ಪರಿಸರ ಸ್ನೇಹಿ ಗಣೇಶ ತಯಾರಿಕೆಯಲ್ಲಿ ಕಲಾವಿದರ ಕಾರ್ಯ ಪ್ರಗತಿ
ಪರಿಸರ ಸ್ನೇಹಿ ಗಣೇಶ ತಯಾರಿಕೆಯಲ್ಲಿ ಕಲಾವಿದರ ಕಾರ್ಯ ಪ್ರಗತಿ
ಯಾಳವಾರದಲ್ಲಿ “ಅಮೃತ ಹಸ್ತದ ಮಣ್ಣಿನ ಗಣೇಶ” ಶಿಬಿರದ 5ನೇ ದಿನ
ದೇವರಹಿಪ್ಪರಗಿ: ಪರಿಸರ ಸ್ನೇಹಿ ಗಣೇಶೋತ್ಸವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ದೃಶ್ಯಬಿಂಬ ಕಲಾ ಪ್ರತಿಷ್ಠಾನ (ರಿ), ವಿಜಯಪುರ ಹಾಗೂ ಬಸವ ಹಸಿರು ಬಳಗ (ರಿ), ದೇವರಹಿಪ್ಪರಗಿ ವತಿಯಿಂದ ಆಯೋಜಿಸಿರುವ “ಅಮೃತ ಹಸ್ತದ ಮಣ್ಣಿನ ಗಣೇಶ” 8 ದಿನಗಳ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ತಯಾರಿಕಾ ಕಲಾ ಶಿಬಿರವು ಐದನೇ ದಿನಕ್ಕೆ ಕಾಲಿಟ್ಟಿದೆ.
ಯಾಳವಾರದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಕಲಾವಿದರು ಹಾಗೂ ಶಿಬಿರಾರ್ಥಿಗಳು ಉತ್ಸಾಹದಿಂದ ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮಣ್ಣಿನ ಸಿದ್ಧತೆ, ಮೂರ್ತಿಯ ಮೂಲ ರಚನೆ, ಅಂಗಾಂಗಗಳ ಪ್ರಮಾಣ, ಮುಖಭಾವ, ಸೂಕ್ಷ್ಮ ಕೆತ್ತನೆ ಹಾಗೂ ಅಲಂಕಾರ ಸೇರಿದಂತೆ ವಿವಿಧ ಹಂತಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ.
ಶಿಬಿರದಲ್ಲಿ ಕಲಾವಿದರಾದ ಶರಣಪ್ಪ ನಾಯಕ, ಯೇಸುರಾಜ್, ಸತೀಶ್ ಕೇಮಶೆಟ್ಟಿ ಹಾಗೂ ಉಮೇಶ್ ಭೋಳ ಅವರು ತರಬೇತಿ ನೀಡುತ್ತಿದ್ದಾರೆ. ಬಸವ ಹಸಿರು ಬಳಗದ ಅಧ್ಯಕ್ಷರಾದ ಭೀಮನಗೌಡ ಗುಣಕನಾಳ ಹಾಗೂ ಕಾರ್ಯದರ್ಶಿ ರವಿಕುಮಾರ ಬಿರಾದಾರ ಸೇರಿದಂತೆ ಶಿಬಿರಾರ್ಥಿಗಳು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಶಿಬಿರದಲ್ಲಿ ತಯಾರಾಗುವ ಪರಿಸರ ಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ವಿಜಯಪುರ ಜಿಲ್ಲೆಯ 120 ಹಳ್ಳಿಗಳಿಗೆ ಉಚಿತವಾಗಿ ವಿತರಿಸುವ ಉದ್ದೇಶ ಹೊಂದಲಾಗಿದೆ. ಮಣ್ಣಿನ ಸಾಂಪ್ರದಾಯಿಕ ಕಲೆಯನ್ನು ಉಳಿಸುವುದರ ಜೊತೆಗೆ ಪರಿಸರ ಸಂರಕ್ಷಣೆಯ ಸಂದೇಶವನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ಮಹತ್ವದ ಕಾರ್ಯವಾಗಿ ಶಿಬಿರ ರೂಪುಗೊಂಡಿದೆ.
“ಮಣ್ಣಿನ ಕಲೆ ಉಳಿಸೋಣ – ಪರಿಸರ ಕಾಪಾಡೋಣ – ಭಕ್ತಿಯೊಂದಿಗೆ ಗಣೇಶೋತ್ಸವ ಆಚರಿಸೋಣ” ಎಂಬ ಆಶಯದೊಂದಿಗೆ ಶಿಬಿರ ಮುಂದುವರಿದಿದೆ.

