ಕೆಟ್ಟವರ ಸಂಘದಿಂದ ಕಷ್ಟ ಕಾಯಂ; ವಿಚಾರಗಳು ಆಚರಣೆಯಲ್ಲಿರಲಿ – ಡಿಗ್ಗಿಯಲ್ಲಿ ಶ್ರೀಗಳಿಂದ ಉಪದೇಶ

ಕೆಟ್ಟವರ ಸಂಘದಿಂದ ಕಷ್ಟ ಕಾಯಂ; ವಿಚಾರಗಳು ಆಚರಣೆಯಲ್ಲಿರಲಿ – ಡಿಗ್ಗಿಯಲ್ಲಿ ಶ್ರೀಗಳಿಂದ ಉಪದೇಶ

ಕೆಟ್ಟವರ ಸಂಘದಿಂದ ಕಷ್ಟ ಕಾಯಂ; ವಿಚಾರಗಳು ಆಚರಣೆಯಲ್ಲಿರಲಿ – ಡಿಗ್ಗಿಯಲ್ಲಿ ಶ್ರೀಗಳಿಂದ ಉಪದೇಶ

ಕಮಲನಗರ: ತಾಲೂಕಿನ ಐತಿಹಾಸಿಕ ಡಿಗ್ಗಿ ಗ್ರಾಮದ ಶ್ರೀ ಮಡಿವಾಳೇಶ್ವರ ದೇವಾಲಯದಲ್ಲಿ ‘ಶ್ರೀ ಮಡಿವಾಳೇಶ್ವರ ಜಾತ್ರಾ ಮಹೋತ್ಸವ-2026’ರ ಅಂಗವಾಗಿ ಆಯೋಜಿಸಲಾಗಿದ್ದ ಮೂರು ದಿನಗಳ ವಿಶೇಷ ಪ್ರವಚನ ಕಾರ್ಯಕ್ರಮದ ಮೂರನೇ ದಿನದ ಪ್ರವಚನ ಹಾಗೂ ಸಮಾರೋಪ ಸಮಾರಂಭವು ಶುಕ್ರವಾರ ಸಂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಶಿವಣಿ ಹಲಬರ್ಗಾ ಹೈದರಾಬಾದ್ ಅಲಿಯಂಬರನ್ ಪೂಜ್ಯ ಡಾ. ಹಾವಗಿ ಲಿಂಗೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಪ್ರವಚನ ನೀಡಿ ಆಶೀರ್ವಚನ ನೀಡಿದರು.

ಸನ್ಮಾರ್ಗದ ಸತ್ಸಂಗದ ಮಹತ್ವ:

ಮೂರನೇ ದಿನದ ಉಪದೇಶ ನೀಡಿದ ಶ್ರೀಗಳು, "ಮಾನವ ಜೀವನದಲ್ಲಿ ಸಜ್ಜನರ ಮತ್ತು ಒಳ್ಳೆಯವರ ಸಂಘ ಮಾಡುವುದು ಅತ್ಯಂತ ಅಗತ್ಯ. ನಾವು ಕೆಟ್ಟವರ ಸಂಘ ಮಾಡಿದರೆ ಅದರ ದುಷ್ಪರಿಣಾಮವನ್ನು ನಾವೇ ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದರು. ಇದನ್ನು ಕಾಗೆ ಮತ್ತು ಕೋಗಿಲೆಯ ಗೆಳತನದ ಕಥೆಯ ಮೂಲಕ ಪ್ರಸ್ತಾಪಿಸಿ, ದುಷ್ಟರ ಸಾಂಗತ್ಯದಿಂದ ಕೋಗಿಲೆ ಹೇಗೆ ಶಿಕ್ಷೆ ಅನುಭವಿಸಿತು ಎಂಬುದನ್ನು ಸ್ವಾರಸ್ಯಕರವಾಗಿ ವಿವರಿಸಿದರು.

"ನಮ್ಮ ಆಲೋಚನೆ ಮತ್ತು ವಿಚಾರಗಳು ಮೊದಲು ನಮ್ಮ ಆಚರಣೆಯಲ್ಲಿ ಇರಬೇಕು, ತದನಂತರ ಅದನ್ನು ಇತರರಿಗೆ ತಿಳಿಸಬೇಕು. ಮನಸ್ಸಿನಲ್ಲಿ ಪಾಪದ ಭಾವನೆಗಳನ್ನಿಟ್ಟುಕೊಂಡು ಮಾಡುವ ದೇವಸ್ಥಾನದ ಪೂಜೆ ಹಾಗೂ ಭಕ್ತಿಗೆ ಯಾವುದೇ ಅರ್ಥವಿಲ್ಲ" ಎಂದು ಮಾರ್ಮಿಕವಾಗಿ ತಿಳಿಸಿದರು.

ಶ್ರೀಗಳಿಗೆ ಗೌರವ ಸಮರ್ಪಣೆ:

ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಮಡಿವಾಳೇಶ್ವರ ದೇವಾಲಯ ಟ್ರಸ್ಟ್ ಕಮಿಟಿ ಹಾಗೂ ಗ್ರಾಮಸ್ಥರ ವತಿಯಿಂದ ಶ್ರೀಗಳಿಗೆ ಶಾಲ ಹೊದಿಸಿ, ಹಾರ ಹಾಕಿ ಅತ್ಯಂತ ವಿಜೃಂಭಣೆಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಗಳು, "ಡಿಗ್ಗಿ ಗ್ರಾಮವು ನನಗೆ ಸ್ವಂತ ತವರು ಮನೆಯಿದ್ದಂತೆ. ಇಲ್ಲಿಗೆ ಬಂದಾಗಲೆಲ್ಲ ಅಪಾರ ಪ್ರೀತಿ, ಆದರ ಮತ್ತು ಗೌರವ ಸಿಗುತ್ತದೆ" ಎಂದು ಊರಿನ ಜನರ ಭಕ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮಸ್ಥರಿಗೆ ಆಶೀರ್ವದಿಸಿದರು.

ಈ ಕಾರ್ಯಕ್ರಮದಲ್ಲಿ ದೇವಾಲಯ ಟ್ರಸ್ಟ್‌ನ ಪದಾಧಿಕಾರಿಗಳು, ಪ್ರಮುಖ ಮುಖಂಡರು, ಭಜನೆ ಮಂಡಳಿಯವರು ಹಾಗೂ ಡಿಗ್ಗಿ ಸೇರಿದಂತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳ ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸೇವಿಸಿದರು.