'ಪ್ರೊ. ಮಲ್ಲೇಪುರಂ ಗ್ರಂಥಾಂತರಂಗ' ಕೃತಿಗಳ ಲೋಕಾರ್ಪಣೆ ಹಾಗೂ 'ಅಲ್ಲಮ ಪುರಸ್ಕಾರ-2026' ಪ್ರದಾನ ಸಮಾರಂಭ
ಪ್ರೊ. ಮಲ್ಲೇಪುರಂ 75ರ ಸಂಭ್ರಮ: 'ಎ ಬೀಕನ್ ಆಫ್ ಲೈಟ್' ಮತ್ತು 'ಪ್ರೊ. ಮಲ್ಲೇಪುರಂ ಗ್ರಂಥಾಂತರಂಗ' ಕೃತಿಗಳ ಲೋಕಾರ್ಪಣೆ ಹಾಗೂ 'ಅಲ್ಲಮ ಪುರಸ್ಕಾರ-2026' ಪ್ರದಾನ ಸಮಾರಂಭ
ಹಿರಿಯ ವಿದ್ವಾಂಸರು ಹಾಗೂ ಚಿಂತಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ 75ನೇ ಜನ್ಮದಿನೋತ್ಸವದ ಅಂಗವಾಗಿ 'ಪ್ರೊ. ಮಲ್ಲೇಪುರಂ 75ರ ಸಂಭ್ರಮ' ಕಾರ್ಯಕ್ರಮವನ್ನು ಡಿಸೆಂಬರ್ 1, 2026ರಂದು ಸಂಜೆ 5.30ಕ್ಕೆ ಬೆಂಗಳೂರಿನ ಕುಮಾರಪಾರ್ಕ್ ಪೂರ್ವದ ಗಾಂಧೀಭವನದ ಮಹದೇವ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ (ರಿ.), ಜಮಖಂಡಿ ಇವರ ಪ್ರಾಯೋಜಕತ್ವದಲ್ಲಿ; ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ (ರಿ.), ಜಮಖಂಡಿ, ಅನ್ನಪೂರ್ಣ ಪಬ್ಲಿಕೇಷನ್ಸ್, ಬೆಂಗಳೂರು ಮತ್ತು ಸುಬ್ಬು ಪಬ್ಲಿಕೇಷನ್ಸ್, ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಈ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಎರಡು ಮಹತ್ವದ ಕೃತಿಗಳ ಲೋಕಾರ್ಪಣೆ ಹಾಗೂ 'ಅಲ್ಲಮ ಪುರಸ್ಕಾರ-2026' ಪ್ರದಾನ ನೆರವೇರಲಿದೆ.
ಲೋಕಾರ್ಪಣೆಗೊಳ್ಳಲಿರುವ ಕೃತಿಗಳು:'ಎ ಬೀಕನ್ ಆಫ್ ಲೈಟ್' (A Beacon of Light): ಪ್ರೊ. ಮಲ್ಲೇಪುರಂ ಅವರ ಆತ್ಮಕಥನ 'ದಿಟದ ದೀವಟಿಗೆ'ಯ ಇಂಗ್ಲಿಷ್ ಅನುವಾದವಾಗಿದ್ದು, ಡಾ. ಟಿ.ಎನ್. ವಾಸುದೇವಮೂರ್ತಿ ಅವರು ಅನುವಾದಿಸಿದ್ದಾರೆ. (ಪ್ರಕಾಶನ: ಸುಬ್ಬು ಪಬ್ಲಿಕೇಷನ್ಸ್, ಹುಬ್ಬಳ್ಳಿ).'ಪ್ರೊ. ಮಲ್ಲೇಪುರಂ ಗ್ರಂಥಾಂತರಂಗ': ಡಾ. ಸಂತೋಷ ಬಿ. ಹಾನಗಲ್ ಅವರು ಸಂಪಾದಿಸಿರುವ ಕೃತಿ. (ಪ್ರಕಾಶನ: ಅನ್ನಪೂರ್ಣ ಪಬ್ಲಿಕೇಷನ್ಸ್, ಬೆಂಗಳೂರು).
ಸುತ್ತೂರು ಶ್ರೀ ಕ್ಷೇತ್ರದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಮತ್ತು ಒರಿಸ್ಸಾ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಗ್ರಂಥಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಜಮಖಂಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ನಾಡೋಜ ಶ್ರೀ ಜಗದೀಶ ಶಿವಯ್ಯ ಗುಡಗುಂಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ರಾಯಚೂರಿನ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಶಿವಾನಂದ ಕೆಳಗಿನಮನಿ ಅವರು 'ಅಲ್ಲಮ ಪುರಸ್ಕಾರ' ಪ್ರದಾನ ಮಾಡಲಿದ್ದು, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಅಭಿನಂದಿತರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ನುಡಿಗಳನ್ನಾಡಲಿದ್ದು, ಲೇಖಕರಾದ ಡಾ. ಟಿ.ಎನ್. ವಾಸುದೇವಮೂರ್ತಿ ಹಾಗೂ ಡಾ. ಸಂತೋಷ ಬಿ. ಹಾನಗಲ್ ಉಪಸ್ಥಿತರಿರುತ್ತಾರೆ.
'ಅಲ್ಲಮ ಪುರಸ್ಕಾರ-2026' ಭಾಜನರು: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಡಾ. ಯು.ಎನ್. ಸಂಗನಾಳಮಠ (ದಾವಣಗೆರೆ), ಶ್ರೀ ಶಂಕರ ದೇವನೂರ (ಮೈಸೂರು), ಶ್ರೀ ಕಣಜನಹಳ್ಳಿ ನಾಗರಾಜ್ (ಚಿತ್ರದುರ್ಗ) ಮತ್ತು ಶ್ರೀ ಹರಿಹರ ಶಿವಕುಮಾರ್ (ಬೆಂಗಳೂರು) ಅವರಿಗೆ ಈ ಪ್ರತಿಷ್ಠಿತ ಪುರಸ್ಕಾರವನ್ನು ನೀಡಿ ಗೌರವಿಸಲಾಗುವುದು.
ಕಾರ್ಯಕ್ರಮದಲ್ಲಿ ಪ್ರೊ. ಗಿರೀಶ್ಚಂದ್ರ, ಡಾ. ಪಿ.ಆರ್. ಪಾಗೋಜಿ, ಶ್ರೀ ಜೀರಿಗೆ ಲೋಕೇಶ್, ಡಾ. ಕೆ.ಜಿ. ಲಕ್ಷ್ಮೀನಾರಾಯಣಪ್ಪ, ಡಾ. ಮದನ್ ಪಟೇಲ್, ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ, ಶ್ರೀ ಆರ್. ರಾಮಚಂದ್ರ, ಶ್ರೀ ಎಂ.ಎ. ಸುಬ್ರಹ್ಮಣ್ಯ, ಶ್ರೀ ವೆಂಕಟರವಣಪ್ಪ, ಶ್ರೀ ಜಿ. ಮಾದೇಶ, ಶ್ರೀ ಎ. ರಾಜೇಶ್, ಶ್ರೀ ಜಾಂಬವ ಎಂ. ಗಂಗಾಧರ, ಶ್ರೀ ಗುಣವಂತ ಮಂಜು, ಶ್ರೀ ಎ. ಅಮೃತರಾಜ್, ಡಾ. ಬಿ. ಗೋವಿಂದ, ಶ್ರೀ ಕೃಷ್ಣಮೂರ್ತಿ ಹಾಗೂ ಶ್ರೀಮತಿ ನಳಿನೀ ಕೃಷ್ಣ ಅವರು ವಿಶೇಷ ಆಮಂತ್ರಿತರಾಗಿ ಪಾಲ್ಗೊಳ್ಳಲಿದ್ದಾರೆ.
ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸುಬ್ಬು ಪಬ್ಲಿಕೇಷನ್ಸ್ನ ಋತ್ವಿಕ್ ಸುಬ್ರಹ್ಮಣ್ಯ, ಅನ್ನಪೂರ್ಣ ಪಬ್ಲಿಕೇಷನ್ಸ್ನ ಬಿ.ಕೆ. ಸುರೇಶ್ ಹಾಗೂ ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಧರ್ಮಲಿಂಗಯ್ಯ ಜಗದೀಶ ಗುಡುಗುಂಟಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

