ಅ.10ರಂದು ರಾಜ್ಯಮಟ್ಟದ ‘ವಿಶ್ವಕರ್ಮ ವೈಭವ ರತ್ನ’ ಹಾಗೂ ‘ಕರ್ನಾಟಕ ವೈಭವ ರತ್ನ’ ಪ್ರಶಸ್ತಿ ಪ್ರದಾನ
ಅ.10ರಂದು ರಾಜ್ಯಮಟ್ಟದ ‘ವಿಶ್ವಕರ್ಮ ವೈಭವ ರತ್ನ’ ಹಾಗೂ ‘ಕರ್ನಾಟಕ ವೈಭವ ರತ್ನ’ ಪ್ರಶಸ್ತಿ ಪ್ರದಾನ
ಬೆಂಗಳೂರು: ನಿತ್ಯೋತ್ಸವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ.) ವತಿಯಿಂದ ವಿಶ್ವಕರ್ಮ ಜಯಂತಿ ಹಾಗೂ ಗಾಂಧಿ ಜಯಂತಿ ಅಂಗವಾಗಿ ರಾಜ್ಯಮಟ್ಟದ ‘ವಿಶ್ವಕರ್ಮ ವೈಭವ ರತ್ನ’ ಹಾಗೂ ‘ಕರ್ನಾಟಕ ವೈಭವ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅ.10ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಕನ್ನಡ ಭವನದ ರವೀಂದ್ರ ಕಲಾಕ್ಷೇತ್ರ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೇಲಿ ಮಠದ ಶಿವರುದ್ರ ಸ್ವಾಮೀಜಿ ಅವರು ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಧಾರ್ಮಿಕ ಮುಖಂಡ ಡಾ. ಎಸ್. ವಾಸುದೇವ ಭಟ್ಟರ್, ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ಸುಜ್ಞಾನಮೂರ್ತಿ, ಹೈಕೋರ್ಟ್ ವಕೀಲ ಅನಂತ್ ನಾಯ್ಕ್, ಹಿರಿಯ ಲೇಖಕಿ ಇಂದಿರಾ ಕೃಷ್ಣಪ್ಪ, ಸರ್ವೋದಯ ಮಂಡಲದ ಅಧ್ಯಕ್ಷ ಡಾ. ಯ. ಚಿ. ದೊಡ್ಡಯ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಸಾಮಾಜಿಕ–ಸಾಂಸ್ಕೃತಿಕ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ.
ಸಮಾಜ, ಕಲೆ, ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ವೈದ್ಯಕೀಯ, ಕ್ರೀಡೆ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಈ ಸಂದರ್ಭದಲ್ಲಿ ‘ವಿಶ್ವಕರ್ಮ ವೈಭವ ರತ್ನ’ ಹಾಗೂ ‘ಕರ್ನಾಟಕ ವೈಭವ ರತ್ನ’ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳ ಸಾಧಕರು, ಸಮಾಜ ಸೇವಕರು, ಕಲಾವಿದರು ಹಾಗೂ ಯುವ ಪ್ರತಿಭೆಗಳು ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮವನ್ನು ಡಾ. ಗುಣವಂತ ಮಂಜು ಅವರು ನಿರೂಪಿಸಲಿದ್ದಾರೆ.
ಸಮಾಜದಲ್ಲಿ ಪ್ರತಿಭೆ ಮತ್ತು ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು, ಯುವಜನರಲ್ಲಿ ಕಾಯಕ ಸಂಸ್ಕೃತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಮನೋಭಾವ ಬೆಳೆಸುವುದು ಪ್ರಶಸ್ತಿ ಪ್ರದಾನ ಸಮಾರಂಭದ ಉದ್ದೇಶವಾಗಿದೆ ಎಂದು ಸಂಘದ ಅಧ್ಯಕ್ಷೆ ನಿತ್ಯಾ ಎಂ. ಆಚಾರ್ ತಿಳಿಸಿದ್ದಾರೆ.

