ಬರ ಪರಿಹಾರದ ಹಣ ಕೂಡಲೇ ಬಿಡುಗಡೆಗೊಳಿಸಲು ರುದ್ರೇಶ ಕೊಟಗಿ ಆಗ್ರಹ
ಬರ ಪರಿಹಾರದ ಹಣ ಕೂಡಲೇ ಬಿಡುಗಡೆಗೊಳಿಸಲು ರುದ್ರೇಶ ಕೊಟಗಿ ಆಗ್ರಹ
ಗದಗ: ಜಿಲ್ಲೆಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಉಂಟಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರದಿಂದ ನಷ್ಟ ಅನುಭವಿಸಿರುವ ರೈತರ ಖಾತೆಗಳಿಗೆ ಸರ್ಕಾರ ಕೂಡಲೇ ಬರ ಪರಿಹಾರದ ಹಣ ಜಮೆ ಮಾಡಬೇಕು ಎಂದು ರೈತ ಹಸಿರು ಸೇನೆಯ ಕಾರ್ಯದರ್ಶಿ ರುದ್ರೇಶ ಕೊಟಗಿ ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಜಿಲ್ಲಾಡಳಿತ ಕೂಡಲೇ ಮೇವು ಸಂಗ್ರಹಿಸಿ, ಜಾನುವಾರುಗಳಿಗೆ ಸಮರ್ಪಕವಾಗಿ ಮೇವು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಚಳಿಗಾಲ ಆರಂಭವಾದರೂ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಜನರು ಹಾಗೂ ಜಾನುವಾರುಗಳು ತೊಂದರೆ ಅನುಭವಿಸುತ್ತಿವೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಕಬ್ಬಿನ ಬೆಲೆ ಹೆಚ್ಚಳಕ್ಕಾಗಿ ರೈತ ಸಂಘಟನೆಗಳು ಹೋರಾಟ ನಡೆಸುತ್ತಿವೆ. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಬೆಲೆ ಘೋಷಿಸುವುದು ಸರ್ಕಾರದ ಕರ್ತವ್ಯವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆಯೇ ಇತರೆ ಬೆಳೆಗಳನ್ನು ಬೆಳೆಯುವ ರೈತರ ಸಂಕಷ್ಟಗಳಿಗೂ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬರಗಾಲದಿಂದ ಅಪಾರ ನಷ್ಟ ಅನುಭವಿಸಿರುವ ರೈತರ ಖಾತೆಗಳಿಗೆ ಯಾವುದೇ ವಿಳಂಬವಿಲ್ಲದೆ ಪರಿಹಾರದ ಹಣ ಜಮೆ ಮಾಡಬೇಕು. ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸದೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಂಡು ಅನ್ನದಾತರ ನೆರವಿಗೆ ಧಾವಿಸಬೇಕು ಎಂದು ರುದ್ರೇಶ ಕೊಟಗಿ ಪ್ರಕಟಣೆ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವರದಿ: ಹುಚ್ಚೀರಪ್ಪ ವೀರಪ್ಪ ಈಟಿ ಜಿಲ್ಲಾ ವರದಿಗಾರರು, ಕಲ್ಯಾಣ ಕಹಳೆ – ಗದಗ

