ಆರ್‌ಎಸ್‌ಎಸ್ ಶತಮಾನೋತ್ಸವಕ್ಕೆ ಅಭಿನಂದನೆ; ಪಾರದರ್ಶಕತೆ ಮತ್ತು ಕಾನೂನುಬದ್ಧ ಸ್ಥಾನಮಾನದ ಕುರಿತು ಸಾರ್ವಜನಿಕ ಸ್ಪಷ್ಟೀಕರಣಕ್ಕೆ ಮೊಹಮ್ಮದ್ ಅಶ್ರಫ್ ಅಲಿ ಆಗ್ರಹ
ಆರ್‌ಎಸ್‌ಎಸ್ ಶತಮಾನೋತ್ಸವಕ್ಕೆ ಅಭಿನಂದನೆ; ಪಾರದರ್ಶಕತೆ ಮತ್ತು ಕಾನೂನುಬದ್ಧ ಸ್ಥಾನಮಾನದ ಕುರಿತು ಸಾರ್ವಜನಿಕ ಸ್ಪಷ್ಟೀಕರಣಕ್ಕೆ ಮೊಹಮ್ಮದ್ ಅಶ್ರಫ್ ಅಲಿ ಆಗ್ರಹ
ಕಲಬುರಗಿ : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಕಲಬುರಗಿಯ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಅಶ್ರಫ್ ಅಲಿ ಅವರು ಆರ್‌ಎಸ್‌ಎಸ್ ಸರಸಂಘಚಾಲಕರಾದ ಮೋಹನ ಭಗವತಿ ಅವರಿಗೆ ಅಭಿನಂದನಾ ಪತ್ರ ಬರೆದು, ಸಂಘದ ಕಾನೂನುಬದ್ಧ ಸ್ಥಾನಮಾನ, ಸಾಂಸ್ಥಿಕ ರಚನೆ, ಹಣಕಾಸು ನಿರ್ವಹಣೆ ಹಾಗೂ ಆಡಳಿತಾತ್ಮಕ ಪಾರದರ್ಶಕತೆ ಕುರಿತು ಸಾರ್ವಜನಿಕವಾಗಿ ಸ್ಪಷ್ಟೀಕರಣ ನೀಡುವಂತೆ ಮನವಿ ಮಾಡಿದ್ದಾರೆ.
ತಮ್ಮ ಪತ್ರದಲ್ಲಿ ಆರ್‌ಎಸ್‌ಎಸ್ ಕಳೆದ 100 ವರ್ಷಗಳಲ್ಲಿ ದೇಶದಾದ್ಯಂತ ಸಾಮಾಜಿಕ ಸೇವೆ, ವಿಪತ್ತು ಪರಿಹಾರ, ಶಿಕ್ಷಣ ಹಾಗೂ ರಾಷ್ಟ್ರ ನಿರ್ಮಾಣದ ವಿವಿಧ ಚಟುವಟಿಕೆಗಳ ಮೂಲಕ ಲಕ್ಷಾಂತರ ಜನರ ವಿಶ್ವಾಸ ಮತ್ತು ಗೌರವವನ್ನು ಗಳಿಸಿರುವುದನ್ನು ಶ್ಲಾಘಿಸಿರುವ ಅಶ್ರಫ್ ಅಲಿ, ಈ ವಿಶ್ವಾಸವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸಂಘವು ತನ್ನ ಕಾನೂನು ಮತ್ತು ಆಡಳಿತಾತ್ಮಕ ಮಾಹಿತಿಯನ್ನು ಸಾರ್ವಜನಿಕರ ಮುಂದೆ ಇರಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್‌ಎಸ್ ಈಗಾಗಲೇ ಭಾರತದ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಅಗತ್ಯವಿರುವ ಎಲ್ಲಾ ನೋಂದಣಿಗಳು, ಕಾನೂನು ಔಪಚಾರಿಕತೆಗಳು ಹಾಗೂ ಶಾಸನಬದ್ಧ ಅನುಸರಣೆಗಳನ್ನು ಪೂರ್ಣಗೊಳಿಸಿದ್ದರೆ, ಅವುಗಳ ಮಾಹಿತಿಯನ್ನು ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವುದರಿಂದ ಸಂಘದ ವಿಶ್ವಾಸಾರ್ಹತೆ ಇನ್ನಷ್ಟು ಹೆಚ್ಚುತ್ತದೆ ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅಶ್ರಫ್ ಅಲಿ ಅವರು ಪತ್ರದಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಕೋರಿದ್ದಾರೆ. ಇದರಲ್ಲಿ ಆರ್‌ಎಸ್‌ಎಸ್‌ನ ಕಾನೂನು ಮತ್ತು ಸಾಂಸ್ಥಿಕ ಸ್ಥಾನಮಾನ, ಸಂಘ ಕಾರ್ಯನಿರ್ವಹಿಸುವ ಆಡಳಿತಾತ್ಮಕ ಮತ್ತು ಕಾನೂನು ಚೌಕಟ್ಟು, ಅಧಿಕೃತ ಪದಾಧಿಕಾರಿಗಳು ಹಾಗೂ ಪ್ರತಿನಿಧಿಗಳ ವಿವರಗಳು, ಆದಾಯದ ಮೂಲಗಳು ಮತ್ತು ದೇಣಿಗೆಗಳ ಮಾಹಿತಿ, ತೆರಿಗೆ ಹಾಗೂ ಇತರ ಶಾಸನಬದ್ಧ ಬಾಧ್ಯತೆಗಳ ಅನುಸರಣೆ, ಹಣಕಾಸು ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ವ್ಯವಸ್ಥೆ, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಪಥಸಂಚಲನಗಳಿಗೆ ಅನುಮತಿ ಪಡೆಯುವ ವಿಧಾನ, ಹಾಗೂ ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಗಳನ್ನು ಒಳಗೊಂಡಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ನಂಬಿಕೆ ಮತ್ತು ಪಾರದರ್ಶಕತೆ ಪರಸ್ಪರ ಸಂಬಂಧ ಹೊಂದಿದ್ದು, ರಾಷ್ಟ್ರಮಟ್ಟದಲ್ಲಿ ಪ್ರಭಾವ ಹೊಂದಿರುವ ಸಂಘಟನೆಯಾದ ಆರ್‌ಎಸ್‌ಎಸ್ ತನ್ನ ಕಾರ್ಯವೈಖರಿಯ ಕುರಿತು ಪೂರ್ವಭಾವಿಯಾಗಿ ಮಾಹಿತಿ ಹಂಚಿಕೊಳ್ಳುವುದರಿಂದ ತಪ್ಪು ಮಾಹಿತಿ, ಊಹಾಪೋಹಗಳು ಹಾಗೂ ಅನಗತ್ಯ ವಿವಾದಗಳಿಗೆ ಅವಕಾಶ ಕಡಿಮೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆರ್‌ಎಸ್‌ಎಸ್ ತನ್ನ ಎರಡನೇ ಶತಮಾನಕ್ಕೆ ಕಾಲಿಡುತ್ತಿರುವ ಈ ಮಹತ್ವದ ಸಂದರ್ಭದಲ್ಲಿ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಸಾಂವಿಧಾನಿಕ ಮೌಲ್ಯಗಳ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಅಶ್ರಫ್ ಅಲಿ ಮನವಿ ಮಾಡಿದ್ದಾರೆ.
ಪತ್ರದ ಕೊನೆಯಲ್ಲಿ, ಶತಮಾನೋತ್ಸವದ ಐತಿಹಾಸಿಕ ಸಾಧನೆಗಾಗಿ ಆರ್‌ಎಸ್‌ಎಸ್ ಹಾಗೂ ಅದರ ಎಲ್ಲಾ ಸ್ವಯಂಸೇವಕರಿಗೆ ಅಭಿನಂದನೆ ಸಲ್ಲಿಸಿರುವ ಮೊಹಮ್ಮದ್ ಅಶ್ರಫ್ ಅಲಿ, ದೇಶದ ನಾಗರಿಕರ ಹಿತದೃಷ್ಟಿಯಿಂದ ಮೇಲ್ಕಂಡ ವಿಷಯಗಳ ಕುರಿತು ಸಾರ್ವಜನಿಕ ಸ್ಪಷ್ಟೀಕರಣ ನೀಡುವಂತೆ ಗೌರವಪೂರ್ವಕವಾಗಿ ಕೋರಿದ್ದಾರೆ.
