ನ. 29ರಂದು ಜೇರಟಗಿಯಲ್ಲಿ ಶ್ರೀ ರೇವಣಸಿದ್ದೇಶ್ವರರ ಭವ್ಯ ರಥೋತ್ಸವ
ನ. 29ರಂದು ಜೇರಟಗಿಯಲ್ಲಿ ಶ್ರೀ ರೇವಣಸಿದ್ದೇಶ್ವರರ ಭವ್ಯ ರಥೋತ್ಸವ
ಕಲಬುರಗಿ: ಜೇವರ್ಗಿ ತಾಲ್ಲೂಕಿನ ಜೇರಟಗಿ ಗ್ರಾಮದಲ್ಲಿ ನವೆಂಬರ್ 29ರ ಭಾನುವಾರ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಹಾಗೂ ಶ್ರೀ ಚನ್ನಬಸವೇಶ್ವರರ ಜಾತ್ರಾ ಮಹೋತ್ಸವ ಮತ್ತು ಭವ್ಯ ರಥೋತ್ಸವ ಜರುಗಲಿದೆ. ವಿರಕ್ತಮಠದ ಶ್ರೀ ಮಹಾಂತ ಸ್ವಾಮಿಗಳ ಪಾವನ ಸಾನ್ನಿಧ್ಯದಲ್ಲಿ ಕಳೆದ 15 ದಿನಗಳಿಂದ ನಡೆಯುತ್ತಿರುವ ಶ್ರೀ ರೇವಣಸಿದ್ದೇಶ್ವರ ಹಾಗೂ ಶ್ರೀ ಸಿದ್ದರಾಮೇಶ್ವರರ ಮಹಾಪುರಾಣವು ನವೆಂಬರ್ 28ರಂದು ಶನಿವಾರ ಬಸವರಾಜ ಶಿವಬಸಪ್ಪ ಪುರಾಣಿಕ್ ಅವರಿಂದ ಭಕ್ತಿಪೂರ್ವಕ ಗಣಾರಾಧನೆಯೊಂದಿಗೆ ಆರಂಭವಾಗಲಿದೆ. ಅಂದು ಪ್ರಕಾಶ ಅಮರಪ್ಪ ನಿಷ್ಟಿ ದೇಶಮುಖ ಅವರಿಂದ ಜಂಗಮ ಗಣಾರಾಧನೆ (ಖಾಂಡ) ನೆರವೇರಿಸುವುದರೊಂದಿಗೆ ಪುರಾಣದ ಮಂಗಲೋತ್ಸವ ನಡೆಯಲಿದೆ. ಅದೇ ದಿನ ಸಂಜೆ 5 ಗಂಟೆಗೆ ಚಮ್ಮಾವುಗೆಗಳ ಮೆರವಣಿಗೆಯ ಮೂಲಕ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಆಗಮಿಸಲಾಗುವುದು. ನವೆಂಬರ್ 29ರಂದು ಭಾನುವಾರ ಬೆಳಿಗ್ಗೆ 5 ಗಂಟೆಗೆ ಪುರವಂತಿಕೆ ಸೇವೆಯೊಂದಿಗೆ ದೇವರ ಬೆಟ್ಟಿ ಕಾರ್ಯಕ್ರಮ ನಡೆಯಲಿದೆ. ಸಂಜೆ 4 ಗಂಟೆಗೆ ಪ್ರಕಾಶ ನಿಷ್ಟಿ ದೇಶಮುಖ ಅವರ ಮನೆಯಿಂದ ಸ್ವರ್ಣಲೇಪಿತ ಕಳಸದ ಮೆರವಣಿಗೆ ರಥೋತ್ಸವದ ಸ್ಥಳದವರೆಗೆ ಸಾಗಲಿದೆ. ನಂತರ ಸಂಜೆ 5 ಗಂಟೆಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ರೇವಣಸಿದ್ದೇಶ್ವರರ ಭವ್ಯ ರಥೋತ್ಸವ ಜರುಗಲಿದೆ. ರಥೋತ್ಸವದ ಬಳಿಕ ರಂಗುರಂಗಿನ ಮದ್ದು ಸುಡುವುದು, ನಂದಿಕೋಲು ಆಟ, ಗೀಗಿ ಪದ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಬಸಯ್ಯ ಮಠಪತಿ ಅವರು ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಿದ್ದಾರೆ ಎಂದು ಶ್ರೀ ರೇವಣಸಿದ್ದೇಶ್ವರ ಹಾಗೂ ಚನ್ನಬಸವೇಶ್ವರರ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

