ಬೆಳಗಿನ ನಡೆ ಗ್ರಾಮಗಳ ಕಡೆ ; ಮದನೂರ ಗ್ರಾಮಕ್ಕೆ ಸಿಇಒ ಭೇಟಿ. ವಿವಿಧ ಕಾಮಗಾರಿ ಪರಿಶೀಲನೆ

ಬೆಳಗಿನ ನಡೆ ಗ್ರಾಮಗಳ ಕಡೆ ; ಮದನೂರ ಗ್ರಾಮಕ್ಕೆ ಸಿಇಒ ಭೇಟಿ. ವಿವಿಧ ಕಾಮಗಾರಿ ಪರಿಶೀಲನೆ

ಬೆಳಗಿನ ನಡೆ ಗ್ರಾಮಗಳ ಕಡೆ ; ಮದನೂರ ಗ್ರಾಮಕ್ಕೆ ಸಿಇಒ ಭೇಟಿ. ವಿವಿಧ ಕಾಮಗಾರಿ ಪರಿಶೀಲನೆ

ಕಮಲನಗರ: ಬೀದರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಗಿತ್ತೆ ಮಾಧವ್ ವಿಠ್ಠಲರಾವ್ ಅವರು ಸೋಮವಾರ ಮುಂಜಾನೆ ಬೀದರ ಜಿಲ್ಲೆಯ ಕಮಲನಗರ ತಾಲ್ಲೂಕಿನ ಮದನೂರ ಗ್ರಾಮಕ್ಕೆ ಭೇಟಿ ನೀಡಿ, ಪಿಡಿಒ ಇಲ್ಲದೇ ಇರುವುದನ್ನು ಗಮನಿಸಿ ಪಂಚಾಯತನಲ್ಲಿ‌ ಸರಿಯಾದ ಸಮಯಕ್ಕೆ ಪಿಡಿಒ ಇರಬೇಕು. ಹಾಗೂ ಎಲ್ಲ ಸಿಬ್ಬಂದಿಗಳು ಸಮಯಕ್ಕೆ ಸರಿಯಾಗಿ ಹಾಜರಿರಬೇಕೆಂದರು. ಪಿಡಿಒ ಅವರಿಗೆ ತರಾಟೆಗೆ ತೆಗೆದುಕೊಂಡರು.

ಪಂಚಾಯಿತಿ ವ್ಯಾಪ್ತಿಯಲ್ಲಿ ನಂತರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರ, ಕಲಿಕಾ ಸಾಮಗ್ರಿಗಳು ಹಾಗೂ ಕೇಂದ್ರದ ವ್ಯವಸ್ಥೆಯನ್ನು ಪರಿಶೀಲಿಸಿದರು. ಹಾಗೂ ಅಂಗನವಾಡಿಯಲ್ಲಿ ಕಂಡುಬಂದ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ, ಗ್ರಂಥಾಲಯದ ಕಟ್ಟಡ ಹಾಗೂ ಗ್ರಂಥಾಲಯದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲದಿರುವುದನ್ನು ಗಮನಿಸಿದ ಸಿಇಒ ಅವರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಗ್ರಾಮೀಣ ಭಾಗದ ಜನರು ಹಾಗೂ ವಿದ್ಯಾರ್ಥಿಗಳು ಓದು ಮತ್ತು ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಂದುವರೆದು ಮದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖತಗಾಂವ ಗ್ರಾಮದಲ್ಲಿ ನಡೆಯುತ್ತಿದ್ದ ಸಿಸಿಟಿ ಕಾಮಗಾರಿಯನ್ನು ವೀಕ್ಷಿಸಿ, ಸಿಇಓ ಅವರೇ ಸ್ಥಳದಲ್ಲೇ ಸ್ವತಃ ಮಣ್ಣು ಅಗೆದು ಬುಟ್ಟಿಗೆ ತುಂಬುವ ಮೂಲಕ ಕೂಲಿ ಕಾರ್ಮಿಕರಿಗೆ ಉತ್ತೇಜನ ನೀಡಿದರು. 

ಈ ವೇಳೆ ಕೂಲಿ ಕಾರ್ಮಿಕರೊಂದಿಗೆ ಕಾಮಗಾರಿ ಕುರಿತು ಚರ್ಚಿಸಿ, ಅವರ ಸಮಸ್ಯೆಗಳು ಹಾಗೂ ಬೇಡಿಕೆಗಳನ್ನು ಆಲಿಸಿ, ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೂಲಿ ಪಾವತಿ ತಡವಾಗಿದ್ದು, ಈಗಷ್ಟೇ ಸಮಸ್ಯೆ ಬಗೆಹರಿದಿದೆ. ಸರಿಯಾದ ಸಮಯಕ್ಕೆ ತಮ್ಮೆಲ್ಲರಿಗೂ ಕೂಲಿ ಕೊಡಲಾಗುವುದು. ಇನ್ನು ಹೆಚ್ಚಿನ ಜನರನ್ನು ಕೂಲಿ ಕೆಲಸಕ್ಕೆ ಕರೆದುಕೊಂಡು ಬನ್ನಿ ಕೂಲಿ ಪಾವತಿ ಬಗ್ಗೆ ಯಾವುದೇ ಆತಂಕ ಪಡಬೇಡಿ. ಸಮಯಕ್ಕೆ ಸರಿಯಾಗಿ ನೀಡಲಾಗುವುದು ಎಂದು ಕೂಲಿಕಾರರಿಗೆ ಭರವಸೆ ನೀಡಿದರು‌‌. 

ಕಮಲನಗರ ತಾಲೂಕಿನ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಊಟದ ಗುಣಮಟ್ಟ, ಕುಡಿಯುವ ನೀರು ಹಾಗೂ ಶೌಚಾಲಯಗಳ ಸ್ವಚ್ಛತೆ ಕುರಿತು ಪರಿಶೀಲಿಸಿದರು. ಕೋಣೆಗಳಿಗೆ ತೆರಳಿ ಮೂಲಸೌಕರ್ಯಗಳ ಬಗ್ಗೆ ಮಾಹಿತಿ ಪಡೆದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಶೈಕ್ಷಣಿಕ ಪ್ರಗತಿ ಹಾಗೂ ವಸತಿ ನಿಲಯದಲ್ಲಿನ ಸೌಲಭ್ಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾಯ ಕೌಟಗೆ, ಪಿಡಿಒ ಅನಿತಾ, ಡಿಇಒ ಮಹೇಶ, ಬಿಲ್ ಕಲೆಕ್ಟರ್ ರಾಹುಲ್, ಟಿಎ ವಿರೂಪಾಕ್ಷ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಇತರರು ಇದ್ದರು.