ನದಿಯಂತೆ ಹರಿದ ದೀಪಗಳ ಬೆಳಕು / ಭಕ್ತಿ ಸಾಗರದಲ್ಲಿ ತೇಲಿದ ನಾಲವಾರ ತನಾರತಿ ಹರಕೆ ಸಮರ್ಪಿಸಿದ ಸಹಸ್ರಾರು ಭಕ್ತರು
ನದಿಯಂತೆ ಹರಿದ ದೀಪಗಳ ಬೆಳಕು / ಭಕ್ತಿ ಸಾಗರದಲ್ಲಿ ತೇಲಿದ ನಾಲವಾರ
ತನಾರತಿ ಹರಕೆ ಸಮರ್ಪಿಸಿದ ಸಹಸ್ರಾರು ಭಕ್ತರು
ಕಲಬುರಗಿ: ಕತ್ತಲನ್ನು ಸೀಳಿ ಬೆಳಕಿನ ನದಿಯೇ ಹರಿಯುತ್ತಿರುವಂತೆ ಭಾಸವಾಯಿತು. ಸಾವಿರಾರು ಭಕ್ತರು ತಲೆಯ ಮೇಲೆ ಗೋದಿಹಿಟ್ಟಿನ ವಿಶೇಷ ಹಣತೆಗಳನ್ನು ಹೊತ್ತು ಮಠದ ಸುತ್ತ ಪ್ರದಕ್ಷಿಣೆ ಹಾಕಿದಾಗ ಆ ದೃಶ್ಯ ನೋಡಿದ ಪ್ರತಿಯೊಬ್ಬರ ಮನಸ್ಸು ಭಕ್ತಿಯಿಂದ ತುಂಬಿತು. ಕಲ್ಯಾಣ ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರವಾದ ನಾಲವಾರದ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಮಹಾಸಂಸ್ಥಾನ ಮಠದಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯ ಮಧ್ಯರಾತ್ರಿ ತನಾರತಿ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ದಕ್ಷಿಣ ಭಾರತದಲ್ಲೇ "ಮಹಾದೀಪಮೇಳ" ಎಂದು ಪ್ರಸಿದ್ಧವಾಗಿರುವ ಈ ಉತ್ಸವವು ಇಷ್ಟಾರ್ಥಗಳು ಈಡೇರಿದ ಕೃತಜ್ಞತೆಯ ಹರಕೆಯಾಗಿದೆ. ಕಳೆದ ಮೂರು ಶತಮಾನಗಳಿಂದಲೂ ಅವಿಚ್ಛಿನ್ನವಾಗಿ ನಡೆದುಕೊಂಡು ಬಂದಿರುವ ಈ ಪರಂಪರೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಿಂದಲೂ ಸಹಸ್ರಾರು ಸದ್ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಗದ್ದುಗೆಗೆ ನಮಿಸಿ ತಮ್ಮ ಹರಕೆಯನ್ನು ಸಲ್ಲಿಸಿದರು.
ಪೀಠಾಧಿಪತಿಗಳಾದ ಡಾ. ಸಿದ್ಧತೋಟೇಂದ್ರ ಮಹಾಸ್ವಾಮಿಗಳು ಶ್ರೀಮಠದ ಪಾರಂಪರಿಕ ವಿಶೇಷ ಉಡುಗೆಯನ್ನು ಧರಿಸಿ ಪುಷ್ಪಾಲಂಕೃತರಾಗಿ ಉತ್ಸವಕ್ಕೆ ನೇತೃತ್ವ ವಹಿಸಿದರು. ಅವರ ಹಿಂದೆ ಭಕ್ತರ ಸಾಗರವೇ ಹರಿದು ಬಂತು. ಪುರವಂತಿಕೆಯ ಮಂಗಳವಾದ್ಯ, ಪೂರ್ಣಕುಂಭ, ಬಾಜಾ-ಭಜಂತ್ರಿ ಮತ್ತು ವೈದಿಕರ ವೇದಘೋಷಗಳ ನಡುವೆ ಭಕ್ತರು ಮಠದ ಸುತ್ತ ಐದು ಸುತ್ತು ಪ್ರದಕ್ಷಿಣೆ ಹಾಕಿದರು. ಮಂಗಳವಾರ ಮಧ್ಯರಾತ್ರಿಯ ನಂತರ ಆರಂಭವಾದ ಈ ಪವಿತ್ರ ಯಾತ್ರೆ ಬುಧವಾರ ಬೆಳಗಿನ ಜಾವದವರೆಗೂ ಮುಂದುವರಿದು ಇಡೀ ಶ್ರೀಮಠವನ್ನೇ ದೀಪಮಯವಾಗಿಸಿತು.
ತನಾರತಿ ಎಂದರೆ ಕೇವಲ ದೀಪ ಹಚ್ಚುವುದಷ್ಟೇ ಅಲ್ಲ. ಇದು ಭಕ್ತ ಮತ್ತು ಗುರುಗಳ ನಡುವಿನ ಅವಿನಾಭಾವದ ಬಂಧದ ಸಂಕೇತ. ಮಧ್ಯರಾತ್ರಿ ಪವಿತ್ರ ಸ್ನಾನ ಮಾಡಿ ಗದ್ದುಗೆಗೆ ನಮಿಸಿ ಜ್ಯೋತಿ ಬೆಳಗಿದ ಪ್ರತಿಯೊಬ್ಬ ಭಕ್ತನ ಮುಖದಲ್ಲೂ ನೆಮ್ಮದಿ ಮತ್ತು ಧನ್ಯತೆಯ ಭಾವ ಸ್ಪಷ್ಟವಾಗಿ ಕಾಣುತ್ತಿತ್ತು. ಜಾತಿ, ಮತ, ಪಂಥಗಳ ಭೇದವಿಲ್ಲದೆ ಎಲ್ಲರೂ ಒಂದೇ ಸಾಲಿನಲ್ಲಿ ನಿಂತು ಸಮರ್ಪಣಾ ಭಾವದಿಂದ ಹರಕೆ ಸಲ್ಲಿಸುವುದು ಈ ಉತ್ಸವದ ಅತ್ಯಂತ ವಿಶಿಷ್ಟ ಅಂಶವಾಗಿದೆ.
ಸಾವಿರಾರು ಹಣತೆಗಳು ಒಟ್ಟಿಗೆ ಚಲಿಸಿದಾಗ ಉಂಟಾದ ದೃಶ್ಯವು ನದಿಯಂತೆ ಹರಿಯುತ್ತಿರುವ ಬೆಳಕಿನಂತೆ ಕಾಣುತ್ತಿತ್ತು. ಇಂತಹ ವೈಶಿಷ್ಟ್ಯಪೂರ್ಣ ಮತ್ತು ಮನೋಹರ ದೃಶ್ಯ ನಾಡಿನ ಬೇರೆ ಯಾವುದೇ ಭಾಗದಲ್ಲಿ ಕಾಣಲು ಸಾಧ್ಯವಿಲ್ಲ ಎಂಬುದು ಇಲ್ಲಿನ ಹಿರಿಯ ಭಕ್ತರ ನಂಬಿಕೆಯಾಗಿದೆ.
ಭಕ್ತಿ ಭಾವದಲ್ಲಿ ತೇಲಾಡಿದ ಈ ತನಾರತಿ ಮಹೋತ್ಸವವು ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಮಳೆಯನ್ನು ನೀಡಲಿ ಎಂಬ ಪ್ರಾರ್ಥನೆಯೊಂದಿಗೆ ಭಕ್ತಿ ಪೂರ್ವಕವಾಗಿ ಸಂಪನ್ನವಾಯಿತು.
