ಸೇವಾ ಪ್ರಕಲ್ಪಗಳ ಪುನರುಜ್ಜೀವನ - ಕಲಬುರಗಿಯಲ್ಲಿ ಪೂಜ್ಯಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಪ್ರಕಟ
ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ಜನ್ಮ ಶತಮಾನೋತ್ಸವಕ್ಕೆ ವಿಧಾಯಕ ಕಾರ್ಯಕ್ರಮ ಸಂಕಲ್ಪ
ಸೇವಾ ಪ್ರಕಲ್ಪಗಳ ಪುನರುಜ್ಜೀವನ - ಕಲಬುರಗಿಯಲ್ಲಿ ಪೂಜ್ಯಶ್ರೀ ವಿಶ್ವಪ್ರಸನ್ನ ತೀರ್ಥರಿಂದ ಪ್ರಕಟ
(ಡಾ ಸದಾನಂದ ಪೆರ್ಲ ) ಕಲಬುರಗಿ : ಉಡುಪಿ ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ 100ನೇ ಜನ್ಮ ಜಯಂತಿ 2031 ರಲ್ಲಿ ವಿಧಾಯಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಶ್ರದ್ಧಾ ಭಕ್ತಿಯೊಂದಿಗೆ ಸಡಗರದಿಂದ ಆಚರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಕಲಬುರಗಿಯ ವಿದ್ಯಾನಗರದ ಜಯತೀರ್ಥ ವಿದ್ಯಾರ್ಥಿ ನಿಲಯದ ಶ್ರೀಕೃಷ್ಣ ಗುಡಿಗೆ ಬುಧವಾರ ( ನ. 4 ರಂದು) ಭೇಟಿ ನೀಡಿ ಶ್ರೀ ಕೃಷ್ಣ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಪೂಜ್ಯ ಪೇಜಾವರ ಶ್ರೀಗಳು 1931 ಏಪ್ರಿಲ್ 27ರಂದು ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜದಲ್ಲಿ ಜನಿಸಿದ್ದು 1952ರಲ್ಲಿ ಪೇಜಾವರ ಅಧೋಕ್ಷಜ
ಮಠದ 32ನೇ ಪೀಠದ ಮಠಾಧಿಪತಿಗಳಾಗಿ ಸುದೀರ್ಘ 82 ವರ್ಷಗಳಷ್ಟು ಕಾಲ ಪೇಜಾವರ ಮಠದ ಮಠಾಧೀಶರಾಗಿ ಆಧ್ಯಾತ್ಮಿಕ, ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಪ್ರಕಲ್ಪಗಳನ್ನು ಕಟ್ಟಿ ಬೆಳೆಸಿದ್ದಾರೆ. ಪೇಜಾವರಶ್ರೀಗಳು 2018 ರಲ್ಲಿ ವೈಕುಂಠವಾಸಿಯಾದರು. ಅವರ ಆಶೀರ್ವಾದದಿಂದ ರಾಷ್ಟ್ರಾದ್ಯಂತ ಸುಮಾರು 161ಕ್ಕೂ ಹೆಚ್ಚು ಮಠ, ಶಿಕ್ಷಣ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳ ಸಮಗ್ರ ಪುನರುಜ್ಜೀವನಕ್ಕೆ ಜನ್ಮ ಶತಾಬ್ದಿಯ ಸಂದರ್ಭದಲ್ಲಿ ಬೃಹತ್ ಕಾರ್ಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇಂತಹ ವಿಧಾಯಕ ಕಾರ್ಯಕ್ರಮಗಳಲ್ಲಿ ದೇಶದಾದ್ಯಂತ ಇರುವ ಸಂಘ ಸಂಸ್ಥೆಗಳು ಪೂಜ್ಯರು ಕಟ್ಟಿ ಬೆಳೆಸಿದ ಮಠ, ಮಂದಿರ, ಗೋಶಾಲೆ,ಕಲ್ಯಾಣ ಮಂಟಪ, ವೇದ ಪಾಠಶಾಲೆ, ವಿದ್ಯಾರ್ಥಿ ನಿಲಯ, ವಿದ್ಯಾಪೀಠ, ಅಖಿಲ ಭಾರತ ಮಾಧ್ವ ಮಹಾಮಂಡಲ, ಬಾಲನಿಕೇತನ, ಸುಮೇಧ ಪ್ರಜ್ಞಾ ವಿಕಾಸ ಕೇಂದ್ರ, ಸಂಸ್ಕೃತ,ವೇದಾಂತ, ಆಧುನಿಕ ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ಪ್ರಕಲ್ಪಗಳ ಪುನರುಜ್ಜೀವನ ಹಾಗೂ ಆಧುನಿಕರಣಗೊಳಿಸಿ ಶ್ರೀಗಳ ಕನಸು ಸಾಕಾರಗೊಳಿಸಲು ವಿಸ್ತೃತವಾದ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ. ಇನ್ನು ಐದು ವರ್ಷಗಳಲ್ಲಿ ಪೂರ್ಣ ಪ್ರಮಾಣದ ಕಾರ್ಯಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುವ ಸಂಕಲ್ಪವನ್ನು ಹೊಂದಲಾಗಿದೆ.ಕಲ್ಯಾಣ ಕರ್ನಾಟಕ ಸೇರಿದಂತೆ ಹಲವೆಡೆ ಪೇಜಾವರಶ್ರೀಗಳು ಸಂಚಾರ ಮಾಡಿ ಅನೇಕ ಪ್ರಕಲ್ಪಗಳನ್ನು ಆರಂಭಿಸಿ ಕೊಡುಗೆ ನೀಡಿದ್ದಾರೆ.ಪೇಜಾವರ ಶ್ರೀಗಳ ಭಕ್ತರು ಮತ್ತು ಅಭಿಮಾನಿಗಳು ಈ ವಿಶಿಷ್ಟವಾದ ಶತಾಬ್ದಿ ಸಂಕಲ್ಪ ಯೋಜನೆಯಲ್ಲಿ ಪಾಲ್ಗೊಂಡು ಯತಿಕುಲ ಚಕ್ರವರ್ತಿ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥ ಶ್ರೀ ಪಾದಂಗಳವರ ಜನ್ಮ ಶತಾಬ್ದಿಯನ್ನು ಅತ್ಯಂತ ಅದ್ದೂರಿಯಾಗಿ ಹಾಗೂ ವಿಧಾಯಕ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲು ಮುಂದಾಗಬೇಕು ಎಂದು ಭಕ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಕೃಷ್ಣಾಜಿ ಕುಲಕರ್ಣಿ,ಕೃಷ್ಣ ಗುಡಿಯ ಅಧ್ಯಕ್ಷರಾದ ರಂಗನಾಥ ದೇಸಾಯಿ, ಕಾರ್ಯದರ್ಶಿಗಳಾದ ಕಿಶೋರ್ ದೇಶಪಾಂಡೆ , ಕೊತ್ತೂರು ನಿಖಿಲ್ ಆಚಾರ್,ವ್ಯಾಸರಾಜ ಸಂತೆಕೆಲ್ಲೂರು, ರಾಮದಾಸ್, ಮ್ಯಾನೇಜರ್ ಮದನಂತ ರಾವ್, ವಿದ್ಯಾಸಾಗರ್ ನೈನಾ ಜೊತೆಗಿದ್ದರು.
*ಕರಾವಳಿ ಭಕ್ತರಿಂದ ಭಕ್ತಿ ಗೌರವದ ವಂದನೆ*
ಉಡುಪಿ ಪೇಜಾವರ ಮಠದ ಪೂಜ್ಯರಾದ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿಯವರನ್ನು ಕರಾವಳಿಯ ಭಕ್ತರು ಭೇಟಿಯಾಗಿ ಭಕ್ತಿ ಗೌರವದ ವಂದನೆ ಸಲ್ಲಿಸಿದರು.
ಕಲಬುರಗಿಯ ದಕ್ಷಿಣ ಕನ್ನಡ ಸಂಘ ಹಾಗೂ ಜಿಲ್ಲಾ ಹೋಟೆಲ್ ಉದ್ಯಮಿಗಳ ಸಂಘದ ಪರವಾಗಿ ಡಾ. ಸದಾನಂದ ಪೆರ್ಲ ಮತ್ತು ನರಸಿಂಹ ಮೆಂಡನ್ ನೇತೃತ್ವದಲ್ಲಿ ಪೂಜ್ಯರನ್ನು ಭೇಟಿಯಾಗಿ ಭಕ್ತಿಯ ಗೌರವ ಸಲ್ಲಿಸಲಾಯಿತು. ಪೂಜ್ಯರು ಫಲಮಂತ್ರಾಕ್ಷತೆ ನೀಡಿ ಆಶೀರ್ವದಿಸಿ ಎರಡೂ ಸಂಘ ಸಂಸ್ಥೆಗಳು ಈ ಭಾಗದ ಅಭಿವೃದ್ಧಿಗಾಗಿ ಹಾಗೂ ಪೇಜಾವರಶ್ರೀಗಳ ಜನುಮ ಶತಾಬ್ದಿ ಕಾರ್ಯಕ್ರಮದಲ್ಲಿ ಕೈಜೋಡಿಸಿ ಕಾರ್ಯಕ್ರಮವನ್ನು ಪೂರ್ಣ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಮಹಾಕೀರ್ತಿ ಶೆಟ್ಟಿ, ಸುನಿಲ್ ಶೆಟ್ಟಿ, ಕೃಷ್ಣಾಜಿ ಕುಲಕರ್ಣಿ, ಕಿಶೋರ್ ದೇಶಪಾಂಡೆ ಮತ್ತಿತರರು ಜೊತೆಗಿದ್ದರು.

