ಮಾಂಜ್ರಾ ನದಿಗೆ ನೀರು ಹರಿಸಲು ಶಾಸಕ ಪ್ರಭು ಚವ್ಹಾಣ ಸೂಚನೆ
ಮಾಂಜ್ರಾ ನದಿಗೆ ನೀರು ಹರಿಸಲು ಶಾಸಕ ಪ್ರಭು ಚವ್ಹಾಣ ಸೂಚನೆ
ಮಾಂಜ್ರಾ ನದಿ ಬತ್ತಿಹೋಗಿರುವುದರಿಂದ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ಅಗತ್ಯ ಪ್ರಮಾಣದ ನೀರು ಹರಿಸುವಂತೆ ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ.ಚವ್ಹಾಣ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದ ಶಾಸಕರು, ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಮಾಂಜ್ರಾ ನದಿ ಬತ್ತಿಹೋಗಿದೆ. ಹಾಲಳ್ಳಿಯಿಂದ ಔರಾದ ಪಟ್ಟಣಕ್ಕೆ ಅಗುವ ನೀರು ಸರಬರಾಜಿನಲ್ಲಿಯೂ ವ್ಯತ್ಯಯ ಉಂಟಾಗಿದ್ದು, ಎಲ್ಲ ವಾರ್ಡ್ ಗಳಿಂದ ನಿರಂತರ ದೂರುಗಳು ಬರುತ್ತಿವೆ. ಜೊತೆಗೆ ನದಿ ವ್ಯಾಪ್ತಿಯ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿದ್ದು, ಜನ-ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಹಾಗಾಗಿ ತುರ್ತಾಗಿ ನದಿಗೆ ನೀರು ಹರಿಸಿ ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಅನುಕೂಲ ಮಾಡಿಕೊಡುವಂತೆ ನಿರ್ದೇಶನ ನೀಡಿದ್ದಾರೆ.
*ಪಿಡಿಓಗಳು ಕೇಂದ್ರ ಸ್ಥಾನದಲ್ಲಿರಿ:* ಮಳೆ ಕೊರತೆಯಿಂದಾಗಿ ಈ ಬಾರಿ ಬೇಸಿಗೆಗೂ ಮುನ್ನವೇ ಬರ ಪರಿಸ್ಥಿತಿ ಉಂಟಾಗಿದ್ದು, ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಹಾಗೂ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಕುರಿತು ದೂರು ನೀಡಿದಾಗ ನಿರ್ಲಕ್ಷ್ಯ ಮಾಡದೆ ತಕ್ಷಣ ಸ್ಪಂದಿಸಿ ಪರಿಹಾರ ಕಲ್ಪಿಸಬೇಕು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಪಿಡಿಓಗಳ ಕಾರ್ಯವೈಖರಿಯನ್ನು ಪರಿಶೀಲಿಸುವುದರ ಜೊತೆಗೆ ಗ್ರಾಮಗಳಲ್ಲಿ ನೀರು ಪೂರೈಕೆಯ ಸ್ಥಿತಿಗತಿಗಳ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ಸೂಚಿಸಿದ್ದಾರೆ.
ಜೆಜೆಎಂ ಯೋಜನೆ ನಿರೀಕ್ಷೆಗೆ ತಕ್ಕಂತೆ ಆಗದ ಹಿನ್ನೆಲೆಯಲ್ಲಿ ಎಲ್ಲ ಗ್ರಾಮಗಳಿಗೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದಿರುವುದು ಕಂಡುಬಂದಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ಅಧಿಕಾರಿಗಳು ಸಮಸ್ಯೆ ಇರುವ ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ, ನೀರು ಪೂರೈಕೆಯಲ್ಲಿನ ಅಡಚಣೆಗಳನ್ನು ಪರಿಶೀಲಿಸಿ, ತಕ್ಷಣ ಪರಿಹಾರ ಕಲ್ಪಿಸಬೇಕು. ಕೇವಲ ಕಚೇರಿಯಲ್ಲಿ ಕುಳಿತುಕೊಳ್ಳದೆ, ಜನರ ಬಳಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಅವರು ತಾಕೀತು ಮಾಡಿದ್ದಾರೆ.
ಬರ ಪರಿಸ್ಥಿತಿಯಿಂದ ಈಗಾಗಲೇ ರೈತರು ಹಾಗೂ ಗ್ರಾಮೀಣ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ತೊಂದರೆ ಉಂಟುಮಾಡಬಾರದು. ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವುದು ಅಧಿಕಾರಿಗಳ ಮೊದಲ ಆದ್ಯತೆಯಾಗಬೇಕು. ಕುಡಿಯುವ ನೀರಿನ ವಿಷಯದಲ್ಲಿ ಜನರಿಗೆ ತೊಂದರೆಯಾದರೆ ಯಾವುದೇ ಕಾರಣಕ್ಕೂ ಸುಮ್ಮನಿರುವುದಿಲ್ಲ ಎಂದು ಶಾಸಕರು ಎಚ್ಚರಿಸಿದ್ದಾರೆ.

