276ನೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ: ಧರ್ಮದ ಹೆಸರಿನಲ್ಲಿ ದ್ವೇಷ ಬೇಡ, ಮಾನವೀಯತೆ ಮತ್ತು ಸಹೋದರತ್ವಕ್ಕೆ ಆದ್ಯತೆ ನೀಡಿ–ಅಂಬಾಜಿ ಮೇಟಿ ಕರೆ

276ನೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ: ಧರ್ಮದ ಹೆಸರಿನಲ್ಲಿ ದ್ವೇಷ ಬೇಡ, ಮಾನವೀಯತೆ ಮತ್ತು ಸಹೋದರತ್ವಕ್ಕೆ ಆದ್ಯತೆ ನೀಡಿ–ಅಂಬಾಜಿ ಮೇಟಿ ಕರೆ

276ನೇ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ: ಧರ್ಮದ ಹೆಸರಿನಲ್ಲಿ ದ್ವೇಷ ಬೇಡ, ಮಾನವೀಯತೆ ಮತ್ತು ಸಹೋದರತ್ವಕ್ಕೆ ಆದ್ಯತೆ ನೀಡಿ–ಅಂಬಾಜಿ ಮೇಟಿ ಕರೆ

ಕಲಬುರಗಿ: ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಬದಲು ಮಾನವೀಯತೆ, ಸಮಾನತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಧರ್ಮ, ಸಂಪ್ರದಾಯ ಹಾಗೂ ಆಚಾರ-ವಿಚಾರಗಳು ವಿಭಿನ್ನವಾಗಿದ್ದರೂ ನಾವೆಲ್ಲರೂ ಭಾರತೀಯರು ಎಂಬ ರಾಷ್ಟ್ರೀಯ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದು ಭೀಮ್ ಶಕ್ತಿ ಸಂಘದ ರಾಜ್ಯಾಧ್ಯಕ್ಷ ಅಂಬಾಜಿ ಪಿ. ಮೇಟಿ ಹೇಳಿದರು.

ನಗರದ ವಿದ್ಯಾನಗರ ಬಡಾವಣೆಯಲ್ಲಿ ಭೀಮ್ ಶಕ್ತಿ ಸಂಘದ ನಗರ ಘಟಕದ ವತಿಯಿಂದ ಬುಧುವಾರ ಸಂಜೆ ಆಯೋಜಿಸಿದ್ದ ಮೈಸೂರು ಹುಲಿ ಹಜರತ್ ಟಿಪ್ಪು ಸುಲ್ತಾನ್ ಅವರ 276ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ರಿಟಿಷರ ವಸಾಹತುಶಾಹಿ ಆಡಳಿತದ ವಿರುದ್ಧ ಟಿಪ್ಪು ಸುಲ್ತಾನ್ ನಡೆಸಿದ ಹೋರಾಟ ಯಾವುದೇ ಒಂದು ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾಗಿರಲಿಲ್ಲ. ಮೈಸೂರು ಸಂಸ್ಥಾನದ ಜನರ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ಘನತೆಗಾಗಿ ಅವರು ಹೋರಾಡಿದ್ದರು. ದೇಶಕ್ಕಾಗಿ ಹಾಗೂ ನಾಡಿಗಾಗಿ ಹೋರಾಡಿ ವೀರಮರಣ ಹೊಂದಿದ ಮಹಾನ್ ಯೋಧನ ತ್ಯಾಗ, ಸಾಹಸ ಮತ್ತು ದೇಶಪ್ರೇಮವನ್ನು ಸ್ಮರಿಸುವುದೇ ಜಯಂತಿ ಆಚರಣೆಯ ಆಶಯವಾಗಿದೆ ಎಂದು ತಿಳಿಸಿದರು.

ಹಿಂದೂ, ಮುಸ್ಲಿಂ, ಸಿಖ್ ಸೇರಿದಂತೆ ವಿವಿಧ ಧರ್ಮಗಳ ಜನರು ಒಂದಾಗಿ ಬದುಕುವ ಮೂಲಕ ದೇಶದ ಐಕ್ಯತೆ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು. ನಮ್ಮ ಧರ್ಮಗಳು ಬೇರೆ ಇರಬಹುದು, ಸಂಪ್ರದಾಯಗಳು, ಆಚಾರ-ವಿಚಾರಗಳು ಹಾಗೂ ಉಡುಗೆ-ತೊಡುಗೆಗಳು ವಿಭಿನ್ನವಾಗಿರಬಹುದು. ಆದರೆ ಪರಸ್ಪರ ದ್ವೇಷ ಮತ್ತು ಭೇದಭಾವಕ್ಕೆ ಅವಕಾಶ ನೀಡಬಾರದು. ನಾವೆಲ್ಲರೂ ಭಾರತೀಯರು ಎಂಬ ಏಕತೆಯ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಟಿಪ್ಪು ಸುಲ್ತಾನ್ ಅವರ ಶೌರ್ಯ, ದೇಶಪ್ರೇಮ, ಸ್ವಾಭಿಮಾನ ಹಾಗೂ ತ್ಯಾಗದ ಆದರ್ಶಗಳನ್ನು ಇಂದಿನ ಯುವಜನತೆ ಮೈಗೂಡಿಸಿಕೊಳ್ಳಬೇಕು. ಧರ್ಮದ ಹೆಸರಿನಲ್ಲಿ ದ್ವೇಷ ಬೆಳೆಸುವ ಬದಲು ಮಾನವೀಯತೆ ಮತ್ತು ಸಹೋದರತ್ವದ ಮೂಲಕ ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.

ಕಲಬುರಗಿ ಮಹಾನಗರ ಪಾಲಿಕೆಯ ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಕು. ರೇಣುಕಾ ಹೊಳಲ್ಕರ್ ಅವರು ಟಿಪ್ಪು ಸುಲ್ತಾನ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ನಾಡು ರಕ್ಷಣಾ ಪಡೆಯ ರಾಜ್ಯ ಉಪಾಧ್ಯಕ್ಷ

ಗಜಾನನ ದೇಶಪಾಂಡೆ, ಖ್ಯಾತ ವಕೀಲ ಉಮರ್ ಜುನೈದಿ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಸಂಸ್ಥಾಪಕ ಅಧ್ಯಕ್ಷ ರಮಾಕಾಂತ ಪೂಜಾರಿ, ಸಾಮಾಜಿಕ ಕಾರ್ಯಕರ್ತ ಉಮರ್ ಖಾನ್, ಜೈ ಕರುನಾಡು ಜನಪರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಿದ್ದು ಜಮಾದಾರ, ಭೀಮ್ ಶಕ್ತಿ ಸಂಘದ ನಗರ ಅಧ್ಯಕ್ಷ ಮಹಮ್ಮದ್ ಹೀಸಾಮೋದ್ದಿನ್, ಜಿಲ್ಲಾಧ್ಯಕ್ಷ ಗೌತಮ್ ಸಂಗೋಳಗಿಕರ್ ಸೇರಿದಂತೆ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಸಮಾಜದ ಮುಖಂಡರು, ಯುವಕರು ಹಾಗೂ ಟಿಪ್ಪು ಸುಲ್ತಾನ್ ಅಭಿಮಾನಿಗಳು ಉಪಸ್ಥಿತರಿದ್ದರು.