ನೇಕಾರರ ಪರಂಪರೆ ಉಳಿಸುವುದು ಎಲ್ಲರ ಹೊಣೆ: ಕುಸಮಾ ನಾಗರಾಜ್

ನೇಕಾರರ ಪರಂಪರೆ ಉಳಿಸುವುದು ಎಲ್ಲರ ಹೊಣೆ: ಕುಸಮಾ ನಾಗರಾಜ್

ನೇಕಾರರ ಅಭಿವೃದ್ಧಿಗೆ ರಾಷ್ಟ್ರೀಯ ಕೈಮಗ್ಗ ನೇಕಾರರ ಆಯೋಗ ರಚಿಸಬೇಕು

 ದಾಸಿಮಯ್ಯನವರ ಹೆಸರಿನಲ್ಲಿ ರಾಷ್ಟ್ರಮಟ್ಟದ ಐದು ಪ್ರಶಸ್ತಿಗಳನ್ನು ನೀಡಲು ಆಗ್ರಹ

ಕಲಬುರಗಿ, ಆ. 8: ಎಸ್ ವಿ ಪಿ ವೃತ್ತದ ಇಂಟರ್ನ್ಯಾಷನಲ್ ಕಂಪ್ಲೆಕ್ಸ್ ನ, ಸಪ್ತ ನೇಕಾರ ಸೇವಾ ಸಂಘದ ಕಚೇರಿಯಲ್ಲಿ ಆ.7ರಂದು ಸಂಜೆ 12ನೇ ರಾಷ್ಟ್ರೀಯ ನೇಕಾರ ದಿನಾಚರಣೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

ಜಿಲ್ಲಾ ಪದ್ಮಶಾಲಿ ಸಮಾಜದ ಅಧ್ಯಕ್ಷರಾದ ಶ್ರೀ ಕುಸಮಾ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ನೇಕಾರ ಸಮುದಾಯವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಸತತವಾಗಿ ರಾಷ್ಟ್ರೀಯ ನೇಕಾರ ದಿನಾಚರಣೆಯನ್ನು ಆಚರಿಸುತ್ತಿರುವ ನೇಕಾರ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯವಾಗಿದೆ. ನೇಕಾರರ ಪರಂಪರೆ, ಕಲೆ ಹಾಗೂ ಕಸುಬನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಖ್ಯಾತ ಕಲಾವಿದ ರೆಹಮಾನ್ ಪಟೇಲ್ ಮಾತನಾಡಿ, ಜವಳಿ ಇಲಾಖೆಯ ಮೂಲಕ ತಮ್ಮ ಕಲಾ ಪ್ರತಿಭೆಗೆ ಅವಕಾಶ ದೊರೆತು ಮುನ್ನಡೆಯಲು ಸಾಧ್ಯವಾಯಿತು. ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿದ್ದ ಕಲಾಕೃತಿ ಪ್ರದರ್ಶನಕ್ಕೆ ದೇಶದ ಕೇವಲ 12 ಕಲಾವಿದರಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದು, ನಮ್ಮ ಭಾಗದ ಕಲೆ ಮತ್ತು ಕಲಾವಿದರಿಗೆ ರಾಷ್ಟ್ರಮಟ್ಟದಲ್ಲಿ ಗುರುತಿಸುವಿಕೆ ದೊರಕುವಂತೆ ಮಾಡಲು ಪ್ರಯತ್ನಿಸಿರುವುದು ಹೆಮ್ಮೆಯ ಸಂಗತಿ ಎಂದರು. ನೇಕಾರಿಕೆ ಕೇವಲ ಉದ್ಯೋಗವಲ್ಲ; ಅದು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು.

 ಅತಿಥಿ ಶ್ರೀ ಆಯಾಜ್ ಪಟೇಲ್ ಮಾತನಾಡಿ, ಒಂದು ಕಾಲದಲ್ಲಿ ಕಲಬುರಗಿ ಜಿಲ್ಲೆ ದೊಡ್ಡ ಪ್ರಮಾಣದ ಬಟ್ಟೆ ಕಾರ್ಖಾನೆಗಳನ್ನು ಹೊಂದಿದ್ದ ಪ್ರದೇಶವಾಗಿತ್ತು. ಜಾತಿ-ಧರ್ಮದ ಭೇದವಿಲ್ಲದೆ ಕೈಮಗ್ಗ ಪರಂಪರೆಯನ್ನು ಉಳಿಸಿಕೊಂಡು ಬಂದ ಮೊಮಿನ್‌ಪುರ ಸೇರಿದಂತೆ ಹಲವು ಪ್ರದೇಶಗಳು ನೇಕಾರಿಕೆಯ ತವರೂರಾಗಿದ್ದವು. ಇದೀಗ ಕೇಂದ್ರ ಸರ್ಕಾರದ ಪಿಎಂ ಮಿತ್ರ (PM MITRA) ಯೋಜನೆಯಡಿ ಕಲಬುರಗಿ ನಗರದಲ್ಲಿ ಜವಳಿ ಕ್ಷೇತ್ರಕ್ಕೆ ಉತ್ತೇಜನ ನೀಡುವ ಪ್ರಯತ್ನಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ನೇಕಾರರಿಗೆ ಉದ್ಯೋಗ, ಮಾರುಕಟ್ಟೆ ಮತ್ತು ಆರ್ಥಿಕ ಅವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದರು.

ಖ್ಯಾತ ಉದ್ಯಮಿ ಶ್ರೀ ಪ್ರಕಾಶ ಯಂಕಂಚಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,

ಸಂಘದ ಅಧ್ಯಕ್ಷರಾದ ಶ್ರೀ ಶಿವಲಿಂಗಪ್ಪ ಅಷ್ಟಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ನೇಕಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಕೈಮಗ್ಗ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ, ಕಚ್ಚಾ ವಸ್ತು, ಆರ್ಥಿಕ ನೆರವು, ತಾಂತ್ರಿಕ ತರಬೇತಿ ಹಾಗೂ ಸಾಮಾಜಿಕ ಭದ್ರತೆ ದೊರೆಯುವಂತೆ ಸರ್ಕಾರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ನೇಕಾರ ದಿನಾಚರಣೆಯ ಅಂಗವಾಗಿ ಎರಡು ಪ್ರಮುಖ ನಿರ್ಣಯ

1. ನೇಕಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಲು ರಾಷ್ಟ್ರೀಯ ಕೈಮಗ್ಗ ನೇಕಾರರ ಆಯೋಗವನ್ನು ರಚಿಸಬೇಕು.

2. ಪ್ರತಿ ವರ್ಷ ರಾಷ್ಟ್ರೀಯ ನೇಕಾರ ದಿನದಂದು ನೇಕಾರರ ವಿಶ್ವಮಾನ್ಯ ಶರಣ ಶ್ರೀ ದಾಸಿಮಯ್ಯನವರ ಹೆಸರಿನಲ್ಲಿ ರಾಷ್ಟ್ರಮಟ್ಟದಲ್ಲಿ ಐದು ಪ್ರಶಸ್ತಿಗಳನ್ನು ನೀಡಿ, ನೇಕಾರಿಕೆ ಹಾಗೂ ಕೈಮಗ್ಗ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದವರನ್ನು ಗೌರವಿಸಬೇಕು.

ನೇಕಾರ ಸಮುದಾಯದ ಕಲೆ, ಕೌಶಲ್ಯ ಮತ್ತು ಪರಂಪರೆಯನ್ನು ಉಳಿಸುವುದರ ಜೊತೆಗೆ ಯುವ ಪೀಳಿಗೆಯನ್ನು ಈ ವೃತ್ತಿಯತ್ತ ಆಕರ್ಷಿಸಲು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಕೈಮಗ್ಗ ಉತ್ಪನ್ನಗಳಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆ ಒದಗಿಸುವುದು, ನೇಕಾರರ ಮಕ್ಕಳಿಗೆ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಪ್ರೋತ್ಸಾಹ ನೀಡುವುದು, ಆಧುನಿಕ ತಂತ್ರಜ್ಞಾನವನ್ನು ಪರಿಚಯಿಸುವುದು ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಇಂದಿನ ಅಗತ್ಯವಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ನ್ಯಾಯವಾದಿ ಜೆ.ಎಸ್. ವಿನೋದಕುಮಾರ ಅವರು ಕಾರ್ಯಕ್ರಮ ನಿರೂಪಿಸಿ, ಕೊನೆಯಲ್ಲಿ ವಂದಿಸಿದರು.

ನೇಕಾರರ ವಿಶ್ವಮಾನ್ಯ ಶರಣ, ಕನ್ನಡದ ಆದ್ಯ ವಚನಕಾರ ಹಾಗೂ ಶರಣ ಧರ್ಮದ ಸಂಸ್ಥಾಪಕರಾದ ಶ್ರೀ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ ಬಲಪುರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಹಟಗಾರ ಸಮಾಜದ ಮಾಜಿ ಅಧ್ಯಕ್ಷ ನಿಂಬೆಣ್ಣಿ ಚನ್ನಮಲ್ಲಪ್ಪ, ರಾಜಶೇಖರ ಘಸನೆ, ವೀರಭಸವಂತಪ್ಪ ಬುಳ್ಳ, ಡಾ. ಬಸವರಾಜ ಚನ್ನಾ, ಜಿಲ್ಲಾ ಕುರಹಿನಶೆಟ್ಟಿ ಸಮಾಜದ ಅಧ್ಯಕ್ಷ ಬಸವರಾಜ ಕರದಳ್ಳಿ, ಮಲ್ಲಿಕಾರ್ಜುನ ಶ್ಯಾವಿ, ಮಲ್ಲಿನಾಥ ಕುಂಟೋಜಿ, ನಗರ ದೇವಾಂಗ ಸಮಾಜದ ಅಧ್ಯಕ್ಷ ಸಂತೋಷಕುಮಾರ ಗುರುಮೀಟ್ ಕಲ್ಲ, ವಿವಿಧ ಸಮಾಜಗಳ ಸೇವಕರಾದ ಸಂಗಪ್ಪ ಭೀಮಳ್ಳಿ, ಬಿ.ಎಂ. ರಾವೂರ್, ರೇವಣಸಿದ್ಧಪ್ಪ ಹೊಟ್ಟಿ ಸೇರಿದಂತೆ ನೇಕಾರ ಸಮುದಾಯದ ಮುಖಂಡರು, ವಿವಿಧ ಸಮಾಜಗಳ ಗಣ್ಯರು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.