ಪುರಾಣ ವೇದಿಕೆಯಲ್ಲಿ ಪಟ್ಟಾಧಿಕಾರ ಸಂದರ್ಭದ ಸಂಭ್ರಮಾಚರಣೆ
ಪುರಾಣ ವೇದಿಕೆಯಲ್ಲಿ ಪಟ್ಟಾಧಿಕಾರ ಸಂದರ್ಭದ ಸಂಭ್ರಮಾಚರಣೆ
ಕಲಬುರಗಿ: ನಗರದ ಬಸವೇಶ್ವರ ಆಸ್ಪತ್ರೆ ಎದುರಿನ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ನಡೆದ ಮುತ್ಯಾನ ಬಬಲಾದ ಪುರಾಣ ಕಾರ್ಯಕ್ರಮದಲ್ಲಿ ಗುರು ಚನ್ನವೀರ ಮಹಾಸ್ವಾಮಿಗಳ ಪಟ್ಟಾಧಿಕಾರ ಸಂದರ್ಭವನ್ನು ಸಂಭ್ರಮದಿಂದ ಆಚರಿಸಲಾಯಿತು.
ಹರ-ಗುರು, ಚರಮೂರ್ತಿಗಳು ಹಾಗೂ ಗ್ರಾಮದ ಹಿರಿಯರ ನೇತೃತ್ವದಲ್ಲಿ ಚಿಕ್ಕ ಬಾಲಕನಿಗೆ ಗುರುಗಳ ವೇಷಧರಿಸಿ, ಇಬ್ಬರು ಗುರುಗಳ ತಂದೆ-ತಾಯಿಯರು ಹಾಗೂ ವಿವಿಧ ಗ್ರಾಮಗಳ ಹಿರಿಯ ಗೌಡರ ಪಾತ್ರಧಾರಿಗಳನ್ನು ವೇದಿಕೆಗೆ ಕರೆತಂದು, ವಿಧಿ-ವಿಧಾನದಂತೆ ಶ್ರೀಗಳ ಅಮೃತ ಹಸ್ತದಿಂದ ಪಟ್ಟಾಧಿಕಾರ ನೆರವೇರಿಸಲಾಯಿತು. ವೇಷಧಾರಿ ಬಾಲಕ ಜೋಳಿಗೆ ಹಿಡಿದು ಭಕ್ತರ ನಡುವೆ ಸಾಗಿದ ದೃಶ್ಯ ನೂರಾರು ಭಕ್ತರ ಕಣ್ಮನ ಸೆಳೆಯಿತು. ಈ ವೇಳೆ ಭಕ್ತರು ಜೈಕಾರ ಹಾಗೂ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು ಎಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಮಾರ ದೇವರಾಜ ತೋಟ್ನಳ್ಳಿ ಅವರು ಚನ್ನವೀರ ಮಹಾಸ್ವಾಮಿಗಳ ಪಾತ್ರದಲ್ಲಿ, ಅಣವೀರಪ್ಪ ಮುಗಳಿ ಅವರು ತಂದೆಯ ಪಾತ್ರದಲ್ಲಿ, ಶ್ರೀಮತಿ ವಿಶಾಲಾಕ್ಷಿ ಮಾಯಣ್ಣನವರ್ ಅವರು ತಾಯಿಯ ಪಾತ್ರದಲ್ಲಿ, ವೆ.ಮೂ. ವೀರಯ್ಯ ಶಾಸ್ತ್ರೀ ಹಿರೇಮಠ ಗದಗ ಅವರು ಹಿರೇಮಠದ ಪಾತ್ರದಲ್ಲಿ, ಪೂಜ್ಯ ದುಧನಿ ಮಹಾಸ್ವಾಮಿಗಳ ಪಾತ್ರದಲ್ಲಿ ಗಂಗಾಧರ್ ಸ್ವಾಮಿ ಅಗ್ಗಿಮಠ, ಪೂಜ್ಯ ಬಂಥನಾಳ ಶಿವಯೋಗಿಗಳ ಪಾತ್ರದಲ್ಲಿ ಸಂಗಣ್ಣ ಚೋರಗಸ್ತಿ, ಭೀಮಳ್ಳಿ ಬಬಲಾದ ಸಿದ್ದಣಗೌಡರ ಪಾತ್ರದಲ್ಲಿ ಬಾಲರೆಡ್ಡಿ ಪಾಕಲ್, ಮಹಾಗಾಂವ ಮಹಾರುದ್ರಪ್ಪ ಗೌಡರ ಪಾತ್ರದಲ್ಲಿ ಸಿದ್ದಣ್ಣ ಕಮಟಿ, ಗೌಡಗಾಂವ ಗೌಡರ ಪಾತ್ರದಲ್ಲಿ ಮಲ್ಲಿನಾಥ ತಂಬಾಕೆ ಹಾಗೂ ಕೊಟ್ಟರಕಿ ಗೌಡರ ಪಾತ್ರದಲ್ಲಿ ನೂರೋಂದಪ್ಪ ಧಾರಕ್, ಬಬಲಾದ ಬಸಣ್ಣಗೌಡರ ಪಾತ್ರದಲ್ಲಿ ಉಪಸ್ಥಿತರಿದ್ದು ಪಟ್ಟಾಧಿಕಾರ ಸಮಾರಂಭಕ್ಕೆ ಸಾಕ್ಷಿಯಾದರು.
ಅಕ್ಕಮಹಾದೇವಿ ಮಹಿಳಾ ಟ್ರಸ್ಟ್ ವತಿಯಿಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಸಮಾರಂಭದಲ್ಲಿ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಕಲಾವಿದರಾದ ಶಿವಕುಮಾರ ಹಿರೇಮಠ ಜಾಲಹಳ್ಳಿ, ಅಡಿವೇಶಕುಮಾರ ಗೋಕಾಕ, ಸುಭಾಷ ಮಂಠಾಳೆ, ವಿಶ್ವನಾಥ ರಟಕಲ್, ರಾಜಶೇಖರ್ ತಂಬಾಕೆ, ಆದಪ್ಪ ಸಿಕೇದ, ತರುಣಶೇಖರ್ ಬಿರಾದಾರ, ಮಧು ಹಿಂದೊಡ್ಡಿ, ರೇಖಾ ಅಂಡಗಿ, ತಾರಾ ಪಾಟೀಲ, ರತ್ನಮ್ಮ ನಿಂಬೂರ, ವಿಜಯಲಕ್ಷ್ಮಿ ರಟಕಲ್, ರಾಜೇಶ್ವರಿ ಕಂಠಿ, ಶರಣಮ್ಮ ಬೀದಿಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

