ಐಪಿಎಸ್ ಅಧಿಕಾರಿಗಳ ಮಹತ್ವದ ವರ್ಗಾವಣೆ: ಸಂದೀಪ್ ಪಾಟೀಲ್, ಚೇತನ್ ಸಿಂಗ್ ರಾಥೋರ್, ಅನುಪಮ್ ಅಗರವಾಲ್‌ಗೆ ಹೊಸ ನೇಮಕಾತಿ
ಐಪಿಎಸ್ ಅಧಿಕಾರಿಗಳ ದಿಢೀರ ವರ್ಗಾವಣೆ - ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ಚರ್ಚೆಗೆ ಗ್ರಾಸ : ಸಂದೀಪ್ ಪಾಟೀಲ್, ಚೇತನ್ ಸಿಂಗ್ ರಾಥೋರ್, ಅನುಪಮ್ ಅಗರವಾಲ್‌ಗೆ ಹೊಸ ಹುದ್ದೆ,
ಬೆಂಗಳೂರು, ಮೇ 6: ರಾಜ್ಯ ಸರ್ಕಾರವು ಹಿರಿಯ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗೆ ಸಂಬಂಧಿಸಿದ ಮಹತ್ವದ ಆದೇಶ ಹೊರಡಿಸಿದೆ. ಆಡಳಿತ ಯಂತ್ರದಲ್ಲಿನ ಈ ಮಹತ್ವದ ಬದಲಾವಣೆಯು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ರಾಜ್ಯಪಾಲರ ಆದೇಶದ ಮೇರೆಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಸಂಜಯ್ ಬಿ.ಎಸ್ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.
ಐಪಿಎಸ್ (2004) ನೇ ಬ್ಯಾಚ್‌ನ ಸಂದೀಪ್ ಪಾಟೀಲ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ, ಮುಂದಿನ ಆದೇಶದವರೆಗೆ ಬೆಳಗಾವಿ ಉತ್ತರ ವಲಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಗೆ ನೇಮಕ ಮಾಡಲಾಗಿದೆ.
ಐಪಿಎಸ್ (2007) ನೇ ಬ್ಯಾಚ್‌ನ ಡಾ. ಚೇತನ್ ಸಿಂಗ್ ರಾಥೋರ್ ಅವರನ್ನು ಬೆಳಗಾವಿ ಉತ್ತರ ವಲಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಯಿಂದ ವರ್ಗಾವಣೆ ಮಾಡಿ, ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್, ಅಪರಾಧ ತನಿಖಾ ಇಲಾಖೆ (ಆರ್ಥಿಕ ಅಪರಾಧಗಳು) ಹುದ್ದೆಗೆ ನಿಯೋಜಿಸಲಾಗಿದೆ.
ಹುದ್ದೆಗಾಗಿ ಕಾಯುತ್ತಿದ್ದ ಐಪಿಎಸ್ (2008) ನೇ ಬ್ಯಾಚ್‌ನ ಅನುಪಮ್ ಅಗರವಾಲ್ ಅವರನ್ನು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಗೆ ವರ್ಗ ಮಾಡಲಾಗಿದೆ.
ಇದೇ ವೇಳೆ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಹುದ್ದೆಯನ್ನು ಐಪಿಎಸ್ (ವೇತನ) ನಿಯಮಗಳು 2016ರ ನಿಯಮ 12ರ ಅಡಿಯಲ್ಲಿ ಪೊಲೀಸ್ ಕಂಪ್ಯೂಟರ್ ವಿಂಗ್‌ನ ಕೇಡರ್ ಹುದ್ದೆಗೆ ಸ್ಥಾನಮಾನ ಮತ್ತು ಜವಾಬ್ದಾರಿಗಳಲ್ಲಿ ಸಮಾನ ಎಂದು ಘೋಷಿಸಲಾಗಿದೆ.
ರಾಜ್ಯದ ಪೊಲೀಸ್ ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಕ್ಷಮತೆ ಮತ್ತು ಸಮನ್ವಯ ಹೆಚ್ಚಿಸುವ ಉದ್ದೇಶದಿಂದ ಈ ವರ್ಗಾವಣೆಗಳನ್ನು ಕೈಗೊಳ್ಳಲಾಗಿದೆ ಎಂದು ವಿಶ್ವಸನೀಯ ಮೂಲಗಳಿಂದ ತಿಳಿದು ಬಂದಿದೆ.
