ದಾರಿದೀಪ ಅಳವಡಿಕೆಗೆ ಅಧಿಕಾರಿಗಳ ತ್ವರಿತ ಕ್ರಮ: ವಳಕೇರಿಗೆ ಗ್ರಾಮಸ್ಥರಿಂದ ಸನ್ಮಾನ
ದಾರಿದೀಪ ಅಳವಡಿಕೆಗೆ ಅಧಿಕಾರಿಗಳ ತ್ವರಿತ ಕ್ರಮ: ವಳಕೇರಿಗೆ ಗ್ರಾಮಸ್ಥರಿಂದ ಸನ್ಮಾನ
ಕಲಬುರಗಿ: ರಾಮಮಂದಿರ ವೃತ್ತದಿಂದ ಕೊಟನೂರ ಡಿ.ವರೆಗೆ ರಾಜ್ಯ ಹೆದ್ದಾರಿಯ 11 ವಿದ್ಯುತ್ ಕಂಬಗಳಿಗೆ ದಾರಿದೀಪ ಅಳವಡಿಸುವಂತೆ ಸಮಾಜ ಸೇವಕ ಹಾಗೂ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪವನ್ ಕುಮಾರ್ ವಳಕೇರಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಿದ್ದ ಮನವಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ.
ಪವನ್ ಕುಮಾರ್ ವಳಕೇರಿ ಅವರ ಮನವಿಯನ್ನು ಪರಿಶೀಲಿಸಿದ ಅಧಿಕಾರಿಗಳು, ರಾಮಮಂದಿರ ವೃತ್ತದಿಂದ ಕೊಟನೂರ ಡಿ.ವರೆಗೆ ಇರುವ 11 ಕಂಬಗಳಿಗೆ ದೀಪಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ದಾರಿದೀಪಗಳ ಅಳವಡಿಕೆಯಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರು, ಪಾದಚಾರಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಅನುಕೂಲವಾಗಿದೆ.
ಈ ಕುರಿತು ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಸಹ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ, ದಾರಿದೀಪದ ಸಮಸ್ಯೆಯನ್ನು ಶೀಘ್ರ ಪರಿಹರಿಸುವಂತೆ ತಿಳಿಸಿದ್ದರು.
ಸಮಾಜ ಸೇವಕರಾದ ರವೀಂದ್ರ ವಿಭೂತಿ ಹಾಗೂ ಪವನ್ ಕುಮಾರ್ ವಳಕೇರಿ ಅವರ ಸಮಾಜಮುಖಿ ಕಾರ್ಯವನ್ನು ಪರಿಗಣಿಸಿದ ನಂದಿಕೂರ, ಖಣದಾಳ, ಸೀತನೂರ ಹಾಗೂ ನಾಗನಹಳ್ಳಿ ಗ್ರಾಮಗಳ ಜನರು ಅದೇ ರಸ್ತೆಯಲ್ಲಿ ಇಬ್ಬರಿಗೂ ಮಾಲಾರ್ಪಣೆ ಮಾಡಿ ಸನ್ಮಾನಿಸಿ ಗೌರವಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪವನ್ ಕುಮಾರ್ ವಳಕೇರಿ ಹಾಗೂ ರವೀಂದ್ರ ವಿಭೂತಿ ಅವರ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಗ್ರಾಮಸ್ಥರು ಆಶಿಸಿದರು.

