ಪದವಿ ಶಿಕ್ಷಣ ಆತ್ಮವಿಶ್ವಾಸದೊಂದಿಗೆ ಆರಂಭವಾಗಲಿ: ಶಾಸಕ ಅಲ್ಲಮಪ್ರಭು ಪಾಟೀಲ

ಪದವಿ ಶಿಕ್ಷಣ ಆತ್ಮವಿಶ್ವಾಸದೊಂದಿಗೆ ಆರಂಭವಾಗಲಿ: ಶಾಸಕ ಅಲ್ಲಮಪ್ರಭು ಪಾಟೀಲ

ಪದವಿ ಶಿಕ್ಷಣ ಆತ್ಮವಿಶ್ವಾಸದೊಂದಿಗೆ ಆರಂಭವಾಗಲಿ: ಶಾಸಕ ಅಲ್ಲಮಪ್ರಭು ಪಾಟೀಲ

ಸರಕಾರಿ ಮಹಾವಿದ್ಯಾಲಯದಲ್ಲಿ ‘ಹೊಸ ದಿಗಂತ’ ಫ್ರೆಶರ್ಸ್ ಓರಿಯಂಟೇಶನ್ ಕಾರ್ಯಕ್ರಮ

ಕಲಬುರಗಿ: ವಿದ್ಯಾರ್ಥಿಗಳು ಪದವಿ ಶಿಕ್ಷಣದ ಆರಂಭದಿಂದಲೇ ಸ್ಪಷ್ಟ ಗುರಿ, ಆತ್ಮವಿಶ್ವಾಸ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಶಿಕ್ಷಣವೆಂದರೆ ಕೇವಲ ಪದವಿ ಪಡೆಯುವುದಲ್ಲ; ವ್ಯಕ್ತಿತ್ವ ವಿಕಸನ, ಜ್ಞಾನಾರ್ಜನೆ, ಉತ್ತಮ ಸಂಸ್ಕಾರ ಹಾಗೂ ಸಮಾಜದ ಬಗ್ಗೆ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವ ಪ್ರಕ್ರಿಯೆಯಾಗಿದೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಲ್ಲಮಪ್ರಭು ಪಾಟೀಲ ಹೇಳಿದರು.

ನಗರದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ 2026–27ನೇ ಸಾಲಿನ ಬಿ.ಎ., ಬಿ.ಎಸ್ಸಿ. ಮತ್ತು ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಹೊಸ ದಿಗಂತ–ಪದವಿ ಶಿಕ್ಷಣಕ್ಕೆ ಆತ್ಮವಿಶ್ವಾಸದ ಆರಂಭ’ ಎಂಬ ಶೀರ್ಷಿಕೆಯ ಫ್ರೆಶರ್ಸ್ ಓರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನವು ಭವಿಷ್ಯವನ್ನು ರೂಪಿಸಿಕೊಳ್ಳುವ ಮಹತ್ವದ ಘಟ್ಟವಾಗಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಯದ ಮಹತ್ವವನ್ನು ಅರಿತು, ಶಿಸ್ತುಬದ್ಧ ಅಧ್ಯಯನದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ರಾಷ್ಟ್ರೀಯ ಸೇವಾ ಯೋಜನೆ ಸೇರಿದಂತೆ ವಿವಿಧ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರಿಂದ ನಾಯಕತ್ವದ ಗುಣ, ಆತ್ಮವಿಶ್ವಾಸ, ಸಂವಹನ ಕೌಶಲ ಹಾಗೂ ಸಾಮಾಜಿಕ ಕಳಕಳಿ ಬೆಳೆಯುತ್ತವೆ ಎಂದು ತಿಳಿಸಿದರು.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉತ್ತಮ ಅಂಕ ಗಳಿಸುವುದರ ಜತೆಗೆ ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಉನ್ನತ ಗುರಿ ಹೊಂದಬೇಕು. ಪದವಿ ಶಿಕ್ಷಣದ ಅವಧಿಯನ್ನು ಸದುಪಯೋಗಪಡಿಸಿಕೊಂಡು ಉದ್ಯೋಗಾವಕಾಶಗಳಿಗೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳನ್ನು ಸಂಪಾದಿಸಬೇಕು. ಶಿಕ್ಷಕರ ಮಾರ್ಗದರ್ಶನ ಪಡೆದು, ಗ್ರಂಥಾಲಯದ ಸದುಪಯೋಗ ಮಾಡಿಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಯಶಸ್ಸಿನ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು.

ಜ್ಞಾನ ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಅಪ್ಪುಗೇರ ಸೋಮಶೇಖರ ಮಾತನಾಡಿ, ಪದವಿ ಶಿಕ್ಷಣವು ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಅವಕಾಶಗಳು ಮತ್ತು ಸವಾಲುಗಳಿಗೆ ತೆರೆದುಕೊಳ್ಳುವ ಮಹತ್ವದ ಹಂತವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಸಾಹಿತ್ಯ, ಸಂಸ್ಕೃತಿ, ಸಮಾಜ ಮತ್ತು ಸಮಕಾಲೀನ ವಿದ್ಯಮಾನಗಳ ಕುರಿತು ಅರಿವು ಬೆಳೆಸಿಕೊಳ್ಳಬೇಕು. ಭಾಷೆಯ ಮೇಲಿನ ಹಿಡಿತ, ಓದುವ ಹವ್ಯಾಸ ಮತ್ತು ವಿಚಾರಶೀಲತೆಯನ್ನು ಬೆಳೆಸಿಕೊಳ್ಳುವುದರಿಂದ ಜ್ಞಾನ ವಿಸ್ತಾರವಾಗುವುದರ ಜತೆಗೆ ವ್ಯಕ್ತಿತ್ವವೂ ಸಮೃದ್ಧವಾಗುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಉತ್ತಮ ಉದ್ಯೋಗ ಪಡೆಯುವುದರ ಜತೆಗೆ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು. ತಮ್ಮ ಸಾಧನೆಗೆ ಶಿಕ್ಷಕರು, ಪೋಷಕರು ಮತ್ತು ಸಮಾಜ ನೀಡುವ ಕೊಡುಗೆಯನ್ನು ಗುರುತಿಸಿ, ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಪದವಿ ಶಿಕ್ಷಣದ ಅವಧಿಯಲ್ಲಿ ದೊರೆಯುವ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು, ನಿರಂತರ ಕಲಿಕೆ ಮತ್ತು ಪರಿಶ್ರಮದ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಇಂದುಮತಿ ಪಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಸವಿತಾ ತಿವಾರಿ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಲ್ಲೇಶಪ್ಪ ಕುಂಬಾರ, ಪದವಿ ಕಲಾ ವಿಭಾಗದ ಡೀನ್ ಡಾ. ವಿಜಯಕುಮಾರ ಸಾಲಿಮನಿ, ವಾಣಿಜ್ಯ ವಿಭಾಗದ ಡೀನ್ ಡಾ. ರಾಜಕುಮಾರ ಸಲಗರ, ವಿಜ್ಞಾನ ವಿಭಾಗದ ಡೀನ್ ಡಾ. ದವಲಪ್ಪ ಬಿ.ಎಚ್., ಸಿಬ್ಬಂದಿ ಕಾರ್ಯದರ್ಶಿ ಡಾ. ರವೀಂದ್ರಕುಮಾರ ಭಂಡಾರಿ, ಐಕ್ಯೂಎಸಿ ಸಂಯೋಜಕ ಮಹೇಶ, ಪತ್ರಾಂಕಿತ ವ್ಯವಸ್ಥಾಪಕರಾದ ಅಜಯಸಿಂಗ ತಿವಾರಿ ಹಾಗೂ ವಿಜಯಲಕ್ಷ್ಮಿ ಬಿ., ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಗೌರವ ಉಪಸ್ಥಿತರಿದ್ದರು.

ವ್ಯಕ್ತಿತ್ವ ವಿಕಸನ, ಸಮಯ ನಿರ್ವಹಣೆ ಕುರಿತು ಉಪನ್ಯಾಸ

ಕಾರ್ಯಕ್ರಮದ ಮೊದಲ ಅಧಿವೇಶನದಲ್ಲಿ ‘ವ್ಯಕ್ತಿತ್ವ ವಿಕಸನ ಮತ್ತು ಸಮಯ ನಿರ್ವಹಣೆ’ ವಿಷಯದ ಕುರಿತು ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯ ಕಲಬುರಗಿ ಘಟಕದ ಕಾರ್ಯದರ್ಶಿ ಸಿಎ ಶಂಭುಲಿಂಗಪ್ಪ ಜ. ಅವಂಟಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಡಾ. ಶ್ರೀನಿವಾಸ ರಾಮಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಡಾ. ರವಿ ಬೌದ್ದೆ ನಿರ್ವಹಿಸಿದರು.

ಎರಡನೇ ಅಧಿವೇಶನದಲ್ಲಿ ಮಹಾವಿದ್ಯಾಲಯದ ಪರಿಚಯ, ವಿವಿಧ ಕೋರ್ಸ್‌ಗಳು ಹಾಗೂ ಘಟಕಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ವಿಜ್ಞಾನ ವಿಭಾಗದ ಡೀನ್ ಡಾ. ದವಲಪ್ಪ ಬಿ.ಎಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಮೊಹಮ್ಮದ್ ಆರಿಫ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಶಾಮಲಾ ಸ್ವಾಮಿ ನಿರ್ವಹಿಸಿದರು.

ಸಮಾರೋಪ ಸಮಾರಂಭದಲ್ಲಿ ಪರೀಕ್ಷಾ ವಿಭಾಗದ ಉಪನಿಯಂತ್ರಕ ಅಮಿತಕುಮಾರ ಬುದಿಹಾಳ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. 

 ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ವಿವಿಧ ಘಟಕಗಳ ಸಹಕಾರ

ಮಹಾವಿದ್ಯಾಲಯದ ವಿವಿಧ ಘಟಕಗಳ ಅಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಎನ್‌ಎಸ್‌ಎಸ್‌ (ಪದವಿಪೂರ್ವ ಮತ್ತು ಸ್ನಾತಕೋತ್ತರ), ಎನ್‌ಸಿಸಿ, ರೆಡ್‌ಕ್ರಾಸ್‌, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ರೋವರ್ಸ್‌ ಆ್ಯಂಡ್‌ ರೇಂಜರ್ಸ್‌, ದೈಹಿಕ ಶಿಕ್ಷಣ ವಿಭಾಗ, ವಿದ್ಯಾರ್ಥಿ ಕಲ್ಯಾಣ ವಿಭಾಗ ಹಾಗೂ ಇತರ ಘಟಕಗಳ ಪ್ರತಿನಿಧಿಗಳು ಕಾರ್ಯಕ್ರಮದ ಆಯೋಜನೆಯಲ್ಲಿ ಪಾಲ್ಗೊಂಡಿದ್ದರು.

ಡಾ.ಶ್ರೀಮಂತ ಹೋಳ್ಕರ್, ಡಾ. ಬಲಭೀಮ ಸಾಂಗ್ಲಿ, ಡಾ. ರಮೇಶ ಪೋತೆ, ಡಾ. ಶಿವಲಿಂಗಪ್ಪ ಪಾಟೀಲ, ಡಾ. ಬೆಣ್ಣೂರ ವಿಶ್ವನಾಥ, ಡಾ. ಬಸಂತ ಸಾಗರ, ಡಾ. ಮೀನಾಕ್ಷಿ ಹುಗ್ಗಿ, ಡಾ. ರವಿ ಬೌದ್ದೆ, ಡಾ. ರಬಿಯಾ ಇಫತ್, ಡಾ. ವಿಜಯಕುಮಾರ ಗೋಪಾಳೆ, ಡಾ. ಪಂಚಾಕ್ಷರಿ, ಡಾ. ಶ್ರೀದೇವಿ ರಾಠೋಡ, ಡಾ. ಶಂಕರ ರಾಠೋಡ ಹಾಗೂ ಡಾ. ಆಜ್ರಾ ಪರ್ವಿನ್, ಡಾ. ನಾಗಪ್ಪ ಗೋಗಿ, ಸೇರಿದಂತೆ ವಿವಿಧ ಘಟಕಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು.

ಮಹೇಶ ಸ್ವಾಗತಿಸಿದರು. ಡಾ. ವಿಜಯಕುಮಾರ ಸಾಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ರಾಠೋಡ ಅತಿಥಿಗಳನ್ನು ಪರಿಚಯಿಸಿದರು. ಡಾ. ಪಂಚಾಕ್ಷರಿ ವಂದನಾರ್ಪಣೆ ಸಲ್ಲಿಸಿದರು. ಡಾ. ಬಲಭೀಮ ಸಾಂಗ್ಲಿ ನಿರೂಪಿಸಿದರು.

ಮಹಾವಿದ್ಯಾಲಯದ ಎಲ್ಲ ವಿಭಾಗಗಳ ಮುಖ್ಯಸ್ಥರು, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.