ರಾಜ್ಯದ ಏಕೈಕ ಯುಎಚ್‌ವಿ ನೋಡಲ್ ಕೇಂದ್ರವಾಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿಗೆ ಮಾನ್ಯತೆ
ರಾಜ್ಯದ ಏಕೈಕ ಯುಎಚ್‌ವಿ ನೋಡಲ್ ಕೇಂದ್ರವಾಗಿ ಪಿಡಿಎ ಇಂಜಿನಿಯರಿಂಗ್ ಕಾಲೇಜಿಗೆ ಮಾನ್ಯತೆ
ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜು ಮತ್ತೊಂದು ಮಹತ್ವದ ಸಾಧನೆ ಮಾಡಿದ್ದು, ಎಐಸಿಟಿಇ ವತಿಯಿಂದ ಸಾರ್ವತ್ರಿಕ ಮಾನವ ಮೌಲ್ಯಗಳು (ಯು ಎಚ್ ವಿ) ನೋಡಲ್ ಕೇಂದ್ರವಾಗಿ ಮಾನ್ಯತೆ ಪಡೆದ ರಾಜ್ಯದ ಏಕೈಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಳೆದ ಎರಡು ವರ್ಷಗಳಿಂದ ಕಾಲೇಜು ಯುಎಚ್‌ವಿ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವಲ್ಲಿ ನಿರಂತರ ಪ್ರಯತ್ನ ಮಾಡುತ್ತಿದೆ. ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರಿಗೆ ನಾಯಕತ್ವ ತರಬೇತಿ ಶಿಬಿರ (LDP), ಸಂಸ್ಥೆಯ ಮುಖ್ಯಸ್ಥರಿಗೆ ನಿರ್ವಹಣಾ ತರಬೇತಿ ಶಿಬಿರ (MDP), ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಅಧ್ಯಾಪನಾ ಅಭಿವೃದ್ಧಿ ತರಬೇತಿ (FDP) ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಮೌಲ್ಯ ಶಿಕ್ಷಣ ಬೆಳೆಸುವ ಉದ್ದೇಶದಿಂದ, ಕಾಲೇಜು ಎರಡು ಹಂತಗಳಲ್ಲಿ ಯುಎಚ್‌ವಿ ವಿಷಯವನ್ನು ಪರಿಚಯಿಸುತ್ತಿದೆ. ಹೊಸದಾಗಿ ಸೇರುವ ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಇಂಡಕ್ಷನ್ ಪ್ರೋಗ್ರಾಂ ಮೂಲಕ ಪರಿಚಯ ಮಾಡಲಾಗುತ್ತಿದ್ದು, ಇಂಜಿನಿಯರಿಂಗ್ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಮಾನವ ಮೌಲ್ಯಗಳು ವಿಷಯವನ್ನು ಪಠ್ಯಕ್ರಮದ ಭಾಗವಾಗಿ ಕಡ್ಡಾಯವಾಗಿ ಬೋಧಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.
ಇದೀಗ ಈ ಯೋಜನೆಯನ್ನು ಕಾಲೇಜಿನ ಒಳಗೆ ಮಾತ್ರ ಸೀಮಿತಗೊಳಿಸದೇ, ಸುತ್ತಮುತ್ತಲಿನ ಶಾಲೆಗಳು ಹಾಗೂ ಕಾಲೇಜುಗಳಿಗೆ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.
ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ, ಉಪಾಧ್ಯಕ್ಷರಾದ ರಾಜಾಭಿ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿಗಳಾದ ಡಾ. ಕೈಲಾಶ್ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಈ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ಹಾಗೂ ಬೆಂಬಲ ನೀಡುತ್ತಿದ್ದಾರೆ. ಶಿಕ್ಷಣದ ಮೂಲಕ ಸಂಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯೇ ಸಂಸ್ಥೆಯ ಮುಖ್ಯ ಗುರಿಯಾಗಿದೆ.
ಕಳೆದ ಎರಡು ವರ್ಷಗಳಿಂದ ಪ್ರಾಚಾರ್ಯರಾದ ಡಾ. ಎಸ್.ಆರ್. ಪಾಟೀಲ್ ಹಾಗೂ ಅವರ ತಂಡದ ಶ್ರಮವನ್ನು ಮೆಚ್ಚಿ, 2026ರಲ್ಲಿ ನಡೆದ ವಿ.ಸಿ. ಕಾನ್‌ಕ್ಲೇವ್‌ನಲ್ಲಿ ಎಐಸಿಟಿಇ ವತಿಯಿಂದ ಪಿಡಿಎ ಇಂಜಿನಿಯರಿಂಗ್ ಕಾಲೇಜಿಗೆ ರಾಜ್ಯದ ಏಕೈಕ ಯುಎಚ್‌ವಿ ನೋಡಲ್ ಕೇಂದ್ರ ಎಂಬ ಪ್ರಮಾಣಪತ್ರ ನೀಡಿ ಗೌರವಿಸಲಾಗಿದೆ.
ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
