ಗಜೇಂದ್ರಗಡ: ತಾಲೂಕು ಆಸ್ಪತ್ರೆ ಸ್ವಚ್ಛಗೊಳಿಸುವ ಮೂಲಕ ವಿನೂತನ ಶಿಕ್ಷಕರ ದಿನಾಚರಣೆ
ಗಜೇಂದ್ರಗಡ: ತಾಲೂಕು ಆಸ್ಪತ್ರೆ ಸ್ವಚ್ಛಗೊಳಿಸುವ ಮೂಲಕ ವಿನೂತನ ಶಿಕ್ಷಕರ ದಿನಾಚರಣೆ
ಗಜೇಂದ್ರಗಡ: ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ 138ನೇ ಜಯಂತ್ಯುತ್ಸವ ಹಾಗೂ ಶಿಕ್ಷಕರ ದಿನಾಚರಣೆಯ ಅಂಗವಾಗಿ ಗಜೇಂದ್ರಗಡ ತಾಲೂಕು ಶಿಕ್ಷಕರ ಸಂಘದ ವತಿಯಿಂದ ತಾಲೂಕು ಆಸ್ಪತ್ರೆಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಈ ಬಾರಿಯ ಶಿಕ್ಷಕರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕರ್ನಾಟಕ ವಿಧಾನಸಭೆಯ ಅಧ್ಯಕ್ಷರು ಹಾಗೂ ಮಾನ್ಯ ಶಾಸಕರಾದ ಶ್ರೀ G S ಪಾಟೀಲ್ ಅವರ ಆಶಯ ಮತ್ತು ಮಾರ್ಗದರ್ಶನದಲ್ಲಿ ಈ ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಗ್ಯಾರಂಟಿ ಯೋಜನೆಯ ತಾಲೂಕು ಸಮಿತಿ ಅಧ್ಯಕ್ಷರಾದ ಶ್ರೀ ಮಿಥುನ್ ಜಿ. ಪಾಟೀಲ್ ನೆರವೇರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗಜೇಂದ್ರಗಡ ತಾಲೂಕಿನ ಸಮಸ್ತ ಶಿಕ್ಷಕರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿ ಆಸ್ಪತ್ರೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಬಸವರಾಜ ಬಿ. ಕುರಿ ಅವರು ಮಾತನಾಡಿ, ಶ್ರಮದಾನದ ಮೂಲಕ ದಿನಾಚರಣೆಗೆ ಸಹಕರಿಸಿದ ಎಲ್ಲಾ ಗುರು-ಗುರುಮಾತೆಯರಿಗೂ, ವಿವಿಧ ಸಂಘಟನೆಗಳ ಪದಾಧಿಕಾರಿಗಳಿಗೂ ಹಾಗೂ ಅಧಿಕಾರಿ ವರ್ಗದವರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ

