ: ಜಿಲ್ಲಾಧಿಕಾರಿ ಇಕ್ರಮ್ ಶರೀಫ್*
ಹೋಟೆಲ್ ಉದ್ಯಮದ ಸುಗಮ ವ್ಯವಹಾರಕ್ಕೆ ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ಅವಧಿ ವಿಸ್ತರಣೆಯ ಬಗ್ಗೆ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಂಡು ಹೋಟೆಲ್ ಉದ್ಯಮದ ಬೆಳವಣಿಗೆಗೆ ಜಿಲ್ಲಾಡಳಿತದಿಂದ ಪೂರ್ಣ ನೆರವು ನೀಡಲಾಗುವುದು ಎಂದು ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ನಿಯೋಗಕ್ಕೆ ಭರವಸೆ ನೀಡಿದರು.
ಜಿಲ್ಲೆಯ ಹೋಟೆಲ್ ರೆಸ್ಟೋರೆಂಟ್ ಹಾಗೂ ಬೇಕರಿಗಳಲ್ಲಿ ಶುಚಿತ್ವ ಹಾಗೂ ಆಹಾರ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯವಾಗಿದ್ದು ಅದಕ್ಕಾಗಿ ಹೋಟೆಲ್ ಉದ್ಯಮಿಗಳು ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳ ಜಾಗೃತಿ ಸಭೆಯನ್ನು ಶೀಘ್ರದಲ್ಲಿ ಆಯೋಜಿಸಲಾಗುವುದು. ಉದ್ಯಮಿಗಳಿಗೆ ಜಾಗೃತಿ ಮೂಡಿಸಿ ಸಾಕಷ್ಟು ತಿಳುವಳಿಕೆ ನೀಡಿದ ನಂತರವಷ್ಟೇ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು. ಎಚ್ಚರಿಕೆ ನೋಟೀಸು ನೀಡಿದ ಬಳಿಕ ಶುಚಿತ್ವ ಸುರಕ್ಷತೆ ಕ್ರಮ ಪಾಲಿಸದೇ ಇದ್ದರೆ ದಂಡನಾಕ್ರಮ ಕೈಗೊಳ್ಳಲಾಗುವುದು ಉದ್ಯಮಿಗಳು ಸರಕಾರದ ಆಹಾರ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತೆ ಸಲಹೆ ನೀಡಿದರು.

