ಹರಿದಾಸ ಹೃದಯ ಆಸ್ಪತ್ರೆ ಹಾಗೂ ಶರಣ ನೇತ್ರಾಲಯದ ಸಹಯೋಗದಲ್ಲಿ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಹರಿದಾಸ ಹೃದಯ ಆಸ್ಪತ್ರೆ ಹಾಗೂ ಶರಣ ನೇತ್ರಾಲಯದ ಸಹಯೋಗದಲ್ಲಿ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ
ಕಲಬುರಗಿ: ಶ್ರೀ ಅಣ್ಣಾರಾವ್ ಹರಿದಾಸ ಅವರ ಪುಣ್ಯತಿಥಿಯ ಅಂಗವಾಗಿ ಹರಿದಾಸ ಹೃದಯ ಆಸ್ಪತ್ರೆ ಹಾಗೂ ಶರಣ ನೇತ್ರಾಲಯದ ಸಹಯೋಗದಲ್ಲಿ ಅಫಜಲಪೂರ ತಾಲೂಕಿನ ದೇವಲ್ ಗಣಗಾಪುರದ ಸಂಗಮ್ ರಸ್ತೆಯ ಗುಳವಾಣಿ ಮಹಾರಾಜ ಮಠದಲ್ಲಿ ಉಚಿತ ಮೆಗಾ ಆರೋಗ್ಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಎಮ್.ವೈ. ಪಾಟೀಲ್ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ಆರೋಗ್ಯ ಶಿಬಿರಗಳು ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ಹೇಳಿದರು.
ಹಿರಿಯ ಹೃದಯ ತಜ್ಞ ಡಾ. ಅರುಣಕುಮಾರ ಹರಿದಾಸ್ ಮಾತನಾಡಿ, ಆರೋಗ್ಯದ ಕಡೆ ಜನರು ಹೆಚ್ಚಿನ ಗಮನ ಹರಿಸಬೇಕು ಹಾಗೂ ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು.
ಈ ಶಿಬಿರದಲ್ಲಿ ವಿವಿಧ ಕ್ಷೇತ್ರಗಳ ತಜ್ಞ ವೈದ್ಯರು ಭಾಗವಹಿಸಿ ಸಾರ್ವಜನಿಕರಿಗೆ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಿದರು. ಹಿರಿಯ ಹೃದಯ ತಜ್ಞ ಡಾ. ಅರುಣಕುಮಾರ ಹರಿದಾಸ್, ಮಕ್ಕಳ ತಜ್ಞ ಡಾ. ಕಿರಣ ಹರಿದಾಸ್, ಶರಣ ನೇತ್ರಾಲಯದ ಕಣ್ಣಿನ ತಜ್ಞ ಡಾ. ರೋಹಿತ ಪಾಟೀಲ್, ಶ್ವಾಸಕೋಶ ತಜ್ಞ ಡಾ. ಹರ್ಷ ಮೂರ್ತಿ, ಡಾ.ಮಹೇಶ ಗಾಯಕವಾಡ ಅವರು ತಪಾಸಣೆ ನಡೆಸಿದರು. ನಂತರ ಎಲ್ಲಾ ವೈದ್ಯರನ್ನು ಸನ್ಮಾನಿಸಲಾಯಿತು.
ಶಿಬಿರದಲ್ಲಿ ಹೃದಯ, ಶ್ವಾಸಕೋಶ ಹಾಗೂ ಕಣ್ಣಿನ ಕಾಯಿಲೆಗಳ ತಪಾಸಣೆ ನಡೆಸಲಾಯಿತು. ಮಕ್ಕಳಿಗೆ ವಿಶೇಷ ತಪಾಸಣೆ ಮತ್ತು ಸಲಹೆ ನೀಡಲಾಯಿತು. ಜೊತೆಗೆ ರಕ್ತದೊತ್ತಡ (ಬಿಪಿ), ರಕ್ತದಲ್ಲಿನ ಸಕ್ಕರೆ ಮಟ್ಟ ಹಾಗೂ ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು.
ದೇವಲ್ ಗಣಗಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ೨೫೦ಕ್ಕೂ ಹೆಚ್ಚು ಜನರು ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿಗಳನ್ನು ಪಡೆದರು.
ಈ ಶಿಬಿರವನ್ನು ಡಾ. ಅರುಣಕುಮಾರ್ ಹರಿದಾಸ್, ಶ್ರೀಮತಿ ಕೋಮಲೇಶ್ವರಿ ಹರಿದಾಸ್, ಶ್ರೀ ವಿಜಯಕುಮಾರ ಹರಿದಾಸ್ ಅವರ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿತ್ತು. ಸ್ಥಳೀಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.
