ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದ “ಅಮೃತ ಹಸ್ತದ ಮಣ್ಣಿನ ಗಣೇಶ” ಶಿಬಿರಕ್ಕೆ ಉತ್ತಮ ಸ್ಪಂದನೆ
ಮಣ್ಣಿನ ಗಣೇಶ ತಯಾರಿಕೆ ವೀಕ್ಷಿಸಿದ ಶಾಲಾ ಮಕ್ಕಳು
ದೃಶ್ಯಬಿಂಬ ಕಲಾ ಪ್ರತಿಷ್ಠಾನ ಹಾಗೂ ಬಸವ ಹಸಿರು ಬಳಗದ “ಅಮೃತ ಹಸ್ತದ ಮಣ್ಣಿನ ಗಣೇಶ” ಶಿಬಿರಕ್ಕೆ ಉತ್ತಮ ಸ್ಪಂದನೆ
ದೇವರಹಿಪ್ಪರಗಿ: ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಜಾಗೃತಿ ಮೂಡಿಸುವ ಹಾಗೂ ಮಣ್ಣಿನ ಸಾಂಪ್ರದಾಯಿಕ ಮೂರ್ತಿಕಲೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ), ವಿಜಯಪುರ ಹಾಗೂ ಬಸವ ಹಸಿರು ಬಳಗ (ರಿ), ದೇವರಹಿಪ್ಪರಗಿ ವತಿಯಿಂದ ಯಾಳವಾರದಲ್ಲಿ ಆಯೋಜಿಸಿರುವ “ಅಮೃತ ಹಸ್ತದ ಮಣ್ಣಿನ ಗಣೇಶ” 8 ದಿನಗಳ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕಾ ಕಲಾ ಶಿಬಿರವು ಯಶಸ್ವಿಯಾಗಿ ಮುಂದುವರಿದಿದೆ.
ಶಿಬಿರದ ಆರನೇ ದಿನವಾದ ಇಂದು ಯಾಳವಾರದ ಅಮ್ಮ ರೆಸಿಡೆನ್ಸಿಯಲ್ ಆಂಗ್ಲ ಮಾಧ್ಯಮ ಶಾಲೆ, ಸಂಸ್ಕಾರದಾಮ ಪ್ರಾಥಮಿಕ ಶಾಲೆ, ಎಂ ಪಿ ಎಸ್, ಕೆಜಿ ಎಚ್ ಪಿ ಎಸ್ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲೆ ಬಡಾವಣೆ ಶಾಲೆಗಳ ವಿದ್ಯಾರ್ಥಿಗಳು ಶಿಬಿರಕ್ಕೆ ಭೇಟಿ ನೀಡಿ, ಕಲಾವಿದರು ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವ ಪ್ರಕ್ರಿಯೆಯನ್ನು ಆಸಕ್ತಿಯಿಂದ ವೀಕ್ಷಿಸಿದರು. ಮಣ್ಣನ್ನು ಸಿದ್ಧಪಡಿಸುವುದರಿಂದ ಹಿಡಿದು ಗಣೇಶ ಮೂರ್ತಿಯ ಆಕಾರ, ಅಂಗಾಂಗಗಳ ರಚನೆ, ಮುಖಭಾವ, ಸೂಕ್ಷ್ಮ ಕೆತ್ತನೆ ಹಾಗೂ ಅಲಂಕಾರದವರೆಗೆ ನಡೆಯುವ ಪ್ರತಿಯೊಂದು ಹಂತವನ್ನು ವಿದ್ಯಾರ್ಥಿಗಳು ಕುತೂಹಲದಿಂದ ಗಮನಿಸಿದರು. ಕಲಾವಿದರು ಮಕ್ಕಳಿಗೆ ಮಣ್ಣಿನ ಮೂರ್ತಿಕಲೆಯ ವಿಶೇಷತೆ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವದ ಮಹತ್ವವನ್ನು ವಿವರಿಸಿದರು.
ಶಿಬಿರದಲ್ಲಿ ಶರಣಪ್ಪ ನಾಯಕ, ಯೇಸುರಾಜ್, ಸತೀಶ್ ಕೇಮಶೆಟ್ಟಿ ಹಾಗೂ ಉಮೇಶ್ ಭೋಳ ಸೇರಿದಂತೆ ಕಲಾವಿದರು ಪ್ರಾಯೋಗಿಕ ತರಬೇತಿ ನೀಡುತ್ತಿದ್ದಾರೆ. ಮಣ್ಣಿನ ಸಿದ್ಧತೆ, ಮೂರ್ತಿಯ ಮೂಲ ರಚನೆ, ಪ್ರಮಾಣಬದ್ಧ ಅಂಗಾಂಗ ವಿನ್ಯಾಸ, ಮುಖಭಾವ ಮತ್ತು ಸೂಕ್ಷ್ಮ ಕೆತ್ತನೆ ಸೇರಿದಂತೆ ವಿವಿಧ ಹಂತಗಳಲ್ಲಿ ತರಬೇತಿ ನಡೆಯುತ್ತಿದೆ. ಬಸವ ಹಸಿರು ಬಳಗದ ಅಧ್ಯಕ್ಷ ಭೀಮನಗೌಡ ಗುಣಕನಾಳ,ಉಪಾಧ್ಯಕ್ಷರಾದ ಬಸವರಾಜ ಕಲಬುರ್ಗಿ ಹಾಗೂ ಕಾರ್ಯದರ್ಶಿ ರವಿಕುಮಾರ ಬಿರಾದಾರ ಸೇರಿದಂತೆ ಶಿಬಿರಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಶಿಬಿರದಲ್ಲಿ ತಯಾರಾಗುವ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ವಿಜಯಪುರ ಜಿಲ್ಲೆಯ 120 ಹಳ್ಳಿಗಳಿಗೆ ಉಚಿತವಾಗಿ ವಿತರಿಸುವ ಉದ್ದೇಶ ಹೊಂದಲಾಗಿದೆ. ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿಯೂ ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ.
ಮಕ್ಕಳು ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯನ್ನು ನೇರವಾಗಿ ವೀಕ್ಷಿಸುವ ಮೂಲಕ “ಮಣ್ಣಿನ ಕಲೆ ಉಳಿಸೋಣ – ಪರಿಸರ ಕಾಪಾಡೋಣ – ಭಕ್ತಿಯೊಂದಿಗೆ ಗಣೇಶೋತ್ಸವ ಆಚರಿಸೋಣ” ಎಂಬ ಸಂದೇಶವನ್ನು ಅರಿತುಕೊಂಡರು. ಶಿಬಿರವು ಕಲೆ, ಭಕ್ತಿ, ಪರಿಸರ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗೆ ಸಾಂಪ್ರದಾಯಿಕ ಕಲೆಯ ಪರಿಚಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ವಿಶಿಷ್ಟ ಪ್ರಯತ್ನವಾಗಿ ಗಮನ ಸೆಳೆಯುತ್ತಿದೆ.

