ಭಕ್ತಿ, ಶ್ರದ್ಧೆಯಿಂದ ಧಾರ್ಮಿಕ ಆಚರಣೆಗಳು ಮನಸ್ಸಿಗೆ ನೆಮ್ಮದಿ

ಭಕ್ತಿ, ಶ್ರದ್ಧೆಯಿಂದ ಧಾರ್ಮಿಕ ಆಚರಣೆಗಳು ಮನಸ್ಸಿಗೆ ನೆಮ್ಮದಿ

ಭಕ್ತಿ, ಶ್ರದ್ಧೆಯಿಂದ ಧಾರ್ಮಿಕ ಆಚರಣೆಗಳು ಮನಸ್ಸಿಗೆ ನೆಮ್ಮದಿ: ಸಚಿವ ಡಾ. ಶರಣಪ್ರಕಾಶ್ ಪಾಟೀಲ

ಕಲಬುರಗಿ: ಭಕ್ತಿ, ಶ್ರದ್ಧೆ ಹಾಗೂ ನಿಯಮ-ಸಂಯಮದಿಂದ ಆಚರಿಸುವ ಧಾರ್ಮಿಕ ಕಾರ್ಯಕ್ರಮಗಳು ಮನುಷ್ಯನ ಮನಸ್ಸಿಗೆ ನೆಮ್ಮದಿ ನೀಡುವುದರ ಜೊತೆಗೆ ಸಮಾಜದಲ್ಲಿ ಶಾಂತಿ, ಸಹನೆ, ಸೌಹಾರ್ದತೆ ಹಾಗೂ ಸಹೋದರತ್ವದ ಭಾವನೆ ಬೆಳೆಸುತ್ತವೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ ಹೇಳಿದರು.

ನಗರದ ನಾಗನಹಳ್ಳಿ ಓವರ್‌ಬ್ರಿಜ್ ಸಮೀಪದ ಅಶೋಕ ಲೇಔಟ್‌ನ 27ನೇ ಕ್ರಾಸ್‌ನಲ್ಲಿರುವ ಅಯ್ಯಪ್ಪ ಸನ್ನಿಧಾನದಲ್ಲಿ ಗುರುಸ್ವಾಮಿ ಅಶೋಕ ಹೊನ್ನಳ್ಳಿ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಯ್ಯಪ್ಪಸ್ವಾಮಿಯ ಆರಾಧನೆ ಶ್ರದ್ಧೆ, ನಿಯಮ, ಸಂಯಮ ಹಾಗೂ ಭಕ್ತಿಯ ಸಂಕೇತವಾಗಿದೆ. ಅಯ್ಯಪ್ಪ ಭಕ್ತರು ಮಾಲಾಧಾರಣೆ ಮೂಲಕ ಕಠಿಣ ವ್ರತ ಹಾಗೂ ಶಿಸ್ತನ್ನು ಪಾಲಿಸುವುದು ಶ್ಲಾಘನೀಯ. ಭಕ್ತಿ ಮಾರ್ಗದ ಜೊತೆಗೆ ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಎಲ್ಲರಿಗೂ ಆರೋಗ್ಯ, ಶಾಂತಿ ಹಾಗೂ ಸಮೃದ್ಧಿ ದೊರೆಯಲಿ ಎಂದು ಅಯ್ಯಪ್ಪಸ್ವಾಮಿಯಲ್ಲಿ ಪ್ರಾರ್ಥಿಸುವುದಾಗಿ ಸಚಿವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಭೀಮಾಶಂಕರ ಬಿಲಗುಂದಿ, ಮಾಜಿ ಮೇಯರ್ ರವೀಂದ್ರನಾಥ ಹೊನ್ನಳ್ಳಿ, ಗುರುಸ್ವಾಮಿಗಳಾದ ಮಲ್ಲಿಕಾರ್ಜುನ ಖಜೂರಿ, ಬನಶಂಕರಿ ಅಂಗಡಿ, ಗುರುದೇವ ಕಳಸ್ಕರ್, ರವಿ ಕೊರವಿ, ಚಂದ್ರಶೇಖರ ಹಾವೇರಿ, ರಾಹುಲ್ ಹೊನ್ನಳ್ಳಿ, ರಾಜಕುಮಾರ ಹೊನ್ನಳ್ಳಿ, ನಾಗು ಪಾಟೀಲ. ಶರಣು ಬಿರಾದರ್,

 ಸೇರಿದಂತೆ ಅಯ್ಯಪ್ಪ ಮಾಲಾಧಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.