ವನಮಾರಪಳ್ಳಿಯಲ್ಲಿ ಬೃಹತ್ ವಸತಿ ಶಾಲೆ ನಿರ್ಮಾಣ
ವನಮಾರಪಳ್ಳಿಯಲ್ಲಿ ಬೃಹತ್ ವಸತಿ ಶಾಲೆ ನಿರ್ಮಾಣ
ಶಾಸಕ ಪ್ರಭು ಚವ್ಹಾಣರಿಂದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
ಔರಾದ(ಬಿ) ತಾಲ್ಲೂಕಿನ ವನಮಾರಪಳ್ಳಿ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ನ.17 ರಂದು ಶಂಕುಸ್ಥಾಪನೆ ನೆರವೇರಿಸಿದರು.
ಔರಾದ ಪಟ್ಟಣದ ಖಾಸಗಿ ಕಟ್ಟಡದಲ್ಲಿ ವಸತಿ ನಿಲಯ ನಡೆಸಲಾಗುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಸಮಸ್ಯೆಗಳು ಹಾಗೂ ಅನಾನುಕೂಲಗಳನ್ನು ಶಾಸಕರು ವಸತಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಗಮನಿಸಿದ್ದರು. ಮಕ್ಕಳಿಗೆ ಉತ್ತಮ ವಸತಿ, ಕಲಿಕಾ ವಾತಾವರಣ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸಬೇಕೆಂಬ ಸಂಕಲ್ಪ ಮಾಡಿದ್ದರು.
ಈ ಕುರಿತು ಸರ್ಕಾರದ ಮೇಲೆ ನಿರಂತರ ಒತ್ತಡ ತಂದು ಸುಮಾರು 21 ಕೋಟಿ ಅನುದಾನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಸತಿ ಶಾಲೆ ನಿರ್ಮಾಣಕ್ಕೆ ಎದುರಾಗಿದ್ದ ನಿವೇಶನ ಸಮಸ್ಯೆಯನ್ನೂ ಇತ್ಯರ್ಥಪಡಿಸಿ, ಇದೀಗ 10 ಎಕರೆ ವಿಶಾಲ ಪ್ರದೇಶದಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ವಸತಿ ಶಾಲೆಗೆ ಭೇಟಿ ನೀಡಿದಾಗ ಮಕ್ಕಳು ಎದುರಿಸುತ್ತಿದ್ದ ಸಮಸ್ಯೆಗಳನ್ನು ಕಂಡು ಮನಸ್ಸಿಗೆ ನೋವಾಗಿತ್ತು. ನಮ್ಮ ಮಕ್ಕಳು ಉತ್ತಮ ಪರಿಸರದಲ್ಲಿ ಕಲಿಯಬೇಕು, ವಾಸಿಸಬೇಕು, ಅವರ ಶಿಕ್ಷಣ ಮತ್ತು ಭವಿಷ್ಯಕ್ಕೆ ಯಾವುದೇ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಈ ಶಾಲೆಯನ್ನು ತಂದಿದ್ದೇನೆ. ನಮ್ಮ ಮಕ್ಕಳಿಗಾಗಿ ಸುಂದರ, ಸುಸಜ್ಜಿತ ವಸತಿ ಶಾಲೆ ನಿರ್ಮಾಣವಾಗುತ್ತಿರುವುದು ಸಂತಸದ ಸಂಗತಿ. ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕ್ರಮ ವಹಿಸಬೇಕು ಎಂದು ಹೇಳಿದರು.
ಈ ಬೃಹತ್ ವಸತಿ ಶಾಲೆಯು ಕ್ಷೇತ್ರದ ವಿದ್ಯಾರ್ಥಿಗಳಿಗೆ ಸುಸಜ್ಜಿತ ವಸತಿ, ಉತ್ತಮ ಕಲಿಕಾ ವಾತಾವರಣ ಹಾಗೂ ಅಗತ್ಯ ಶೈಕ್ಷಣಿಕ ಮೂಲಸೌಕರ್ಯಗಳನ್ನು ಒದಗಿಸಲಿದ್ದು, ಔರಾದ(ಬಿ) ಕ್ಷೇತ್ರದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಹತ್ವದ ಕೊಡುಗೆ ನೀಡಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಧೊಂಡಿಬಾ ನರೋಟೆ, ಶಿವರಾಜ ಅಲ್ಮಾಜೆ, ಸಾಗರ ಪಾಟೀಲ,ಯಾದವರಾವ ಸಗರ ಮಲ್ಲಪ್ಪ ದಾನಾ, ರಮೇಶ ಬಿರಾದಾರ, ನಾಗನಾಥ ಮೋರ್ಗೆ, ಸಂದೀಪ ಪಾಟೀಲ, ಅನೀಲ ಬಿರಾದಾರ, ಜಗದೀಶ ಪಾಟೀಲ ಸೇರಿದಂತೆ ಸ್ಥಳೀಯ ಮುಖಂಡರು, ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.

