ಕಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಜ್ರ ಮಹೋತ್ಸವಕ್ಕೆ ಹೋಟೆಲ್ ಸಂಘದ ಸಹಯೋಗಕ್ಕೆ ಒಪ್ಪಿಗೆ
ಕಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಜ್ರ ಮಹೋತ್ಸವಕ್ಕೆ ಹೋಟೆಲ್ ಸಂಘದ ಸಹಯೋಗಕ್ಕೆ ಒಪ್ಪಿಗೆ
ಕಲಬುರಗಿ : ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಜ್ರ ಮಹೋತ್ಸವದ ಅಂಗವಾಗಿ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಕಲಬುರಗಿ ಜಿಲ್ಲಾ ಹೋಟೆಲ್, ವಸತಿ ಮತ್ತು ಬೇಕರಿ ಮಾಲೀಕರ ಸಂಘವು ಪೂರ್ಣ ಸಹಯೋಗ ನೀಡುವಂತೆ ಕಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಶರಣಬಸಪ್ಪ ಪಪ್ಪ ಮನವಿ ಮಾಡಿದರು.
ಕಲಬುರಗಿ ಜಿಲ್ಲಾ ಹೋಟೆಲ್ ವಸತಿ ಮತ್ತು ಬೇಕರಿ ಮಾಲೀಕರ ಸಂಘದ ಮಾಸಿಕ ಸಭೆ ಶುಕ್ರವಾರ ( ಅ. 9ರಂದು ) ಹೋಟೆಲ್ ಯಾತ್ರಿಕ ನಿವಾಸ್ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಶರಣಬಸವಪ್ಪ ಪಪ್ಪ ಅವರು ಮಾತನಾಡಿ ಈ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಂತ ಸಂಸ್ಥೆಯು ಕಳೆದ 60 ವರ್ಷಗಳಲ್ಲಿ ಮಹತ್ವದ ಕೊಡುಗೆಗಳನ್ನು ಸಲ್ಲಿಸಿದೆ. ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರ ತ್ಯಾಗ, ಕೊಡುಗೆಗಳನ್ನು ಸ್ಮರಿಸುವುದರ ಜೊತೆಗೆ ಈ ಭಾಗದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ಹೊಂದಿದ ಕಂಪನಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಬೃಹತ್ ಕೈಗಾರಿಕಾ ವಸ್ತು ಪ್ರದರ್ಶನ - 2026 ನ. 28,29 ಮತ್ತು 30ರಂದು ಸೇಡಂ ರಸ್ತೆಯ ಎಂ.ಆರ್ ಎಂ.ಸಿ ಸ್ಯಾಕ್ ಸಭಾಂಗಣದಲ್ಲಿ ನಡೆಯಲಿದೆ.ಈ ಸಂದರ್ಭದಲ್ಲಿ ವಿಶೇಷವಾಗಿ ಸಾಧನೆ ಮಾಡಿದ ವಾಣಿಜ್ಯೋದ್ಯಮಿಗಳಿಗೆ "ಉದ್ಯೋಗ ರತ್ನ " ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಹೋಟೆಲ್, ವಸತಿ,ಬೇಕರಿ ಮಾಲೀಕರ ಸಂಘವು ಪೂರ್ಣ ಸಹಯೋಗ ನೀಡಿ ಯಶಸ್ವಿಗೊಳಿಸಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನರಸಿಂಹ ಮೆಂಡನ್ ಮಾತನಾಡಿ ನಗರದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋಟೆಲ್ ವಸತಿ ಮತ್ತು ಬೇಕರಿ ಉದ್ಯಮಿಗಳ ಪೂರ್ಣ ಬೆಂಬಲವಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೈಗಾರಿಕಾ ವಸ್ತು ಪ್ರದರ್ಶನದ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿವರಾಜ್ ವಿ ಇಂಗಿನಶೆಟ್ಟಿ, ಪದಾಧಿಕಾರಿಗಳಾದ ಕೇದಾರ ರಘೋಜಿ, ವಿನಯ್ ಚಿಕವತಾರ, ಅಭಿಜಿತ್ ಪಡಶೆಟ್ಟಿ,ಡಾ ಸದಾನಂದ ಪೆರ್ಲ, ಸತ್ಯನಾಥ ಶೆಟ್ಟಿ, ರಣನಂದ ಭಂಡಾರಿ, ರಾಜಶೇಖರ ಸಜ್ಜನ,ಪ್ರಶಾಂತ ಶೆಟ್ಟಿ ಇನ್ನಾ,ಶಿವರಾಜ್ ಕೋಟ್ಯಾನ್, ಸುನಿಲ್ ಶೆಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

