ದೇಶದಲ್ಲಿ ಜಾತಿ ಹೆಸರಲ್ಲಿ ರಾಜಕೀಯ ನಡೆಯುತ್ತಿದೆ : ಶಾಸಕ ಡಾ. ಅವಿನಾಶ ಜಾಧವ
ದೇಶದಲ್ಲಿ ಜಾತಿ ಹೆಸರಲ್ಲಿ ರಾಜಕೀಯ ನಡೆಯುತ್ತಿದೆ : ಶಾಸಕ ಡಾ. ಅವಿನಾಶ ಜಾಧವ
ಬಸವಾದಿ ಶಿವಶರಣ ಕಲಬುರಗಿ ಚಲೋ ಹಿಂದೂ ಸಮಾವೇಶಕ್ಕೆ ಒಗ್ಗಟು ಪ್ರದರ್ಶಿಸಿ : ಚಂದು ಪಾಟೀಲ ಮನವಿ
ಚಿಂಚೋಳಿ :
ದೇಶದಲ್ಲಿ ಜಾತಿ ಹೆಸರಲ್ಲಿ ರಾಜಕೀಯ ನಡೆಯುತ್ತಿದೆ. ಹಿಂದೂಗಳು ಒಂದಾಗಿ ಶಕ್ತಿ ಪ್ರದರ್ಶನ ಮಾಡಬೇಕೆಂದು ಶಾಸಕ ಡಾ. ಅವಿನಾಶ ಜಾಧವ ಮನವಿ ಮಾಡಿದರು.
ಅವರು ಸೆ. 27 ರಂದು ಕಲಬರುಗಿ ನೂತನ ವಿದ್ಯಾಲಯ ಮೈದಾನದಲ್ಲಿ ಕನ್ನೆರಿ ಮಠದ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುವ ಬಸವಾದಿ ಶಿವಶರಣರ ಕಲಬುರಗಿ ಚಲೋ ಹಿಂದೂ ಸಮಾವೇಶ ಕಾರ್ಯಕ್ರಮದ ಅಂಗವಾಗಿ ಚಂದಾಪೂರದ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿರುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕೇವಲ ಒಂದು ಜಾತಿಯಿಂದ ಹಿಂದೂಗಳೆಂದು ಕರೆಯಿಸಿಕೊಳ್ಳಲು ಸಾಧ್ಯವಿಲ್ಲ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ ಎಲ್ಲಾ ಜಾತಿಯ ಪಗಂಡಗಳು ಸೇರಿ ಒಗ್ಗಟು ಪ್ರದರ್ಶಿಸಿದಾಗ ಮಾತ್ರ ಹಿಂದೂ ಸಮಾವೇಶಕ್ಕೆ ಮೆರಗು ಬರಲು ಸಾಧ್ಯವಿದೆ. ಹೀಗಾಗಿ ಸೆ.27 ರಂದು ಕಲಬುರಗಿಯಲ್ಲಿ ನಡೆಯುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಪಕ್ಷಾತೀತವಾಗಿ ಎಲ್ಲಾ ವರ್ಗದ ಜಾತಿಗಳು ಒಗ್ಗಟಿನಿಂದ ಚಿಂಚೋಳಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಕಲಬುರಗಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ್ ಅವರು ಮಾತನಾಡಿ, ಕನ್ನೆರಿ ಮಠದ ಪೂಜ್ಯ ಶ್ರೀ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಬಸವಾದಿ ಶಿವಶರಣರ ಕಲಬುರಗಿ ಚಲೋ ಹಿಂದೂ ಸಮಾವೇಶವು ಯಾವುದೇ ಕಾಂಟ್ರವರ್ಸಿಗೆ ನಡೆಯುತ್ತಿಲ್ಲ. ಧರ್ಮ ಪರಿಸರ ಹಾಗೂ ಕೃಷಿ ಮತ್ತು ರೈತಾಪಿ ವರ್ಗದ ಕಲ್ಯಾಣಕ್ಕಾಗಿ ಹಿಂದೂ ಸಮಾವೇಶ ನಡೆಸಲಾಗುತ್ತಿದೆ. ಕಾಂಗ್ರೇಸ್ , ಜೆಡಿಎಸ್, ಬಿಜೆಪಿ ಅನ್ನದೇ ಎಲ್ಲರೂ ಪಕ್ಷಾತೀತವಾಗಿ ಸಹಸ್ರ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು.
ಬಿಜೆಪಿ ಹಿರಿಯ ಮುಖಂಡರು ಹಾಗೂ ಜಿಲ್ಲಾ ಮಾದಿಗ ಸಮಾಜದ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ, ಯುವ ಮುಖಂಡ ರಾಹುಲ್ ಯಾಕಾಪೂರ, ರವಿರಾಜ ಕೊರವಿ, ಭೀಮಶೆಟ್ಟಿ ಮುರುಡಾ ಅವರು ಮಾತನಾಡಿದರು. ಬಳಿಕ ಬಸವಾದಿ ಶಿವಶರಣರ ಕಲಬುರಗಿ ಚಲೋ ಹಿಂದೂ ಸಮಾವೇಶ ಕಾರ್ಯಕ್ರಮದ ಪೋಸ್ಟರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ-ಕಾಳಗಿ ಬಿಜೆಪಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೆಂಗಂಟೆ, ನಾಗರಾಜ ಮಲಕೋಡ್, ಲೋಕೇಶ ಶೆಳಗ್ಗಿ, ಸುನೀಲಕುಮಾರ ಕಾಳಗಿ, ಶಂಕರ ಶಿವಪುರಿ, ರಂಗಣ್ಣ ಪೊಲೀಸ್, ಸಂತೋಷ ಗಡಂತಿ, ರಾಜು ಪವಾರ, ಪ್ರೇಮಸಿಂಗ್ ಜಾಧವ ಅವರು ಇದ್ದರು.

