ಪ್ರಿಯಾಂಕ್ ಖರ್ಗೆ ಜನ್ಮದಿನದ ಅಂಗವಾಗಿ ಸರ್ಕಾರಿ ಶಾಲೆಗೆ ಅಭಿವೃದ್ಧಿ ಕಾಮಗಾರಿಗಳ ಕೊಡುಗೆ
ಪ್ರಿಯಾಂಕ್ ಖರ್ಗೆ ಜನ್ಮದಿನದ ಅಂಗವಾಗಿ ಸರ್ಕಾರಿ ಶಾಲೆಗೆ ಅಭಿವೃದ್ಧಿ ಕಾಮಗಾರಿಗಳ ಕೊಡುಗೆ
ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದ ಅಂಗವಾಗಿ ನಗರದ ತಾರಾಫೈಲ್ನ ಸೇಂಟ್ ಜಾನ್ ಶಾಲೆಯ ಹಿಂಭಾಗದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಜನಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ವಾರ್ಡ್ ನಂ. 44ರ ಮಹಾನಗರ ಪಾಲಿಕೆ ಸದಸ್ಯ ಸಚಿನ್ ಶಿರವಾಳ್ ಅವರ ನೇತೃತ್ವದಲ್ಲಿ ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯುವುದು, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಕಲಿಕಾ ಆಸಕ್ತಿ ಹೆಚ್ಚಿಸಲು ಗೋಡೆಗಳ ಮೇಲೆ ಆಕರ್ಷಕ ಚಿತ್ರಕಲೆ ಬಿಡಿಸುವುದು, ಶುದ್ಧ ಕುಡಿಯುವ ನೀರಿಗಾಗಿ ನೀರು ಶುದ್ಧೀಕರಣ ಘಟಕ ಸ್ಥಾಪಿಸುವುದು, ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಸ್ಮಾರ್ಟ್ ತರಗತಿ ಕೊಠಡಿ ಸಿದ್ಧಪಡಿಸಿ ಉದ್ಘಾಟಿಸುವುದು ಹಾಗೂ ಪರಿಸರ ಸಂರಕ್ಷಣೆಗಾಗಿ ವೃಕ್ಷಾರೋಪಣ ಸೇರಿದಂತೆ ಐದು ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ಸಚಿನ್ ಶಿರವಾಳ್ ಅವರನ್ನು ನಾನು ಪ್ರಿಯಾಂಕ್ ಖರ್ಗೆ ಅವರ ಭಕ್ತ ಎಂದೇ ಕರೆಯುತ್ತೇನೆ. ಅವರ ಹಾದಿಯಲ್ಲಿಯೇ ನಡೆಯುತ್ತಿರುವ ಯುವಕ ಸಚಿನ್, ಶಾಲೆಯ ಅಭಿವೃದ್ಧಿಗಾಗಿ ಐದು ಪ್ರಮುಖ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅಭಿವೃದ್ಧಿಯ ಇಚ್ಛಾಶಕ್ತಿಯಿಂದ ಕೆಲಸ ಮಾಡುವ ಯುವಕನಾಗಿದ್ದು, ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಹೊಸ ಹೊಸ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಕಲಬುರಗಿ ನಗರದಲ್ಲಿ ಗುರುತಿಸಿಕೊಳ್ಳುತ್ತಿರುವ ಯುವ ನಾಯಕ ಸಚಿನ್ ಶಿರವಾಳ್ ಅವರಿಗೆ ಅಭಿನಂದನೆಗಳು. ಶಾಲೆಯ ಅಭಿವೃದ್ಧಿಗಾಗಿ ಉತ್ತಮ ಕಾರ್ಯಗಳನ್ನು ಮಾಡಿದ್ದು, ಮುಂದೆಯೂ ಇಂತಹ ಕಾರ್ಯಗಳು ಮುಂದುವರಿಯಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕಿರಣ ದೇಶಮುಖ್ ಮಾತನಾಡಿ, ಸಚಿನ್ ಶಿರವಾಳ್ ಅವರು ಈ ಹಿಂದೆ ಪ್ರಿಯಾಂಕ್ ಖರ್ಗೆ ಅವರ ಜನ್ಮದಿನದಂದು ಓಪನ್ ಏರ್ ಲೈಬ್ರರಿ ಆರಂಭಿಸಿದ್ದರು. ಕಳೆದ ಜನ್ಮದಿನದ ಸಂದರ್ಭದಲ್ಲಿ 10 ನಿರ್ಗತಿಕರಿಗೆ ಸಣ್ಣ ಉದ್ಯಮ ಆರಂಭಿಸಲು ಅಗತ್ಯವಾದ ವ್ಯಾಪಾರ ಸಾಮಗ್ರಿಗಳನ್ನು ಒದಗಿಸಿದ್ದರು. ಈ ಬಾರಿ ಸರ್ಕಾರಿ ಶಾಲೆಯ ನವೀಕರಣ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸ್ಮಾರ್ಟ್ ಕ್ಲಾಸ್ ಸಿದ್ಧಪಡಿಸುವ ಮೂಲಕ ವಿನೂತನ ಪ್ರಯತ್ನ ಮಾಡಿದ್ದಾರೆ. ಅವರ ಸಮಾಜಮುಖಿ ಕಾರ್ಯಗಳು ಮುಂದುವರಿಯಲಿ ಹಾಗೂ ಅವರಿಗೆ ಇನ್ನಷ್ಟು ರಾಜಕೀಯ ಹುದ್ದೆಗಳು ದೊರೆಯಲಿ ಎಂದು ಹಾರೈಸಿದರು.
ಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ ಮಠ ಮಾತನಾಡಿ, ನಮ್ಮ ಶಾಲೆಯ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರಲಿಲ್ಲ. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಸಚಿನ್ ಶಿರವಾಳ್ ಅವರು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ಗಮನಿಸಿ ಅಭಿವೃದ್ಧಿಪಡಿಸುವ ಭರವಸೆ ನೀಡಿದ್ದರು. ಅವರು ಇಷ್ಟೊಂದು ತ್ವರಿತವಾಗಿ, ಕೇವಲ ಎರಡು ದಿನಗಳಲ್ಲಿ ಶಾಲೆಯ ಚಿತ್ರಣವನ್ನೇ ಬದಲಾಯಿಸುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಶಾಲಾ ಕಟ್ಟಡಕ್ಕೆ ಬಣ್ಣ ಬಳಿಯುವುದು, ಗೋಡೆಗಳ ಮೇಲೆ ಆಕರ್ಷಕ ಚಿತ್ರಕಲೆ ಬಿಡಿಸುವುದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವುದು, ಸ್ಮಾರ್ಟ್ ತರಗತಿ ಕೊಠಡಿ ಸಿದ್ಧಪಡಿಸಿ ಉದ್ಘಾಟಿಸುವುದು ಹಾಗೂ ಗಿಡಗಳನ್ನು ನೆಡುವ ಮೂಲಕ ಶಾಲೆಗೆ ಅಗತ್ಯವಾದ ಐದು ಪ್ರಮುಖ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇದರಿಂದ ಶಾಲೆಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗಾಗಿ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಪರವಾಗಿ ಸಚಿನ್ ಶಿರವಾಳ್ ಅವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಸಚಿನ್ ಶಿರವಾಳ್ ಮಾತನಾಡಿ, ಜನರ ಸೇವೆ ಮತ್ತು ಸಮಾಜದ ಅಭಿವೃದ್ಧಿಯೇ ನಮ್ಮ ಆದ್ಯತೆಯಾಗಿದ್ದು, ಇಂತಹ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕಿರಣ ದೇಶಮುಖ್, ಜಿಡಿಎ ಅಧ್ಯಕ್ಷ ಮಜಹರ್ ಅಲಂ ಖಾನ್, ಕೆಎಸ್ಆರ್ಟಿಸಿ ಅಧ್ಯಕ್ಷ ಅರುಣ್ ಪಾಟೀಲ, ಕಾಂಗ್ರೆಸ್ ಮುಖಂಡರಾದ ಸಂತೋಷ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಹ್ಮದ್, ಸ್ಥಾಯಿ ಸಮಿತಿ ಅಧ್ಯಕ್ಷೆ ರೇಣುಕಾ, ರಾಜೀವ ಜಾನೆ, ಈರಣ್ಣ ಜಳಕಿ, ಪಪ್ಪು ಪಟೇಲ್, ಫಾರೂಕ್ ಸೇಠ್, ಶ್ರೀನಿವಾಸ ಲಾಖೆ, ಅಜರುದ್ದೀನ್, ಜೈದಿ, ಅಜೀಮುದ್ದೀನ್ ಸೇರಿದಂತೆ ಸಾರ್ವಜನಿಕರು, ಶಿಕ್ಷಣಾಸಕ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.

