ಹಿಂದುಳಿದ ಜಾತಿಗಳ ಸಮಗ್ರ ಅಭಿವೃದ್ಧಿಗೆ ಮಧುಸೂದನ್ ನಾಯಕ್ ಆಯೋಗದ ವರದಿ ಜಾರಿ ಅಗತ್ಯ: ಸುನಿಲ್ ಕುಮಾರ್
ಹಿಂದುಳಿದ ಜಾತಿಗಳ ಸಮಗ್ರ ಅಭಿವೃದ್ಧಿಗೆ ಮಧುಸೂದನ್ ನಾಯಕ್ ಆಯೋಗದ ವರದಿ ಜಾರಿ ಅಗತ್ಯ: ಸುನಿಲ್ ಕುಮಾರ್
ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿಗೆ ಅಕ್ಕಮ್ಮ ಪ್ರಶಸ್ತಿ: 20 ಸಾಧಕರಿಗೆ ಅಕ್ಕಮ್ಮ - ಮಾರಯ್ಯ ಪ್ರಶಸ್ತಿ ಪ್ರದಾನ
ಕಲಬುರಗಿ : ಸಮಾಜದ ಅತ್ಯಂತ ಹಿಂದುಳಿದ ಜಾತಿಗಳ ಸಮಗ್ರ ಕಲ್ಯಾಣಕ್ಕಾಗಿ ಮಧುಸೂಧನ್ ನಾಯಕ್ ವರದಿ ಬಹಿರಂಗ ಮಾಡಿ ಅನುಷ್ಠಾನಗೊಳಿಸಬೇಕು ಎಂದು ಬಿಜೆಪಿಯ ಮುಖಂಡರಾದ ಮಾಜಿ ಸಚಿವರು ಮತ್ತು ಶಾಸಕ ವಿ ಸುನಿಲ್ ಕುಮಾರ್ ಹೇಳಿದರು.
ಕಲಬುರಗಿಯ ಹೋಟೆಲ್ ಬೃಂದಾವನ ಗ್ರಾಂಡ್ ನ ಬಲದೇವ್ ಬ್ಯಾಂಕ್ವೆಟ್ ಹಾಲ್ ನಲ್ಲಿ ನವಂಬರ್ 2 ರಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಹಾಗೂ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ವತಿಯಿಂದ ನಡೆದ ಶಿವಶರಣೆ ಈಡಿಗರ ಅಕ್ಕಮ್ಮ ಹಾಗೂ ಶರಣ ಹೆಂಡದ ಮಾರಯ್ಯ ಸ್ಮರಣೋತ್ಸವ,ಪ್ರಶಸ್ತಿ ಪ್ರದಾನ ಮತ್ತು ರಾಷ್ಟ್ರೀಯ ಈಡಿಗ ಮಹಾಮಂಡಳಿ ಕಲಬುರಗಿ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಧುಸೂದನ್ ನಾಯಕ್ ವರದಿಯಲ್ಲಿ ನೀಡಿದ ಅಂಕಿ ಅಂಶದ ಪ್ರಕಾರ ಹಿಂದುಳಿದ ಜಾತಿಗಳಿಗೆ ಈ ಬಾರಿಯ ಬಜೆಟ್ಟಿನಲ್ಲಿ ಅನುದಾನವನ್ನು ನೀಡಿ ಸಮಗ್ರ ಅಭಿವೃದ್ಧಿ ಮಾಡಬೇಕು. ಈಡಿಗ ಜನಾಂಗದ 26 ಪಂಗಡಗಳು ಒಗ್ಗಟ್ಟಿನಿಂದ ಒಂದಾಗಿ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಬೆಳವಣಿಗೆ ಹೊಂದಬೇಕು ಬ್ರಹ್ಮಶ್ರೀ ನಾರಾಯಣ ಗುರುಗಳು ಶಿಕ್ಷಣದಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿ ಎಂಬ ಸಂದೇಶವನ್ನು ನೀಡಿದರಲ್ಲದೆ ಶೂದ್ರ ರಿಗೆ ದೇವಸ್ಥಾನ ಪ್ರವೇಶವಿಲ್ಲದ ಕಾಲಘಟ್ಟದಲ್ಲಿ ಶೂದ್ರ ಶಿವನನ್ನು ಸ್ಥಾಪಿಸಿ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದರು. ಈಡಿಗ ಬಿಲ್ಲವ ಸೇರಿದಂತೆ ಸಮುದಾಯ ಶಿಕ್ಷಣ ಹೊಂದಿ ಐಎಎಸ್, ಐಪಿಎಸ್ ಮುಂತಾದ ಹುದ್ದೆಗಳಲ್ಲಿ ಬಂದು ಆಡಳಿತವನ್ನು ನಿರ್ವಹಿಸಲು ಮುಂದಾಗ ಬೇಕಾಗಿದೆ. ನಾರಾಯಣ ಗುರುಗಳ ಪರಿವರ್ತನೆಯ ಆಂದೋಲನ ಎಲ್ಲರಿಗೂ ಮಾದರಿಯಾಗಿದ್ದು ಉನ್ನತ ಶಿಕ್ಷಣವನ್ನು ಹೊಂದಿ ಸಮಾಜದಲ್ಲಿ ಬದಲಾವಣೆ ಹುಟ್ಟು ಹಾಕಬೇಕಾಗಿದೆ. ಜಾತಿಗಳು ಕೇವಲ ರಾಜಕೀಯ ಶಕ್ತಿಗಾಗಿ ಮಾತ್ರ ಒಗ್ಗಟ್ಟಾಗುವುದಲ್ಲ. ಬದಲಾಗಿ ಆರ್ಥಿಕ ಶೈಕ್ಷಣಿಕ, ಸಾಮಾಜಿಕ ಉನ್ನತಿಗಾಗಿ ಒಂದಾಗಿ ಮುನ್ನಡೆಯಬೇಕು. ಕರಾವಳಿಯಲ್ಲಿ ಕೋಟಿ ಚೆನ್ನಯರು ಅಸಮಾನತೆ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿಗಳಾಗಿದ್ದು ಈ ಭಾಗಕ್ಕೆ ಅವರ ಪರಿಚಯವಿಲ್ಲ. ಹಾಗೆಯೆ ಶರಣ ಹೆಂಡದ ಮಾರಯ್ಯ ಮತ್ತು ಈಡಿಗರ ಅಕ್ಕಮ್ಮನ ಬಗ್ಗೆ ಆ ಭಾಗಕ್ಕೂ ಪರಿಚಯವಿಲ್ಲ. ಇಂತಹ ಮಹಾತ್ಮರ ಕೊಡುಗೆ ಬಗ್ಗೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಮಹತ್ವದ್ದು ಎಂದರು.
ಈಡಿಗರ ಅಕ್ಕಮ್ಮ ಕೃತಿ ಅನಾವರಣ
12ನೇ ಶತಮಾನದ ಶಿವಶರಣೆ ಈಡಿಗರ ಅಕ್ಕಮ್ಮನ ಕುರಿತಾದ ಕೃತಿ ಈಡಿಗರ ಅಕ್ಕಮ್ಮನ ವಚನ ಬೆಳಕು ಕೃತಿಯನ್ನು ಅನಾವರಣ ಮಾಡಿದ ವಿಧಾನಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಾಗಬೇಕು ಮತ್ತು ಈಡಿಗ ಸಮುದಾಯವು ಸಮಾಜಕ್ಕೆ ಪ್ರೇರಣೆಯಾಗಿದ್ದು ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ವೆಂಕಯ್ಯ ಗುತ್ತೇದಾರ್ ಆದರ್ಶ ಪಾಲಿಸಬೇಕಾಗಿದೆ ಈಡಿಗ ಸಮುದಾಯದ ಬಿಕೆ ಹರಿಪ್ರಸಾದ್ ಜನಾರ್ಧನ ಪೂಜಾರಿ ಬಿಜೆಪಿಯ ಸುನಿಲ್ ಕುಮಾರ್ ಮುಂತಾದವರು ಅಪಾರ ಕೊಡುಗೆಯನ್ನು ನೀಡಿದ್ದಾರೆ. ಈಡಿಗರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಅಭಿವೃದ್ಧಿಯ ದೃಷ್ಟಿಯಿಂದ ಶೀಘ್ರದಲ್ಲೇ ಸುನಿಲ್ ಕುಮಾರ್ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸೋಣ ಎಂದು ಹೇಳಿದರು.
ಉತ್ತಮ ಕೆಲಸ ಮುಂದುವರಿಕೆಗೆ ಉಡಿ ತುಂಬಿದ ಪ್ರಶಸ್ತಿ
ಈಡಿಗರ ಅಕ್ಕಮ್ಮ ಪ್ರಶಸ್ತಿಯನ್ನು ಪಡೆದ ನಂತರ ಶರಣಬಸವ ವಿಶ್ವವಿದ್ಯಾಲಯದ ಗಕುಲಾಧಿಪತಿಗಳಾದ ಮಾತೋಶ್ರೀ ದಾಕ್ಷಾಯಿಣಿ ಅವ್ವಾಜಿ ಮಾತನಾಡಿ ಈ ಪ್ರಶಸ್ತಿಯು ಇನ್ನಷ್ಟು ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಲು ಉಡಿ ತುಂಬಿದ ಹಾಗೆ ಆಗಿದೆ. ಚನ್ನಬಸವೇಶ್ವರ ಸಂಸ್ಥಾನದ ಮೇಲೆ ಅಪಾರಭಕ್ತಿಯನ್ನು ಇಟ್ಟುಕೊಂಡ ಡಾಕ್ಟರ್ ಪ್ರಣವಾನಂದ ಶ್ರೀಗಳ ಕೆಲಸ ಕಾರ್ಯ ವಾಗಿದ್ದು ಸಂಸ್ಥಾನದಿಂದ ಎಲ್ಲಾ ರೀತಿಯ ಸಹಕಾರ ಸದಾ ಇರುತ್ತದೆ ಎಂದು ಹೇಳಿದರು.
ಗುಂಪು ಬದಿಗಿಟ್ಟು ಒಗ್ಗಟ್ಟಾಗಿರಿ
ಸಮುದಾಯದ ಅಭಿವೃದ್ಧಿ ಆಗಬೇಕಾದರೆ ಗುಂಪುಗಾರಿಕೆಯನ್ನು ಬಿಟ್ಟು ಒಗ್ಗಟ್ಟಾಗಿ ದುಡಿದಾಗ ಮಾತ್ರ ಸಮುದಾಯಕ್ಕೆ ಶಕ್ತಿ ಬರುತ್ತದೆ. ಸಮಾಜದ ಬೇಡಿಕೆಗಳನ್ನು ಈಡೇರಿಸಿ ಇತರ ಸಮುದಾಯಗಳಂತೆ ಅಭಿವೃದ್ಧಿಯನ್ನು ಹೊಂದಲು ಸಾಧ್ಯ. ಅದಕ್ಕಾಗಿ ಪ್ರಣವಾನಂದ ಶ್ರೀಗಳ ಹೋರಾಟ ಮತ್ತು ಕಾರ್ಯಕ್ರಮಗಳು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ.
ಅವರ ಪಾದಯಾತ್ರೆ, ಹೋರಾಟಗಳಿಂದ ಸಮುದಾಯಕ್ಕೆ ಅನೇಕ ಒಳ್ಳೆಯ ಕೆಲಸಗಳಾಗಿದ್ದು ಹೆಂಡದ ಮಾರಯ್ಯ ಮತ್ತು ಈಡಿಗರ ಅಕ್ಕಮ್ಮನ ಸ್ಮರಣೋತ್ಸವದ ಮೂಲಕ ಸಮಾಜಕ್ಕೆ ಶರಣರ ಚಿಂತನೆಯನ್ನು ಪ್ರಸಾರ ಮಾಡುವ ಕಾರ್ಯ ಶ್ಲಾಘನೀಯವಾದುದು ಎಂದು ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್ ಹೇಳಿದರು.
ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಸಂತೋಷ್ ವಾಡಿ ಹಾಗೂ ನೂತನ ಸಮಿತಿಯನ್ನು ರಚಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಶಿವ ರಂಜನ್ ಸತ್ಯಂಪೇಟೆ ಶರಣ ಹೆಂಡದ ಮಾರಯ್ಯನವರ ಬಗ್ಗೆ ಹಾಗೂ ಡಾ. ಸದಾನಂದ ಪೆರ್ಲ ಶಿವಶರಣೆ ಈಡಿಗರ ಅಕ್ಕಮ್ಮ ಮತ್ತು ಬಾಗಲಕೋಟೆ ಬನಹಟ್ಟಿಯ ಶಿವ ಸಿಂಪಿ ಸಮಾಜದ ಶ್ರೀ ಮಹಾಂತ ದೇವರು 12ನೆಯ ಶತಮಾನದ ಅನುಭವ ಮಂಟಪದ ಶರಣರ ಕುರಿತಾಗಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಯುವ ಮುಖಂಡರಾದ ಚಂದು ಪಾಟೀಲ್ ಶರಣು ಅಲ್ಲಮಪ್ರಭು ಪಾಟೀಲ್ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಡಾ.ವಿ ಎಚ್ ಮಂಚೇಗೌಡ, ತಿಪ್ಪೇ ಸ್ವಾಮಿ ಡಿ ಆರ್ ಹನುಮಂತರಾಜು, ಸತೀಶ್ ಗುತ್ತೇದಾರ್, ಅಶೋಕ್ ಗುತ್ತೇದಾರ್ ಬಡದಾಳ,ಮಹಾದೇವ ಗುತ್ತೇದಾರ್ ವೆಂಕಟೇಶ ಗುಂಡಾನೂರ್, ಕುಪೇಂದ್ರ ಗುತ್ತೇದಾರ್ ನಾಗೂರ್, ಮಲ್ಲಿಕಾರ್ಜುನ್ ಆರ್ ಕುಕ್ಕುಂದಿ,
ಬಿ. ಎಂ. ರಾವೂರ್,ಮಹೇಶ್ ಹೊಳಕುಂದ ಮತ್ತಿತರ ಅನೇಕರು ಉಪಸ್ಥಿತರಿದ್ದರು. ವಿವಿಧ ತಾಲೂಕುಗಳ ಮುಖಂಡರು ಭಾಗವಹಿಸಿದ್ದರು. ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆ ನೆರವೇರಿಸಿದರು. ಶಿವರಾಜ್ ಗುತ್ತೇದಾರ ಜೇವರ್ಗಿ ಸ್ವಾಗತ ಕೋರಿದರು.
ಈಡಿಗ ಸಮಾಜ ರಕ್ಷಣೆ ನೀಡುವ ಸಮುದಾಯ ಈಡಿಗ ಸಮಾಜವೆಂದರೆ ಅದು ರಕ್ಷಣೆ ನೀಡುವ ಸಮಾಜವಾಗಿದ್ದು ಬಂಗಾರಪ್ಪ, ಜನಾರ್ಧನ ಪೂಜಾರಿ, ಕಾಗೋಡು ತಿಮ್ಮಪ್ಪ ಮುಂತಾದ ನಾಯಕರನ್ನು ಕೊಟ್ಟ ಬಲು ದೊಡ್ಡ ಸಮಾಜವಾಗಿದೆ. ತಾನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಈಡಿಗ ಸಮುದಾಯದವರ ಕೊಡುಗೆ ಅಪಾರವಾಗಿದೆ. ಬಂಜಾರಾ ಮತ್ತು ಈಡಿಗ ಸಮುದಾಯ ಅಣ್ಣ- ತಮ್ಮರಿದ್ದಂತೆ. ನನಗೆ ಎಂಪಿ ಮಾಡಿದ ಈ ಸಮಾಜವನ್ನು ಖಂಡಿತಾ ಮರೆಯಲಾರೆ. ಈಡಿಗರ ಅಕ್ಕಮ್ಮ, ಶರಣ ಹೆಂಡದ ಮಾರಯ್ಯನವರ ಬಗ್ಗೆ ಇನ್ನಷ್ಟು ಅಧ್ಯಯನ ಕೈಗೊಳ್ಳಲು ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆರಂಭಿಸುವುದು, ಸೂಕ್ತ.
ಡಾ.ಉಮೇಶ್ ಜಾಧವ್, ಲೋಕಸಭಾ ಮಾಜಿ ಸದಸ್ಯರು
ಈಡಿಗ ನಾಯಕರನ್ನು ತುಳಿಯುವ ಪ್ರಯತ್ನದ ಬಗ್ಗೆ ಎಚ್ಚರ ಅಗತ್ಯ
ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದವರು ಸೇಂದಿ ಕುಲಕಸುಬು ನಂಬಿ ಬದುಕಿದವರು ರಾಜ್ಯ ಸರ್ಕಾರವು ಸೇಂದಿ ಕಸುಬು ಆರಂಭಿಸಲು ಮಾಡಿಕೊಡಬೇಕು ರಾಜಕೀಯದಲ್ಲಿ ಸುನಿಲ್ ಕುಮಾರ್ ನಂತಹ ನಾಯಕರನ್ನು ತುಳಿಯುವ ಪ್ರಯತ್ನ ತೆರೆಮರೆಯಲ್ಲಿ ನಡೆಯುತ್ತಿದ್ದು ಎಲ್ಲರೂ ಒಗ್ಗಟ್ಟಾಗಿ ಎಚ್ಚರದಿಂದ ಇರಬೇಕಾಗಿದೆ. ಭವಿಷ್ಯದಲ್ಲಿ ಮುಖ್ಯಮಂತ್ರಿ ಆಗಬಲ್ಲ ಸಾಮರ್ಥ್ಯ ಹೊಂದಿದ ಹಿಂದುಳಿದ ವರ್ಗದ ನಾಯಕ ಸುನಿಲ್ ಕುಮಾರ್ ಅವರಿಗೆ ಸಮುದಾಯವು ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ಮುಂದಿನ ಬಜೆಟ್ ನಲ್ಲಿ ಗರಿಷ್ಟ ಅನುದಾನ ಘೋಷಿಸುವಂತೆ ಸುನಿಲ್ ಕುಮಾರ್, ತಿಪ್ಪಣ್ಣಪ್ಪ ಕಮಕನೂರು ಶ್ರಮಿಸಬೇಕು.
ಡಾ.ಪ್ರಣವಾನಂದ ಸ್ವಾಮೀಜಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕರದಾಳ
ಅಕ್ಕಮ್ಮ ಪ್ರಶಸ್ತಿ ಪುರಸ್ಕೃತರು
ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ (ಧಾರ್ಮಿಕ- ಶಿಕ್ಷಣ ) ಮಂಜುಳಾ ಎಂ ಗೌಡ( ಶಿಕ್ಷಣ ) ಅಮೂಲ್ಯ ಸಂಗಪ್ಪ ಶೆಟ್ಟಿ (ಶಿಕ್ಷಣ) ಶಿಫಾಲಿ ಅಜಯ್ ಗುತ್ತೇದಾರ್ ( ವೈದ್ಯಕೀಯ )
ವನಿತಾ ಚಂದ್ರಕಾಂತ್ ಗುತ್ತೇದಾರ್ (ಧಾರ್ಮಿಕ, ಶಿಕ್ಷಣ, ಯೋಗ,ಸಮಾಜ) ಸೇವೆ ಶ್ರೀ ಗೀತಾ ತಳವಾರ್( ಸಾಹಿತ್ಯ) ಕ್ಷೇತ್ರ ಕಾಶಿಬಾಯಿ (ಮಾಧ್ಯಮ) ಲಲಿತಾಬಾಯಿ ದಿ. ಸಿದ್ದಯ್ಯ ಗುತ್ತೇದಾರ್ ಯಳವಂತಗಿ (ಸಮಾಜಸೇವೆ -ಮರಣೋತ್ತರ).
ಶರಣ ಹೆಂಡದ ಮಾರಯ್ಯ ಪ್ರಶಸ್ತಿ ಪುರಸ್ಕೃತರು
ಕಾಶಿನಾಥ್ ಗುತ್ತೇದಾರ್ ಚಿತ್ತಾಪುರ (ಪತ್ರಿಕಾ ಕ್ಷೇತ್ರ )ಪ್ರವೀಣ ಶಿವಯ್ಯ ಗುತ್ತೇದಾರ್ (ಉದ್ಯಮ ) ಅಶೋಕ್ ಗುತ್ತೇದಾರ್ ಭೀಮಳ್ಳಿ (ಸಮಾಜ ಸೇವೆ) ಮಹೇಶ್ ಮಹಾದೇವಪ್ಪ ಕಡೆಚೂರ್ (ಕಲಾ ಕ್ಷೇತ್ರ ) ಶಂಕರ ಎಚ್ ಕಟ್ಟಳ್ಳಿ (ಹೋರಾಟಗಾರರು- ಮರಣೋತ್ತರ ) ಕೃಷ್ಣಯ್ಯ ಗುತ್ತೇದಾರ ಆಳಂದ (ಸಮಾಜ ಸೇವೆ) ನಿಂಗಣ್ಣ ವಿಶ್ವಕರ್ಮ ಶಿಲ್ಪಿ ನಡುವಿನಹಳ್ಳಿ (ಶಿಲ್ಪಕಲಾ ಕ್ಷೇತ್ರ ) ರುಕ್ಕಪ್ಪ ಕಾಂಪ್ಲೆ ಗುಲ್ಬರ್ಗ (ಸಮಾಜ ಸೇವೆ) ಈರಣ್ಣ ಹಡಪದ ಸಣ್ಣೂರ (ಸಮಾಜ ಸೇವೆ ) ಬಸವರಾಜು ಎಮ್ ರಾವೂರ ( ಸಂಶೋಧನಾ ಕ್ಷೇತ್ರ ) ರವೀಂದ್ರ ಕೃಷ್ಣಯ್ಯ ಗುತ್ತೇದಾರ್ ಕಪನೂರ್ (ಹೋರಾಟಗಾರರು) ಶ್ರೀಶೈಲ್ ಮಲ್ಲಯ್ಯ ಗುತ್ತೇದಾರ ತೆಲ್ಲೂರ (ಸಂಗೀತ ಕ್ಷೇತ್ರ )

