ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ಸಿದ್ಧಗೊಳಿಸುವುದು ಶಿಕ್ಷಕರ ಹೊಣೆ: ಶಾಸಕ ಪ್ರಭು ಚವ್ಹಾಣ

ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ಸಿದ್ಧಗೊಳಿಸುವುದು ಶಿಕ್ಷಕರ ಹೊಣೆ: ಶಾಸಕ ಪ್ರಭು ಚವ್ಹಾಣ

ಶಿಕ್ಷಕರ ದಿನ: ಔರಾದ(ಬಿ), ಕಮಲನಗರದ 3.5 ಸಾವಿರ ಶಿಕ್ಷಕರಿಗೆ ಶಾಸಕರಿಂದ ಗೌರವ

ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನು ಸಿದ್ಧಗೊಳಿಸುವುದು ಶಿಕ್ಷಕರ ಹೊಣೆ: ಶಾಸಕ ಪ್ರಭು ಚವ್ಹಾಣ

ಕಮಲನಗರ:ಶಿಕ್ಷಕರ ದಿನಾಚರಣೆಯ ಅಂಗವಾಗಿ ಔರಾದ(ಬಿ) ಶಾಸಕರು ಹಾಗೂ ಮಾಜಿ ಸಚಿವರಾದ ಪ್ರಭು ಬಿ. ಚವ್ಹಾಣ ಅವರು ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕುಗಳ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ-ಕಾಲೇಜುಗಳು, ಐಟಿಐ ಹಾಗೂ ಡಿಪ್ಲೋಮಾ ಸೇರಿದಂತೆ ವಿವಿಧ ಶಿಕ್ಷಣ ಸಂಸ್ಥೆಗಳ ಸುಮಾರು 3.5 ಸಾವಿರ ಶಿಕ್ಷಕರನ್ನು ಸೆ.18ರಂದು ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಶಾಲು ಹೊದಿಸಿ, ಹೂಹಾರ ಹಾಕಿ, ಉಡುಗೊರೆ ನೀಡಿ ಆತ್ಮೀಯವಾಗಿ ಗೌರವಿಸಿದರು.

ವಿಭಾಗವಾರು ಶಿಕ್ಷಕರು ವೇದಿಕೆಗೆ ಆಗಮಿಸಿ ಶಾಸಕರಿಂದ ಸನ್ಮಾನ ಸ್ವೀಕರಿಸಿ ಸಂತೋಷಪಟ್ಟರು. ಶಿಕ್ಷಕರ ಸೇವೆಯನ್ನು ಸ್ಮರಿಸಿ, ದೊಡ್ಡ ಸಂಖ್ಯೆಯ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿರುವುದು ಕಾರ್ಯಕ್ರಮದ ಪ್ರಮುಖ ವಿಶೇಷತೆಯಾಗಿತ್ತು.

ಈ ವೇಳೆ ಮಾತನಾಡಿದ ಶಾಸಕ ಪ್ರಭು ಬಿ.ಚವ್ಹಾಣ ಅವರು, ಶಿಕ್ಷಕರು ಸಮಾಜದ ಭವಿಷ್ಯವನ್ನು ರೂಪಿಸುವ ಶಿಲ್ಪಿಗಳಾಗಿದ್ದು, ಅವರ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಔರಾದ(ಬಿ) ಹಾಗೂ ಕಮಲನಗರ ತಾಲ್ಲೂಕಿನ ಎಲ್ಲ ವರ್ಗದ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಸರ್ಕಾರಿ ಶಾಲೆಗಳ ಶಿಕ್ಷಕರ ಜೊತೆಗೆ ಅನುದಾನಿತ, ಅನುದಾನ ರಹಿತ ಶಾಲಾ-ಕಾಲೇಜುಗಳು, ಐಟಿಐ ಮತ್ತು ಡಿಪ್ಲೋಮಾ ಸಂಸ್ಥೆಗಳ ಶಿಕ್ಷಕರೂ ಸೇರಿದಂತೆ ಎಲ್ಲ ಶಿಕ್ಷಕರನ್ನು ಗೌರವಿಸಿರುವುದು ಶಿಕ್ಷಕರ ಮೇಲಿನ ಗೌರವದ ಪ್ರತೀಕವಾಗಿದೆ ಎಂದರು.

ಎಲ್ಲ ರಂಗಗಳ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿಯಾಗಿದೆ. ಶಿಕ್ಷಣವಿಲ್ಲದೆ ಸಮಾಜದ ಪ್ರಗತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ. ಇದಕ್ಕೆ ಶಿಕ್ಷಕರೆಲ್ಲ ಕೈಜೋಡಿಸಬೇಕು. ಇನ್ನಷ್ಟು ಶ್ರದ್ದೆಯಿಂದ ಕೆಲಸ ಮಾಡಬೇಕು. ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಫಲಿತಾಂಶ ಶೇ.100ರಷ್ಟು ತರಲು ಯತ್ನಿಸಬೇಕು ಎಂದು ಹೇಳಿದರು.

ತಾವು ಕೇವಲ ಭಾಷಣ ಮಾಡುವುದಕ್ಕೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅನುಕೂಲವಾಗುವಂತೆ ಪ್ರಾಯೋಗಿಕವಾಗಿ ಕೆಲಸ ಮಾಡುತ್ತಿದ್ದೇನೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ತಮ್ಮ ಜನ್ಮದಿನದ ಸಂದರ್ಭದಲ್ಲಿ ಕ್ಷೇತ್ರದ ಎಲ್ಲ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ನೋಟ್‌ಬುಕ್‌ಗಳನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು, ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ ಶಿಕ್ಷಕರಿಗೆ ಅಗತ್ಯ ಸಹಕಾರ ನೀಡುವುದು ತಮ್ಮ ಆದ್ಯತೆಯಾಗಿದೆ ಎಂದು ಹೇಳಿದರು.

ಶಾಸಕನಾದ ನಂತರ ಕ್ಷೇತ್ರದ ಗ್ರಾಮಗಳಿಗೆ ಭೇಟಿ ನೀಡಿ ಶಾಲಾ-ಕಾಲೇಜುಗಳ ಸ್ಥಿತಿಗತಿಯನ್ನು ಖುದ್ದಾಗಿ ಅರಿತುಕೊಂಡು, ಅಗತ್ಯಕ್ಕೆ ಅನುಗುಣವಾಗಿ ಅನುದಾನ ಒದಗಿಸಿ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ವಸತಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ನಿರಂತರವಾಗಿ ಸನ್ಮಾನಿಸಿ ಪ್ರೋತ್ಸಾಹಿಸುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಕಂಡುಬಂದಿದ್ದು, ವಿದ್ಯಾರ್ಥಿಗಳ ಫಲಿತಾಂಶದಲ್ಲಿಯೂ ಇದರ ಪರಿಣಾಮ ಕಾಣಿಸುತ್ತಿದೆ ಎಂದರು.

ಇಂದಿನದು ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಆಧಾರಿತ ಯುಗವಾಗಿದೆ. ಕಾಲಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾವಣೆ ಅಗತ್ಯವಿದೆ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕದ ಶಿಕ್ಷಣದ ಜೊತೆಗೆ ತಾಂತ್ರಿಕ ಜ್ಞಾನ, ಡಿಜಿಟಲ್ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಾದ ಮಾರ್ಗದರ್ಶನ ನೀಡಬೇಕು. ನಮ್ಮ ಕ್ಷೇತ್ರದ ಮಕ್ಕಳು ಕೂಡ ಭವಿಷ್ಯದಲ್ಲಿ ಐಎಎಸ್, ಐಪಿಎಸ್, ವೈದ್ಯರು, ಇಂಜಿನಿಯರ್‌ಗಳು ಸೇರಿದಂತೆ ಉನ್ನತ ಹುದ್ದೆಗಳಿಗೆ ಏರುವಂತೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಪ್ರಭು ಬಿ. ಚವ್ಹಾಣ ಹೇಳಿದರು.

ಶಿಕ್ಷಕರಿಗೆ ಜಗತ್ತಿನಲ್ಲಿಯೇ ಅತ್ಯಂತ ಗೌರವದ ಸ್ಥಾನಮಾನ ನೀಡಲಾಗಿದೆ. ಸಮಾಜ ಶಿಕ್ಷಕರನ್ನು ಗೌರವದಿಂದ ಕಾಣುವಂತೆಯೇ ಶಿಕ್ಷಕರು ಕೂಡ ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಶಿಕ್ಷಕರ ನಡೆ-ನುಡಿ, ಶಿಸ್ತು, ಜ್ಞಾನ ಹಾಗೂ ಸೇವಾ ಮನೋಭಾವವನ್ನು ಕಂಡು ಮಕ್ಕಳು ಅವರನ್ನು ತಮ್ಮ ರೋಲ್ ಮಾಡಲ್ ಆಗಿ ಪರಿಗಣಿಸುವಂತಿರಬೇಕು ಎಂದು ಸಲಹೆ ನೀಡಿದರು. ಅಲ್ಲದೇ ಔರಾದ(ಬಿ) ಕ್ಷೇತ್ರದ ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ಈಗಾಗಲೇ 50 ಲಕ್ಷ ಅನುದಾನ ಮಂಜೂರು ಮಾಡಿಸಿದ್ದೇನೆ. ಶೀಘ್ರ ಆರಂಭಿಸಲಾಗುವುದು. ಶಿಕ್ಷಕರ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುವುದೆಂದು ತಿಳಿಸಿದರು.

ಈ ವೇಳೆ ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದೇವರು ಮಾತನಾಡಿ, ಶಿಕ್ಷಣದ ಕ್ಷೇತ್ರದ ಅಭಿವೃದ್ಧಿಯಿಂದ ಎಲ್ಲ ರಂಗಗಳಲ್ಲಿ ಬೆಳವಣಿಗೆ ಸಾಧಿಸಬಹುದೆಂದು ಅರಿತಿರುವ ಶಾಸಕ ಪ್ರಭು ಚವ್ಹಾಣ ಅವರು ಮಾಡುತ್ತಿರುವ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಸನ್ಮಾನ, ನೋಟ್‌ಬುಕ್ ವಿತರಣೆಯಂತಹ ಕಾರ್ಯಕ್ರಮಗಳು ಮಾದರಿ ಮತ್ತು ಅನುಕರಣೀಯ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯರಾದ ಶಶೀಲ್ ಜಿ.ನಮೋಶಿ ಅವರು ಮಾತನಾಡಿ, ಶಿಕ್ಷಕರ ಅಭಿವೃದ್ಧಿಗೆ ನಿರಂತರ ಪ್ರಯತ್ನಿಸುತ್ತಿದ್ದು, ಎಲ್ಲ ಬೇಡಿಕೆಗಳನ್ನು ಈಡೇರಿಸಲು ನಿರಂತರ ಪ್ರಯತ್ನಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ರವಿ ಸುಕುಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ ರಾಠೋಡ, ಇಸಿಓ ಹಾಗೂ ನೋಡಲ್ ಅಧಿಕಾರಿ ಸಂಜಯ ಮೇತ್ರೆ, ದೈಹಿಕ ಶಿಕ್ಷಣ ಪರಿವೀಕ್ಷಕ ಸಿದ್ದಾರೆಡ್ಡಿ, ಪ್ರಮುಖರಾದ ಧೊಂಡಿಬಾ ನರೋಟೆ, ಶಿವಾಜಿ ಪಾಟೀಲ ಮುಂಗನಾಳ, ಸಂತೋಷಕುಮಾರ ಪೂಜಾರಿ, ಲಕ್ಷö್ಮಣ ತುರೆ, ನರೇಂದ್ರ, ಪಂಢರಿ ಆಡೆ, ವಿಶ್ವನಾಥ ಬಿರಾದಾರ, ರವೀಂದ್ರರೆಡ್ಡಿ ಮಾಲಿ ಪಾಟೀಲ, ಮೆಹಬೂಬ್ ಪಟೇಲ್, ಪ್ರಭುಲಿಂಗ ತುಗಾವೆ, ರಾಮಶೆಟ್ಟಿ ಕೆಂಚಾ, ಗಜಾನನ್ ಮಳ್ಳಾ, ಗುರುನಾಥ ದೇಶಮುಖ, ವಿಜಯಕುಮಾರ ನುದನೂರೆ, ಮಹಾದೇವ ಚಿಟಗೇರೆ, ಸೂರ್ಯಕಾಂತ ಬಿರಾದಾರ, ಗುರುನಾಥ ರೆಡ್ಡಿ, ಮಹಾದೇವ ಘೂಳೆ, ರಾಜಕುಮಾರ ಡೊಂಗ್ರೆ, ಸಂಜೀವ ಶೆಟಕಾರ, ಕೃಷ್ಣಾ ಪಾಟೀಲ, ಎಂ.ಡಿ ನಯೀಮ್, ವಿಲಾಸ ಮೇತ್ರೆ, ಬಾಲಾಜಿ ಅಮರವಾಡಿ, ಉಮಾಕಾಂತ ಮಹಾಗಾಂವ, ಬಸವರಾಜ ಶೆಟಕಾರ, ರವಿ ಡೋಳೆ, ಸಂತೋಷ ರೆಡ್ಡಿ ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

 ಭವ್ಯ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದಲ್ಲಿ ಮಾಜಿ ರಾಷ್ಟ್ರಪತಿ, ಖ್ಯಾತ ಶಿಕ್ಷಣ ತಜ್ಞರಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. 

ಮೆರವಣಿಗೆ ಬಸವೇಶ್ವರ ವೃತ್ತದಲ್ಲಿ ಆರಂಭಗೊಂಡು ಬಸ್ ನಿಲ್ದಾಣ, ಎಪಿಎಂಸಿ ವೃತ್ತ, ಡಾ.ಚನ್ನಬಸವ ಪಟ್ಟದೇವರು ವೃತ್ತದ ಮಾರ್ಗವಾಗಿ ಕಾರ್ಯಕ್ರಮದ ಸ್ಥಳಕ್ಕೆ ಬಂದು ಕೊನೆಗೊಂಡಿತು. ಮೆರವಣಿಗೆಯುದ್ದಕ್ಕೂ ಶಿಕ್ಷಕರು ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಶಿಕ್ಷಕರ ಮೇಲೆ ಹೂಮಳೆ ಸುರಿಸಿ ಗೌರವಿಸಲಾಯಿತು.