ಮಕ್ಕಳ ಭವಿಷ್ಯಕ್ಕೆ ಗಾಂಧಿ ವಿಚಾರಗಳು ಪ್ರೇರಣೆ: ಪ್ರೊ. ಶಶಿಕಾಂತ್ ಎಸ್. ಉಡಿಕೇರಿ
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಅವರ ೧೫೭ನೇ ಜಯಂತ್ಯುತ್ಸವ ಆಚರಣೆ
ಮಕ್ಕಳ ಭವಿಷ್ಯಕ್ಕೆ ಗಾಂಧಿ ವಿಚಾರಗಳು ಪ್ರೇರಣೆ: ಪ್ರೊ. ಶಶಿಕಾಂತ್ ಎಸ್. ಉಡಿಕೇರಿ
ಕಲಬುರಗಿ: ಭಾರತದ ನೆಲದಲ್ಲಿ ಹುಟ್ಟಿದವರೆಲ್ಲ ಪುಣ್ಯವಂತರು. ದೇಶಕ್ಕಾಗಿ ದುಡಿದ ಮಹನೀಯರ ವಿಚಾರಗಳು ಮಕ್ಕಳ ಭವಿಷ್ಯಕ್ಕೆ ಪ್ರೇರಣೆ ನೀಡುತ್ತವೆ. ಮಹಾತ್ಮ ಗಾಂಧೀಜಿ ಅವರ ಶಾಂತಿ ಮಂತ್ರ ಬದುಕಿಗೆ ಪ್ರೇರಣೆ ನೀಡುತ್ತವೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಮಹಾತ್ಮಾ ಗಾಂಧಿ ಮತ್ತು ಲಾಲ ಬಹದ್ದೂರ್ ಶಾಸ್ತ್ರಿ ಅವರ ಜಯಂತಿ ಆಚರಣೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮ ದಿನವಾದ ಇಂದು ನಾವೆಲ್ಲರೂ ಅವರ ಬದುಕು, ಸರಳತೆಯನ್ನು ಅನುಸರಿಸಬೇಕು. ವಿದ್ಯಾರ್ಥಿಗಳು ಅನ್ಯರ ವಿಚಾರಗಳಿಗೆ ಕಿವಿಗೊಡದೆ ಹಿರಿಯರ ಆಶಯದಂತೆ ಉತ್ತಮ ನಡೆ-ನುಡಿ ಪಾಲಿಸಬೇಕು. ಉತ್ತಮ ಪುಸ್ತಕ ಓದಿದರೆ ಮಾತ್ರ ಹೊಸದನ್ನು ಪಡೆಯಬಹುದು. ಗಾಂಧೀಜಿಯ ಭವ್ಯ ಭಾರತದ ಕನಸನ್ನು ಈಡೇರಿಸಲು ವಿದ್ಯಾರ್ಥಿ ಸಮೂಹ ಚಿಂತಿಸಿ ಓದುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಗುಡಿ ಕೈಗಾರಿಕೆ, ಖಾದಿ ಕೇಂದ್ರಗಳಿಂದ ಗ್ರಾಮೀಣ ಭಾರತ ಉಳಿಯುತ್ತದೆ ಎಂಬುದು ಗಾಂಧೀಜಿ ನಿಲುವಾಗಿತ್ತು. ಇಂದಿನ ಸಮಾಜ ಸತ್ಯ ಮತ್ತು ಅಹಿಂಸೆಗೆ ಗಾಂದೀಜಿ ಮತ್ತು ಸಮಾನತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ನೆನಪಿಸಿಕೊಳ್ಳಬೇಕು ಎಂದರು.
ಸಾಹಿತಿ ಡಾ. ಶಿವಲಿಂಗ ಹೇಡೆ ಮುಖ್ಯ ಅತಿಥಿಯಾಗಿ ಮಾತನಾಡಿ ಮಹಾತ್ಮ ಗಾಂಧೀಜಿ ಎಂಬ ಹೆಸರಿನಲ್ಲಿ ದೈತ್ಯ ಶಕ್ತಿಯಿದೆ. ನಡೆ, ನುಡಿ, ತನು, ಮನ, ಭಾವ ಎಂಬ ಪಂಚ ತತ್ವಗಳ ಸ್ವತಃ ಅನುಸರಿಸಿ ಸತ್ಯ, ಶಾಂತಿ, ಅಹಿಂಸೆ ಮತ್ತು ನೈತಿಕ ಬಲದಿಂದ ಚಳುವಳಿ, ಸತ್ಯಾಗ್ರಹದ ಮೂಲಕ ದೇಶಕ್ಕೆ ಸ್ವಾತಂತ್ರö್ಯ ತಂದರು. ಕ್ರೌರ್ಯ ಮತ್ತು ಯುದ್ದದಿಂದ ಜಗತ್ತನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದಕ್ಕೆ ಬದ್ಧರಾಗಿದ್ದ ಗಾಂಧಿ ‘ಮನುಕುಲದ ಒಳಿತಿಗಾಗಿ ಪ್ರಾಣ ಕೊಡಲು ಸಿದ್ಧ, ಪ್ರಾಣ ತೆಗೆಯಲು ನಾನು ಸಿದ್ಧನಿಲ್ಲ’ ಎಂಬ ತತ್ವ, ಸಿದ್ದಾಂತವನ್ನು ಎಂದೂ ಬಿಟ್ಟುಕೊಟ್ಟವರಲ್ಲ. ಅಂತರAಗ ಶುದ್ಧೀಕರಣದಿಂದ ಸಮಾಜ ಶುದ್ಧೀಕರಣಗೊಳಿಸಲು ಅನೇಕ ಪ್ರಯೋಗಗಳನ್ನು ನಡೆಸಿದ ಗಾಂಧೀಜಿ ಪ್ರೀತಿ-ಸ್ನೇಹದಿಂದ ಬೇದ-ಭಾವ ಹೋಗಲಾಡಿಸಿ ಸ್ವರಾಜ್ಯ ಕಲ್ಪನೆ ಮೂಡಿಸಿದರು ಎಂದರು.
ಮೌಲ್ಯಮಾಪನ ಕುಲಸಚಿವೆ ಪ್ರೊ. ಅಶ್ವಿನಿ ಮಾತನಾಡಿ ವಿದ್ಯಾರ್ಥಿಗಳು ಯಾವುದೇ ನಶೆಗೆ ಬಲಿಯಾಗಬಾರದು. ಮೊಬೈಲ್ ಗೀಳು ಒಳ್ಳೆಯ ಅಭ್ಯಾಸವಲ್ಲ. ನಿಮ್ಮಲ್ಲಿನ ಕೊರತೆಗಳನ್ನು ಹೋಗಲಾಡಿಸಲು ಬುದ್ಧ, ಗಾಂಧಿ, ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಇನ್ನು ಮುಂತಾದ ಮಹನೀಯರ ಬದುಕನ್ನು ಓದಿ ಸುಧಾರಿಸಿಕೊಂಡು ಸಾಧನೆ ಕಡೆಗೆ ಲಕ್ಷವಹಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯ ಮಟ್ಟದ ಅಂತರ ಮಹಾ ವಿದ್ಯಾಲಯಗಳ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರವನ್ನು ಸಸಿಗೆ ನೀರಿ ಹಾಕುವ ಮೂಲಕ ಅತಿಥಿ ಗಣ್ಯರು ಶಿಬಿರವನ್ನು ಉದ್ಘಾಟಿಸಿದರು. ರಾಸೇಯೋ ಕೋಶದ ಸಂಯೋಜಕ ಡಾ. ಹೆಚ್. ಎಸ್. ಜಂಗೆ ಅತಿಥಿ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ, ವಿದ್ಯಾವಿಷಯಕ ಪರಿಷತ್ ಸದಸ್ಯ ಪ್ರೊ. ಆರ್.ಎಲ್. ರಾಯಬಾಗಕರ್ ಉಪಸ್ಥಿತರಿದ್ದರು.
ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು ಅತಿಥಿ ಉಪನ್ಯಾಸಕರು, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಗೀತ ವಿಭಾಗದ ಅತಿಥಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಗಾಂಧಿ ಸ್ಮೃತಿ ಮತ್ತು ಭಜನೆ ಪ್ರಸ್ತುತಪಡಿಸಿದರು ಪರೀಕ್ಷಾ ವಿಭಾಗದ ಕಚೇರಿ ಅಧೀಕ್ಷಕ ಬಿ. ಎಂ. ರುದ್ರವಾಡಿ ಕಾರ್ಯಕ್ರಮ ನಿರ್ವಹಿಸಿದರು. ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ ವಂದಿಸಿದರು.

