ಟೇಲರಿಂಗ್ ತರಬೇತಿಯಿಂದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ- ಶರಣಗೌಡ ಪಾಟೀಲ ಪಾಳಾ
ಟೇಲರಿಂಗ್ ತರಬೇತಿಯಿಂದ ಮಹಿಳೆಯರ ಸ್ವಾವಲಂಬನೆಗೆ ಉತ್ತೇಜನ- ಶರಣಗೌಡ ಪಾಟೀಲ ಪಾಳಾ
ಕಲಬುರಗಿ:ಮಹಿಳೆಯರಿಗೆ ವೃತ್ತಿಪರ ತರಬೇತಿ ನೀಡುವ ಮೂಲಕ ಅವರಲ್ಲಿ ಸ್ವಾವಲಂಬನೆ ಹಾಗೂ ಆರ್ಥಿಕ ಸ್ವಾತಂತ್ರ್ಯದ ಮನೋಭಾವ ಬೆಳೆಸುವ ಕಾರ್ಯಕ್ಕೆ ಧಾನೇಶ್ವರಿ ಸೇವಾ ಸಂಸ್ಥೆ ಮುಂದಾಗಿರುವುದು ಶ್ಲಾಘನೀಯ ಎಂದು ಪತ್ರಕರ್ತ ಶರಣಗೌಡ ಪಾಟೀಲ ಪಾಳಾ ಹೇಳಿದರು.
ತಾಲೂಕಿನ ಪಾಳಾ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಧಾನೇಶ್ವರಿ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಮಹಿಳೆಯರ ಟೇಲರಿಂಗ್ ತರಬೇತಿ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಟೇಲರಿಂಗ್ ತರಬೇತಿ ಪಡೆದ ಮಹಿಳೆಯರು ಮನೆಯಲ್ಲಿಯೇ ವೃತ್ತಿ ಆರಂಭಿಸಿ ಆದಾಯ ಗಳಿಸಬಹುದು. ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ ಮಹಿಳೆಯರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಭಾವನೆ ಬಲಗೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ದಣ್ಣ ಎಸ್. ಡೂಣಿ ಕಲಮೂಡ, ಭೀಮಶಾ ಹೊಡಲ, ವೀರೂಸ್ವಾಮಿ ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಾನಾಗೌಡ ಪಾಟೀಲ ನಿರೂಪಿಸಿದರು. ರಾಧಾಬಾಯಿ ಪಾಟೀಲ, ಸುನಿತಾ ಪಾಟೀಲ, ನಿಂಗಮ್ಮ ಹೆಬ್ಬಾಳ ಸೇರಿದಂತೆ ಹಲವು ಮಹಿಳೆಯರು ಭಾಗವಹಿಸಿದ್ದರು.

