ಶಾಲಾ ಸಂಸತ್ತು ಸಂಘಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳ ಬೆಳವಣಿಗೆ: ಕೆ.ಪಿ. ಸಾಲಿಮಠ
ಶಾಲಾ ಸಂಸತ್ತು ಸಂಘಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳ ಬೆಳವಣಿಗೆ: ಕೆ.ಪಿ. ಸಾಲಿಮಠ
ನರೇಗಲ್: ಶಾಲಾ-ಕಾಲೇಜುಗಳಲ್ಲಿ ಸಂಸತ್ತು ಸಂಘಗಳು ಹಾಗೂ ವಿವಿಧ ಕ್ಲಬ್‌ಗಳನ್ನು ರಚಿಸುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳು ಬೆಳೆಯುವುದರ ಜೊತೆಗೆ ಪೌರತ್ವದ ಪ್ರಜ್ಞೆ ಮತ್ತು ಜೀವನ ಕೌಶಲ್ಯಗಳು ವೃದ್ಧಿಯಾಗುತ್ತವೆ ಎಂದು ಕೆ.ಪಿ. ಸಾಲಿಮಠ ಹೇಳಿದರು.
ಸ್ಥಳೀಯ ಕೆಎಸ್‌ಎಸ್ ಪ್ರೌಢಶಾಲೆ ಹಾಗೂ ಕೆಎಸ್‌ಎಸ್ ಪದವಿಪೂರ್ವ ವಿದ್ಯಾಲಯದಲ್ಲಿ 2026-27ನೇ ಸಾಲಿನ ಪಿಯುಸಿ ಪ್ರಥಮ ಹಾಗೂ 8ನೇ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ವಿವಿಧ ಕ್ಲಬ್‌ಗಳು, ಶಾಲಾ ಸಂಸತ್ತು, ಕ್ರೀಡೆ ಹಾಗೂ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಅವರ ವ್ಯಕ್ತಿತ್ವ ವಿಕಸನ, ನೆನಪಿನ ಶಕ್ತಿ ಮತ್ತು ಬುದ್ಧಿಶಕ್ತಿ ವೃದ್ಧಿಯಾಗುತ್ತದೆ. ಇಂತಹ ಚಟುವಟಿಕೆಗಳು ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸಿ, ಆತ್ಮವಿಶ್ವಾಸ ಬೆಳೆಸುತ್ತವೆ. ವಿದ್ಯಾರ್ಥಿಗಳು ಇವುಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನರೇಗಲ್ ಪೊಲೀಸ್ ಠಾಣೆಯ ಪಿಎಸ್‌ಐ ಐಶ್ವರ್ಯ ನಾಗರಾಳ ಮಾತನಾಡಿ, ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಅತ್ಯಂತ ಅವಶ್ಯಕ. ಶಿಸ್ತಿನಿಂದ ಜೀವನ ನಡೆಸಿದರೆ ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಧೂಮಪಾನ, ಮದ್ಯಪಾನ, ಗುಟ್ಕಾ ಸೇರಿದಂತೆ ಎಲ್ಲ ರೀತಿಯ ದುಶ್ಚಟಗಳಿಂದ ದೂರವಿರಬೇಕು. ಮೊಬೈಲ್ ಫೋನ್‌ನ್ನು ಉತ್ತಮ ವಿಷಯಗಳ ಕಲಿಕೆಗೆ ಮಾತ್ರ ಬಳಸಬೇಕು ಮತ್ತು ಅದರಲ್ಲಿ ಬರುವ ಕೆಟ್ಟ ವಿಷಯಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ಮತ್ತೋರ್ವ ಮುಖ್ಯ ಅತಿಥಿ ಉಮೇಶ್ ಸಂಗನಾಳಮಠ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ವಿದ್ಯಾರ್ಥಿಗಳು ಓದಿ, ಅದರಲ್ಲಿರುವ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಅರಿತು ಸರಿಯಾದ ರೀತಿಯಲ್ಲಿ ಪಾಲಿಸಬೇಕು ಎಂದರು. ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಡಾ. ಬಿ.ಎಫ್. ದಂಡಿನ್ ಅವರ ಮಾರ್ಗದರ್ಶನದಲ್ಲಿ ಉತ್ತರ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತಿವೆ. ವಿಜಯನಗರ ಬಿ.ಇಡಿ. ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ತಮಗೆ ಈ ಸಂಸ್ಥೆಯೊಂದಿಗಿನ ನಂಟು ಹೆಮ್ಮೆಯ ಸಂಗತಿ ಎಂದು ಹೇಳಿ, ಡಾ. ಬಿ.ಎಫ್. ದಂಡಿನ್ ದಂಪತಿಗಳಿಗೆ ನುಡಿನಮನ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಪಟ್ಟಣ ಪಂಚಾಯಿತಿ ಸದಸ್ಯ ಶಶಿಧರಗೌಡ ಸಂಕನಗೌಡ್ರು, ಸಮಾಜ ಸುಧಾರಕ ರಘುನಾಥ ಕೊಂಡಿ ಹಾಗೂ ಗವಿಸಿದ್ದೇಶ್ವರ ಶಾಸ್ತ್ರಿಗಳು ಭಾಗವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರವೀಂದ್ರನಾಥ ದಂಡಿನ್ ಮಾತನಾಡಿ, ನಮ್ಮ ತಂದೆಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯುತ್ತಿದ್ದೇವೆ. ಉತ್ತರ ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದಿರುವ ಈ ಶಿಕ್ಷಣ ಸಂಸ್ಥೆಯನ್ನು ಬಡ ಮಕ್ಕಳಿಗೆ ಆಶ್ರಯವಾಗಲಿ ಎಂಬ ಉದ್ದೇಶದಿಂದ ನಿರ್ಮಿಸಲಾಗಿದೆ. ಸಂಸ್ಥೆಯ ಘನತೆಯನ್ನು ಉಳಿಸಿಕೊಂಡು ಹೋಗಲು ನಾವೆಲ್ಲರೂ ಸಿದ್ಧರಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ಕಲ್ಮೇಶ್ ತೊಂಡಿಹಾಳ, ಶ್ರೀಮತಿ ಬಿಲ್ ಹದ್ದನವರ, ಬಿ.ಎಸ್. ದೇಸಾಯಿ ಪಾಟೀಲ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ಎನ್. ಹಿರೇಮಠ, ಬಿ.ಪಿ. ಉಪ್ಪಿನ್ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರಾಚಾರ್ಯ ಶಿವಾನಂದ ಗೋಗೇರಿ ಅವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಟಿ. ಅಕ್ಕಸಾಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ,
ಕಲ್ಯಾಣ ಕಹಳೆ, ಗದಗ

