ಭಾವೈಕ್ಯತೆಯ ಸಂದೇಶ ಸಾರಿದ ಗಡ್ಡಿ ಮಾರುತೇಶ್ವರ ಪಲ್ಲಕ್ಕಿ ಉತ್ಸವ
ಮಾರನಬಸರಿಯಲ್ಲಿ ಗಡ್ಡಿ ಮಾರುತೇಶ್ವರ ಪಲ್ಲಕ್ಕಿ ಉತ್ಸವ
ಉದ್ಭವ ಮೂರ್ತಿ ಗಡ್ಡಿ ಮಾರುತೇಶ್ವರನಿಗೆ ವಿಶೇಷ ಆರಾಧನೆ
ಭಾವೈಕ್ಯತೆ, ಜನಪದ ನಂಬಿಕೆಯ ಸಂಗಮ
ನರೇಗಲ್: ಗ್ರಾಮೀಣ ಜನಪದ ಸಂಸ್ಕೃತಿ, ಆಚರಣೆ ಹಾಗೂ ಅನನ್ಯ ನಂಬಿಕೆಗಳ ಪ್ರತೀಕವಾದ ಸಮೀಪದ ಮಾರನಬಸರಿ ಗ್ರಾಮದ ಐತಿಹಾಸಿಕ ಗಡ್ಡಿ ಮಾರುತೇಶ್ವರ ದೇವಸ್ಥಾನದ ವಾರ್ಷಿಕ ಪಲ್ಲಕ್ಕಿ ಉತ್ಸವವು ಶ್ರಾವಣ ಮಾಸದ ಮೂರನೇ ಶನಿವಾರದಂದು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮ-ಸಡಗರಗಳಿಂದ ಜರುಗಿತು.
ಈ ಗ್ರಾಮದ ದಕ್ಷಿಣ ಭಾಗದ ಹೊಲವೊಂದರಲ್ಲಿ ನೆಲೆಸಿರುವ ಗಡ್ಡಿ ಮಾರುತೇಶ್ವರ ಮೂರ್ತಿಯು ಭೂಮಿಯಲ್ಲಿ ತಾನಾಗಿಯೇ ಉದ್ಭವಿಸಿದ ಜಾಗೃತ ದೈವ ಎಂಬುದು ಗ್ರಾಮಸ್ಥರ ಬಲವಾದ ನಂಬಿಕೆ. ಹಿರಿಯರ, ಪೂರ್ವಜರ ಕಾಲದಿಂದಲೂ ಈ ಮೂರ್ತಿಗೆ ಶ್ರಾವಣ ಮಾಸದಲ್ಲಿ ಅತ್ಯಂತ ಭಕ್ತಿಯಿಂದ ವಿಶೇಷ ಆರಾಧನೆ ನೆರವೇರಿಸಿಕೊಂಡು ಬರಲಾಗುತ್ತಿದೆ ಎಂದು ಗ್ರಾಮದ ಹಿರಿಯರಾದ ಶರಣಪ್ಪ ಕುರಿ ಹಾಗೂ ವಿಶ್ವನಾಥ ಗುರುಭಟ್ಟ ವೈದ್ಯ ತಿಳಿಸಿದರು.
ಉತ್ಸವದ ಧಾರ್ಮಿಕ ವಿಧಿ-ವಿಧಾನಗಳು ಮಾರನಬಸರಿಯಿಂದ ಜಕ್ಕಲಿ ಕಡೆಗೆ ತೆರಳುವ ರಸ್ತೆ ಬದಿಯ ಹಳ್ಳದ ಸಮೀಪವಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತವೆ. ಉತ್ಸವದ ಅಂಗವಾಗಿ ಗ್ರಾಮಸ್ಥರು ಸ್ವಯಂಪ್ರೇರಿತರಾಗಿ ದೇಣಿಗೆ ನೀಡಿದರೆ, ರೈತರು ತಮ್ಮ ಮನೆಗಳಲ್ಲಿ ಬೆಳೆದ ಜೋಳ, ಧಾನ್ಯಗಳು, ಕಾಳು-ಕಡಿ ಹಾಗೂ ಮೆಣಸಿನಕಾಯಿಯನ್ನು ಪ್ರಸಾದಕ್ಕೆ ದಾನವಾಗಿ ಅರ್ಪಿಸುತ್ತಾರೆ. ದೇವರಿಗೆ ವಿಶೇಷ ಪೂಜೆ ನೆರವೇರಿದ ಬಳಿಕ ಭಕ್ತರಿಗೆ ಉತ್ತರ ಕರ್ನಾಟಕದ ಜನಪ್ರಿಯ ರುಚಿಕರ ಜೋಳದ ಸಂಗಟಿ ಮತ್ತು ಸಾರಿನ ದಾಸೋಹ (ಅನ್ನಸಂತರ್ಪಣೆ) ಏರ್ಪಡಿಸಲಾಗುತ್ತದೆ ಎಂದು ಗ್ರಾಮಸ್ಥರಾದ ಮುತ್ತಪ್ಪ ಪೂಜಾರ, ಗುಳ್ಳಪ್ಪ ಮರಡಿ, ಶ್ರೀಕಾಂತ್ ಕುಲಕರ್ಣಿ, ಭೀಮಪ್ಪ ಜಾಲಿಹಾಳ ಮಾಹಿತಿ ನೀಡಿದರು. ಗ್ರಾಮಸ್ಥರು ತಮ್ಮ ಮನೆಯಿಂದಲೇ ತಟ್ಟೆಗಳನ್ನು ತಂದು ಪ್ರಸಾದವನ್ನು ಸ್ವೀಕರಿಸುವ ವಿಶೇಷ ಪದ್ಧತಿ ಇಲ್ಲಿದೆ. ಪರಸ್ಥಳದಿಂದ ಬರುವ ಭಕ್ತರಿಗೆ ಮಾತ್ರ ಊಟದ ಎಲೆಗಳನ್ನು ಒದಗಿಸಲಾಗುತ್ತದೆ.
ಅನ್ನಸಂತರ್ಪಣೆಯ ನಂತರ ಜಕ್ಕಲಿ ಮಾರ್ಗದ ಆಂಜನೇಯಸ್ವಾಮಿ ದೇವಸ್ಥಾನದಿಂದ ಪಾಲಕಿ ಹೊರಡುತ್ತದೆ. ಜಾನಪದ ಕಲೆ 'ಡೊಳ್ಳಿನ ಮಜಲು' ವಾದ್ಯ ವೈಭವದೊಂದಿಗೆ ಪಾಲಕಿಯು ಮಾರನಸಬರಿಯ ದಕ್ಷಿಣ ದಿಕ್ಕಿನ ಹೊಲದಲ್ಲಿರುವ ಗಡ್ಡಿ ಆಂಜನೇಯ ಉದ್ಭವ ಮೂರ್ತಿಯ ಸನ್ನಿಧಾನಕ್ಕೆ ತಲುಪುತ್ತದೆ. ಈ ವೇಳೆ ನಾಡಿನಲ್ಲಿ ಉತ್ತಮ ಮಳೆ-ಬೆಳೆಯಾಗಲಿ, ಸಮೃದ್ಧಿ ನೆಲೆಸಲಿ ಹಾಗೂ ಸಕಲ ಜೀವಕೋಟಿಗೆ ಉತ್ತಮ ಆರೋಗ್ಯ ಕರುಣಿಸಲಿ ಎಂದು ಗಡ್ಡಿ ಮಾರುತೇಶ್ವರನಿಗೆ ಗ್ರಾಮಸ್ಥರು ಒಟ್ಟಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತೇವೆ ಎಂದು ಚಂದ್ರಕಾಂತ ಮಾರನಬಸರಿ, ಶರಣಪ್ಪ ಬಿಜಾಪುರ, ಶರಣಪ್ಪ ಹಲಗಿ, ಸಂಗನಬಸಪ್ಪ ಹಾದಿಮನಿ, ಭರತಕುಮಾರ ಹಾದಿಮನಿ ಮಾಹಿತಿ ನೀಡಿದರು.
: ಪಾಲಕಿಗೆ ಶಾಸ್ತ್ರೋಕ್ತ ವಿಶೇಷ ಪೂಜೆ
ಮಾರನಬಸರಿಯಿಂದ ಜಕ್ಕಲಿ ಕಡೆಗೆ ತೆರಳುವ ರಸ್ತೆ ಬದಿಯ ಹಳ್ಳದ ಸಮೀಪವಿರುವ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಾಂಪ್ರದಾಯಿಕ ಕಂಬಳಿ ಹಾಸಿ, ಅದರ ಮೇಲೆ ಸುಂದರವಾಗಿ ಅಲಂಕರಿಸಿದ ಪಾಲಕಿಯನ್ನು ಪ್ರತಿಷ್ಠಾಪಿಸಲಾಯಿತು. ಪಾಲಕಿಯಲ್ಲಿ ದೇವರ ಮೂರ್ತಿಯನ್ನಿಟ್ಟು ಎಲೆ-ಅಡಿಕೆ, ತೆಂಗಿನಕಾಯಿ ಹಾಗೂ ಧೂಪ-ದೀಪಗಳಿಂದ ಆರಾಧಿಸಲಾಯಿತು. ಪಾಲಕಿಯ ಮುಂಭಾಗದಲ್ಲಿ ಎರಡು ಒಡ್ಡಲಗಿಗಳನ್ನು (ದೊಡ್ಡ ಬುಟ್ಟಿ) ಇಟ್ಟು ಅದರಲ್ಲಿ ಜೋಳದ ಸಂಗಟಿ, ಅನ್ನ ಹಾಗೂ ನೈವೇದ್ಯ ಸಮರ್ಪಿಸಲಾಯಿತು. ಶಾಸ್ತ್ರೋಕ್ತವಾಗಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಿದ ಬಳಿಕ ಸಾಮೂಹಿಕ ಪ್ರಾರ್ಥನೆ, ಪ್ರಸಾದ ವಿನಿಯೋಗ ಜರುಗಿತು ಎಂದು ಪೂಜಾರಿಗಳಾದ ಹನಮಂತಪ್ಪ ಪೂಜಾರ, ಸತ್ಯಪ್ಪ ಪೂಜಾರ ಹಾಗೂ ಮುತ್ತಪ್ಪ ಪೂಜಾರ ತಿಳಿಸಿದರು.
: ಕೋಮು ಸೌಹಾರ್ದತೆಗೆ ಸಾಕ್ಷಿಯಾಗುವ ಉತ್ಸವ
ಈ ವಿಶೇಷ ಪೂಜೆ, ಸಂಗಟಿ ದಾಸೋಹ ಹಾಗೂ ಪಾಲಕಿ ಉತ್ಸವದಲ್ಲಿ ಹಿಂದೂ ಬಾಂಧವರೊಂದಿಗೆ ಮುಸ್ಲಿಂ ಸಮುದಾಯದವರೂ ಅಪಾರ ಸಂಖ್ಯೆಯಲ್ಲಿ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡು ಸೇವೆ ಸಲ್ಲಿಸಿದರು. ಜಾತಿ-ಮತದ ಭೇದ ಮರೆತು ಎಲ್ಲರೂ ಒಟ್ಟಾಗಿ ಸಂಭ್ರಮಿಸುವ ಮೂಲಕ ಮಾರನಬಸರಿ ಗ್ರಾಮವು ಭಾವೈಕ್ಯತೆ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಯಿತು.
: ಪೂರ್ವಜರ ಕಾಲದಿಂದಲೂ ಈ ಮೂರ್ತಿಗೆ ಶ್ರಾವಣ ಮಾಸದಲ್ಲಿ ನಡೆಯುವ ವಿಶೇಷ ಆಚರಣೆ ರೈತರ ಕಾಯಕದ ಬೆವರಿಗೆ ಭಕ್ತಿಯ ಸಂಗಟಿ ಪ್ರಸಾದವೇ ನೈವೇದ್ಯವಾಗಿರುತ್ತದೆ ಜಾತಿ-ಮತಗಳ ಬೇಲಿ ಮೀರಿ ನಾವೆಲ್ಲರು ಒಂದಾಗಿ ಊರಿಗೆ ಸಮೃದ್ಧಿಗೆ ಪ್ರಾರ್ಥಿಸುತ್ತೇವೆ
--ಶರಣಪ್ಪ ಕುರಿ, ಗ್ರಾಮದ ಹಿರಿಯರು
ಸಮೀಪದ ಮಾರನಬಸರಿ ಗ್ರಾಮದ ಐತಿಹಾಸಿಕ ಗಡ್ಡಿ ಮಾರುತೇಶ್ವರ ದೇವಸ್ಥಾನದ ವಾರ್ಷಿಕ ಪಾಲಕಿ ಉತ್ಸವವು ಶ್ರಾವಣ ಮಾಸದ ಮೂರನೇ ಶನಿವಾರದಂದು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮ-ಸಡಗರಗಳಿಂದ ಜರುಗಿತು
ದೇವಸ್ಥಾನದಲ್ಲಿ ಸಾಂಪ್ರದಾಯಿಕ ಕಂಬಳಿ ಹಾಸಿ, ಅದರ ಮೇಲೆ ಅಲಂಕರಿಸಿದ ಪಾಲಕಿಯನ್ನು ಪ್ರತಿಷ್ಠಾಪಿಸಿರುವುದು
: ಪಾಲಕಿಯ ಮುಂಭಾಗದಲ್ಲಿ ಎರಡು ಒಡ್ಡಲಗಿಗಳನ್ನು (ದೊಡ್ಡ ಬುಟ್ಟಿ) ಇಟ್ಟು ಅದರಲ್ಲಿ ಜೋಳದ ಸಂಗಟಿ, ಅನ್ನ ಹಾಗೂ ನೈವೇದ್ಯ ಸಮರ್ಪಿಸಿರುವುದು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

