ಭಗವಂತ ಕೊಟ್ಟ ಜೀವನ ಸಾರ್ಥಕ ಮಾಡಿಕೊಳ್ಳಲು ಉತ್ತಮ ಸಂಸ್ಕಾರ ಅಗತ್ಯ -ಚಂದ್ರಗುಂಡ ಶಿವಾಚಾರ್ಯ

ಭಗವಂತ ಕೊಟ್ಟ  ಜೀವನ ಸಾರ್ಥಕ ಮಾಡಿಕೊಳ್ಳಲು ಉತ್ತಮ ಸಂಸ್ಕಾರ ಅಗತ್ಯ -ಚಂದ್ರಗುಂಡ ಶಿವಾಚಾರ್ಯ

ಮಹಾತಪಸ್ವಿ ಶಾಂತಲಿಂಗ ಶಿವಯೋಗಿಗಳ ಪುಣ್ಯ ಸ್ಮರಣೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ

ಭಗವಂತ ಕೊಟ್ಟ ಜೀವನ ಸಾರ್ಥಕ ಮಾಡಿಕೊಳ್ಳಲು ಉತ್ತಮ ಸಂಸ್ಕಾರ ಅಗತ್ಯ -ಚಂದ್ರಗುಂಡ ಶಿವಾಚಾರ್ಯ 

ಚಿಂಚೋಳಿ: ಭಗವಂತ ನಮಗಾಗಿ ಪವಿತ್ರ ಭೂಮಂಡಲ ಸೃಷ್ಟಿಸಿ ಅದರಲ್ಲಿ‌ ಸತ್ಕಾರ್ಯಗಳಿಗಾಗಿ ಸುಂದರ ದೇಹದೊಂದಿಗೆ ಮನುಷ್ಯನನ್ನು ಕಳುಹಿಸಿದ್ದಾನೆ. ಹೀಗಾಗಿ ಭಗವಂತನ ಕೊಡುಗೆಯಾದ ಈ ದೇಹಕ್ಕೆ ಉತ್ತಮ ಸಂಸ್ಕಾರಗಳ ಬಲ ತುಂಬಿ ಬದುಕು ಸಾರ್ಥಕ ಪಡಿಸಿಕೊಳ್ಳಬೇಕೆಂದು ಅಖಿಲ‌ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಹೊನ್ನಕಿರಣಗಿ ರಾಚೋಟೇಶ್ವರ ಮಠದ ಚಂದ್ರಗುಂಡ ಶಿವಾಚಾರ್ಯರು ತಿಳಿಸಿದರು.

ಅವರು ಬುಧವಾರ ತಾಲ್ಲೂಕಿನ ಯಲಕಪಳ್ಳಿ ಗ್ರಾಮದ ಶ್ರೀ ಅಮರೇಶ್ವರ ಹಿರೇಮಠದಲ್ಲಿ ಮಹಾತಪಸ್ವಿ ಶಾಂತಲಿಂಗ ಶಿವಯೋಗಿಗಳ 49ನೇ ಪುಣ್ಯ ಸ್ಮರಣೋತ್ಸವ ನಿಮಿತ್ತವಾಗಿ ಹಮ್ಮಿಕೊಂಡ ಧರ್ಮ ಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮರ ಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಕಲಾವಿದರು, ಸಾಹಿತಿಗಳು, ಸಂಗೀತಗಾರರು, ಶಿಲ್ಪಿಗಳು, ಕಲಾವಿದರು, ವಾಗ್ಮಿಗಳು ರೂಪುಗೊಳ್ಳಲು ಸಂಸ್ಕಾರ ಪ್ರಮುಖ ಪಾತ್ರ ವಹಿಸುತ್ತದೆ. ಆಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಮಾನವನ ದೇಹದಲ್ಲಿರುವ ನಾಲಿಗೆಯು ದಣಿವು ಇಲ್ಲದೇ ದುಡಿಯುವ ಅಂಗ. ಉತ್ತಮ ಸಂಸ್ಕಾರ ಅಳವಡಿಸಿಕೊಂಡರೆ ನಾಲಿಗೆಯಿಂದ ಸುಂದರ ಮಾತನಾಡಬಹುದು,ಸಂಸ್ಕಾರ ಇಲ್ಲದೇ ಹೋದರೆ ಅದೆ ನಾಲಿಗೆಯಿಂದ ಕೆಟ್ಟದು ಮಾತನಾಡಬಹುದು. ಅದು‌ ನಮ್ಮ ವ್ಯಕ್ತಿತ್ವದ ಕನ್ನಡಿ ನಮ್ಮ‌ ನಾಲಿಗೆ ಸೂಚಿಸುತ್ತದೆ ಎಂದರು.

ಭರತನೂರು ವಿರಕ್ತ ಮಠದ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬರು ಧರ್ಮದ ಹಾದಿಯಲ್ಲಿ ಜೀವನ ನಡೆಸಬೇಕು. ನಾವೆಲ್ಲರೂ ಸತ್ಯ ಶುದ್ಧ ಕಾಯಕ ಮಾಡಬೇಕು.ಕೆಟ್ಟ ಕಾಯಕ ಮಾಡಿದರೆ ಕೆಟ್ಟದನ್ನೇ ದೊರೆಯುತ್ತದೆ ಹೀಗಾಗಿ ಸಾಮಾಜಿಕ‌ ಕಾಳಜಿ, ಪರೋಪಕಾರ ಗುಣ ಬೆಳೆಸಿಕೊಂಡು ಕಾಯಕ ದಾಸೋಹ ತತ್ವದ ಮೂಲಕ ಸಮಾಜ ಸದೃಢಗೊಳಿಸಬೇಕೆಂದರು. ತೊಟ್ನಳ್ಳಿ ಡಾ. ತ್ರಿಮೂರ್ತಿ ಶಿವಾಚಾರ್ಯರು, ಸುಲೇಪೇಟ ಖಟ್ವಾಂಗೇಶ್ವರ ಮಠದ ಪ್ರಭು ಖಟ್ವಾಂಗೇಶ್ವರ ದೇವರು, ಪತ್ರಕರ್ತರಾದ ಜಗನ್ನಾಥ ಡಿ. ಶೇರಿಕಾರ ಮಾತನಾಡಿ ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ. ಶಾಲೆಗಳು ಸರ್ಟಿಫಿಕೇಟ ನೀಡಿದಂತೆ ಪ್ರಶಸ್ತಿ ಸಾಮಾಜಿಕ‌ಮನ್ನಣೆಯ ದ್ಯೋತಕ ಎಂದರು.

ಕಾರ್ಯಕ್ರಮದಲ್ಲಿ ಸೇಡಂನ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿ,ರಾಚೋಟೇಶ್ವರ ಮಹಾಸ್ವಾಮಿ,ಸುಲೇಪೇಟ ಟೆಂಗಿನ‌ಮಠದ ಸಿದ್ಧರಾಮ ಮಹಾಸ್ವಾಮಿ, ಶಾಂತಲಿಂಯ್ಯ ಸ್ವಾಮಿ‌, ಸೋಮನಾಥ , ಶಿವರಾಜ ಪಾಟೀಲ, ಹಣಂಮತರಾವ್ ತಿಪ್ಪಾ, ಕಲ್ಯಾಣರಾವ್, ರಾಮರೆಡ್ಡಿ ಮೊದಲಾದವರು ಇದ್ದರು. ಕಾರ್ಯಕ್ರಮದಲ್ಲಿ ಮಲ್ಲಯ್ಯ ಶಾಸ್ತ್ರೀ ಐನಾಪುರ ಅವರು ಪ್ರವಚನ‌ ನಡೆಸಿಕೊಟ್ಟು ಗುರುವಿನ ಮಹತ್ವ ವಿವರಿಸಿದರು. ನಾಗಪ್ಪ ಪಾಟೀಲ ಸ್ವಾಗತಿಸಿದರು.ರೇವಣಸಿದ್ದಪ್ಪ ನಾಗೂರು ನಿರೂಪಿಸಿದರು. ಮಹಾಂತಗೌಡ ಪಾಟೀಲ ವಂದಿಸಿದರು. 

=====ಪ್ರಶಸ್ತಿ ಪ್ರದಾನ===

ಸೇಡಂನ ಶಿವಶಂಕರ ಶಿವಾಚಾರ್ಯರಿಗೆ ಹೊನ್ನ ಕಿರಣಗಿಯ ಚಂದ್ರಗುಂಡ ಶಿವಾಚಾರ್ಯರಿಗೆ ಅಮರಶ್ರೀ ಹಾಗೂ ಸುಲೇಪೇಟ ಠಾಣೆಯ ಸಬ್ ಇನಸ್ಪೆಕ್ಟರ್ ಅಮರ ಕುಲಕರ್ಣಿ ಮತ್ತು ಪತ್ರಕರ್ತ ಜಗನ್ನಾಥ ಡಿ ಶೇರಿಕಾರ ಅವರಿಗೆ ಶ್ರೀ ಶಾಂತಲಿಂಗ ಶಿವಯೋಗಿ ಸೇವಾರತ್ನ ಪ್ರಶಸ್ತಿ ಪ್ರದಾನ‌ ಮಾಡಲಾಯಿತು.